ಗಾಂಜಾ ಹಾಡು ಬಗ್ಗೆ ಚಂದನ್ ಶೆಟ್ಟಿ ಸ್ಪಷ್ಟನೆ!

Chandan Shetty clarifies on Ganja song!

28-08-2018

ಬೆಂಗಳೂರು: ‘ಅಂತ್ಯ ಸಿನೆಮಾದ ನನ್ನ ಗಾಯನದ ಹಾಡು ಮಾದಕ ವಸ್ತು ಸೇವನೆಗೆ ಪ್ರಚೋದನೆ ನೀಡುತ್ತದೆ ಎನ್ನುವುದು ನನಗೆ ಗೊತ್ತಿರಲಿಲ್ಲ ಈ ಹಾಡನ್ನು ನೋಡಿ ಯಾರೂ ಪ್ರಚೋದನೆಗೆ ಒಳಗಾಗಬೇಡಿ’ ಎಂದು ಬಿಗ್‍ ಬಾಸ್ ಖ್ಯಾತಿಯ ಗಾಯಕ ಚಂದನ್‍ ಶೆಟ್ಟಿ ಮನವಿ ಮಾಡಿದ್ದಾರೆ.

ಅಂತ್ಯ ಚಿತ್ರದ ನಿರ್ದೇಶಕರು ನನಗೆ ಸಿನೆಮಾದಲ್ಲಿ ‘ಬಿಟ್ಟು ಬಿಡ್ರಿ ಸಿಗರೇಟು ತಂಬಾಕು ಬೀಡಿ... ಹಚ್ಚಿಬಿಡ್ರಿ ಗಾಂಜಾ ತೇಲುತ್ತದೆ ಬಾಡಿ...’ ಎನ್ನುವ ಸಾಹಿತ್ಯ ಬರೆದಿದ್ದ ಗೀತೆಯನ್ನು ಹಾಡಲು ಹೇಳಿದ್ದರಿಂದ ನಾನು ಹಾಡಿದ್ದೇನೆ. ಇಂತಹ ಹಾಡಿನಿಂದ ಯುವ ಜನತೆಯ ಮೇಲೆ ಪರಿಣಾಮ ಬೀರಿ ಪ್ರಚೋದನೆಗೆ ಒಳಗಾಗುತ್ತಾರೆ ಎನ್ನುವುದು ಗೊತ್ತಿರಲಿಲ್ಲ ಗೊತ್ತಿದ್ದರೆ ನಾನು ಆ ರೀತಿಯ ಹಾಡು ಹಾಡುತ್ತಿರಲಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಚಂದನ್ ಶೆಟ್ಟಿ ಅವರು 2015ರಲ್ಲಿ ಹಾಡಿರುವ ಬಿಟ್ಟು ಬಿಡ್ರಿ ಸಿಗರೇಟು ತಂಬಾಕು ಬೀಡಿ...ಹಚ್ಚಿಬಿಡ್ರಿ ಗಾಂಜಾ ತೇಲುತ್ತದೆ ಬಾಡಿ ಎನ್ನುವ ಹಾಡನ್ನು ಯೂಟ್ಯೂಬ್‍ಗೆ ಹರಿಬಿಟ್ಟಿದ್ದು ಇದುವರೆಗೂ ಸುಮಾರು 90 ಲಕ್ ಮಂದಿ ವೀಕ್ಷಿಸಿದ್ದಾರೆ. ಮಾದಕ ವಸ್ತು ಗಾಂಜಾ ಸೇವನೆಗೆ ಈ ಹಾಡು ಪ್ರಚೋದನೆ ನೀಡಲಿದೆ ಎನ್ನುವ ಆರೋಪದಡಿ ಚಂದನ್ ಶೆಟ್ಟಿಗೆ ಸಿಸಿಬಿ ಪೊಲೀಸರು ನೋಟಿಸ್ ನೀಡಿದ್ದು, ಈ ಹಿನ್ನೆಲೆಯಲ್ಲಿ ಅವರು ಸಿಸಿಬಿ ಕಚೇರಿಗೆ ಹಾಜರಾಗಿ ವಿಚಾರಣೆ ಎದುರಿಸಿದರು.

ಹಾಡಿನಲ್ಲಿರುವ ಸಾಹಿತ್ಯ ನನ್ನದಲ್ಲ. ಮುತ್ತು ನಿರ್ದೇಶನದ `ಅಂತ್ಯ' ಸಿನೆಮಾದಲ್ಲಿ ಅವರೇ ಬರೆದಿರುವ ಸಾಹಿತ್ಯಕ್ಕೆ ನಾನು ಧ್ವನಿ ನೀಡಿದ್ದೇನೆ ಅಷ್ಟೆ. ಹಾಡು ಮಾರುಕಟ್ಟೆಗೆ ಬಂದು 3 ವರ್ಷಗಳು ಕಳೆದಿವೆ. ಹಾಡು ಸಮಾಜಕ್ಕೆ, ಯುವಕರಿಗೆ ಮಾರಕ ಎನಿಸಿದರೆ ಹಾಡನ್ನು ಯೂಟ್ಯೂಬ್‍ನಿಂದ ತೆಗೆದು ಹಾಕಲಿ. ಅದಕ್ಕೆ ನನ್ನ ಯಾವುದೇ ಅಭ್ಯಂತರವಿಲ್ಲ'' ಎಂದು ತಿಳಿಸಿದ್ದಾರೆ.

'ನಾನು ಕೇವಲ ಗಾಯಕ ಮಾತ್ರ, ಇಂತಹ ಹಾಡುಗಳನ್ನು ಹಲವು ಭಾಷೆಗಳಲ್ಲಿ ಬಳಕೆ ಮಾಡಿದ್ದಾರೆ. ಮನರಂಜನೆ ದೃಷ್ಟಿಯಿಂದ ನಾನು ಆ ಹಾಡನ್ನು ಹಾಡಲು ಒಪ್ಪಿಕೊಂಡಿದ್ದೆ. ಬೇರೆ ಯಾವುದೇ ಉದ್ದೇಶ ನನ್ನದಾಗಿರಲಿಲ್ಲ. ಈಗಷ್ಟೇ ನಾನು ಸಿಂಗಾಪುರದಿಂದ ಬಂದಿರುವೆ. ಸದ್ಯ ಶೂಟಿಂಗ್‍ ನಲ್ಲಿದ್ದೇನೆ. ಸಂಬಂಧಪಟ್ಟ ಅಧಿಕಾರಿಗಳನ್ನು ಭೇಟಿಯಾಗಿ ಹೇಳಿಕೆ ನೀಡುತ್ತೇನೆ'' ಎಂದಿದ್ದಾರೆ.

ದಮ್ಮಾರೋಗೆ ಸಮನ್ಸ್: ಮಾದಕ ವಸ್ತುಗಳನ್ನು ವೈಭವೀಕರಿಸುತ್ತಿರುವ ಹಾಡುಗಳಿಗೆ ಸಮನ್ಸ್ ನೀಡಲು ಮುಂದಾಗಿರುವ ಸಿಸಿಬಿ ಅಧಿಕಾರಿಗಳು ಚಂದನ್‍ ಶೆಟ್ಟಿಯ ಹಾಡಿನ ನಂತರ ರ‍್ಯಾಂಬೊ-2 ಚಿತ್ರದ ‘ದಮ್ಮಾರೋ ದಮ್ಮಾರೋ ಹಾಡಿಗಾಗಿ ಸಮನ್ಸ್ ಜಾರಿ ಮಾಡಿದ್ದಾರೆ.

ರ‍್ಯಾಂಬೊ-2 ಚಿತ್ರದ ‘ಧಮ್ ಮಾರೋ ಧಮ್' ಹಾಡಿಗಾಗಿ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಹಾಗೂ ಅರುಣ್ ಸಾಗರ್ ಪುತ್ರಿ ಗಾಯಕಿ ಅಧಿತಿ ಸಾಗರ್ ಗೆ ಸಮನ್ಸ್ ನೀಡಲು ಸಿದ್ಧತೆ ನಡೆಸಿದೆ. ಹಾಡಿನಲ್ಲಿ ಗಾಂಜಾ ಹೊಡಿ ಎಂಬ ಪ್ರಚೋದನೆ ಹಿನ್ನೆಲೆ ಇಬ್ಬರಿಗೂ ಸಮನ್ಸ್ ನೀಡಲು ಅಧಿಕಾರಿಗಳು ಮುಂದಾಗಿದ್ದಾರೆ. ರ‍್ಯಾಂಬೊ-2 ಹಾಡಿನ ಕುರಿತು ಗಾಯಕಿ ಅಧಿತಿ ಸಾಗರ್ ತಂದೆ ನಟ ಅರುಣ್ ಸಾಗರ್ ಪ್ರತಿಕ್ರಿಯಿಸಿದ್ದು, ``ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲ. ನಿರ್ದೇಶಕ ನಿರ್ಮಾಪಕರ ಜತೆ ಮಾತನಾಡಬೇಕು. ಇದನ್ನು ಯುಟ್ಯೂಬ್‍ನಲ್ಲಿ ಅಪ್‍ಲೋಡ್ ಮಾಡಿದ್ದಾರೆ. ಆದರೆ ರ‍್ಯಾಂಬೊ-2 ಸಿನಿಮಾ ಸೆನ್ಸಾರ್ ಮಂಡಳಿಯಿಂದ ಪಾಸ್ ಆಗಿ ಬಂದಿದೆ'' ಎಂದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ