ಹತಾಶೆಗೊಳಗಾಗಿ ಹುಸಿ ಬಾಂಬ್ ಕರೆ ಮಾಡಿದ್ದನಂತೆ ಈತ?

Threaten call to airport: accused arrested

29-08-2018

ಬೆಂಗಳೂರು: ಹೆಚ್ಚಿನ ಸಂಬಳ ಸಿಗದೇ ಹತಾಶೆಗೊಳಗಾಗಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ( ಕೆಐಎಎಲ್)ಕ್ಕೆ ಬಾಂಬ್ ಇಡಲಾಗಿದೆ ಎಂದು ಹುಸಿ ಕರೆ ಮಾಡಿ ತಲೆ ನೋವಾಗಿ ಪರಿಗಣಿಸಿದ್ದ ಕರಾವಳಿ ಮೂಲದ ಎಂಜಿನಿಯರ್‍ ನನ್ನು ದೇವನಹಳ್ಳಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮಣಿಪಾಲ ಮೂಲದ ಆದಿತ್ಯ ರಾವ್ (34) ಬಂಧಿತ ಆರೋಪಿಯಾಗಿದ್ದಾನೆ. ಕಳೆದ 15 ದಿನಗಳಲ್ಲಿ ಎರಡು ಬಾರಿ ಟರ್ಮಿನಲ್ ಮ್ಯಾನೇಜರ್‍ ಗೆ ಕರೆ ಮಾಡಿ ಬಾಂಬ್ ಇದೆ ಎಂದು ಬೆದರಿಕೆ ಹಾಕಿದ್ದ ಆರೋಪಿಯನ್ನು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸಲಾಗಿದೆ.

ಮೊದಲು ಏರ್ ಪೋರ್ಟ್‍ಗೆ ಕರೆ ಮಾಡಿ ಪಾರ್ಕಿಂಗ್‍ನಲ್ಲಿ ಬಾಂಬ್ ಇದೆ ಬೆದರಿಸಿದ್ದ ಆದಿತ್ಯ ರಾವ್, ಮತ್ತೆ ಕರೆ ಮಾಡಿ ಪಾರ್ಕಿಂಗ್ ಹೋಗುವ ದಾರಿಯಲ್ಲಿ ಬಾಂಬ್ ಇದೆ ಎಂದು ಹೇಳಿದ್ದ. ಈತನ ಬೆದರಿಕೆ ಕರೆಯಿಂದ ವಿಮಾನ ನಿಲ್ದಾಣದಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಎರಡು ದಿನ ಬಿಟ್ಟು ರೈಲು ನಿಲ್ದಾಣಕ್ಕೆ ಕರೆ ಮಾಡಿ ರೈಲಿನಲ್ಲಿ ಬಾಂಬ್ ಇದೆ ಎಂದು ಬೆದರಿಸಿ ತದನಂತರ ಏರ್ ಪೋರ್ಟ್‍ಗೆ ಮತ್ತೆ ಕರೆ ಮಾಡಿ ವಿಮಾನದಲ್ಲಿಯೇ ಬಾಂಬ್ ಇದೆ ಎಂದು ಬೆದರಿಸಿದ್ದ.

ದೇವನಹಳ್ಳಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸರಿಗೆ ಸಿಕ್ಕಿಬಿದ್ದಿರುವ ಆರೋಪಿಯ ಹೆಚ್ಚಿನ ವಿಚಾರಣೆಯ ವೇಳೆ ಬೆಂಗಳೂರು ಸಿಟಿ ರೈಲ್ವೆ ನಿಲ್ದಾಣಕ್ಕೂ  ಬೆದರಿಕೆ ಕರೆ ಮಾಡಿದ್ದು ನಾನೇ ಎಂದು ತಪ್ಪೊಪ್ಪಿಕೊಂಡಿದ್ದಾನೆ. ಆದಿತ್ಯ ರಾವ್ ಬಿ.ಇ. ಮತ್ತು ಎಂಬಿಎ ಪದವಿ ಮುಗಿಸಿ ತಿಂಗಳ ಹಿಂದಷ್ಟೇ ಕೆಐಎಎಲ್‍ನಲ್ಲಿ ಕೆಲಸಕ್ಕೆ ಸೇರಿದ್ದು, ಅಲ್ಲಿನ ಅಧಿಕಾರಿಗಳು ತನ್ನನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ ಎಂದು ಕೆಲಸ ಬಿಟ್ಟಿದ್ದ.

ಇದೇ ಕೋಪಕ್ಕೆ ಬೆದರಿಕೆ ಕರೆ ಮಾಡಿದ್ದಾಗಿ ಹೇಳಿಕೆ ನೀಡಿದ್ದಾನೆ. ಕೆಐಎಎಲ್ ಪೊಲೀಸರು ಆದಿತ್ಯ ರಾವ್‍ನ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಈತನ ಮೇಲೆ ಬೆಂಗಳೂರಿನಲ್ಲೇ ಹಲವಾರು ಕೇಸ್‍ಗಳಿವೆ ಎಂಬ ಮಾಹಿತಿ ಲಭ್ಯವಾಗಿದೆ ಎಂದು ಡಿಸಿಪಿ ಕಲಾಕೃಷ್ಣಸ್ವಾಮಿ ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Air port bomp ಕೆಐಎಎಲ್‍ ಅಂತರಾಷ್ಟ್ರೀಯ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ