ನಿಧಾನವಾಗಿ ಸಹಜ ಸ್ಥಿತಿಯತ್ತ ಮರಳುತ್ತಿದೆ ಕೊಡಗು!

Kodagu is slowly returning to normal state

23-08-2018

ಬೆಂಗಳೂರು: ಪ್ರವಾಹ ಪೀಡಿತ ಕೊಡಗು ಜಿಲ್ಲೆಯಲ್ಲಿ ಪರಿಸ್ಥಿತಿ ಸಹಜ ಸ್ಥಿತಿಯತ್ತ ಮರಳುತ್ತಿದ್ದು, ಭಾರೀ ಮಳೆ ಮತ್ತು ಪ್ರವಾಹದಿಂದಾಗಿ ಸತ್ತವರ ಸಂಖ್ಯೆ 16ಕ್ಕೆ ಏರಿಕೆಯಾಗಿದೆ. ರಸ್ತೆ ದುರಸ್ತಿ, ವಿದ್ಯುತ್ ಸಂಪರ್ಕ ಪುನರ್ ಸ್ಥಾಪನೆ, ಮನೆ ಕಳೆದುಕೊಂಡವರಿಗೆ ಸೂರು ಕಲ್ಪಿಸುವ ಕಾರ್ಯ ತೀವ್ರಗೊಂಡಿದೆ.

ಜಿಲ್ಲೆಯಲ್ಲಿ ಶಾಲೆಗಳು ಇಂದಿನಿಂದ ಪ್ರಾರಂಭವಾಗಿವೆ. ಮಳೆಯಿಂದ 76 ಶಾಲೆಗಳು ಹಾನಿಗೀಡಾಗಿದ್ದು, ಉಳಿದ ಕಡೆಗಳಲ್ಲಿ ಶಾಲೆಗಳಲ್ಲಿ ಪಾಠ ಪ್ರವಚನಗಳು ಆರಂಭವಾಗಿವೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎನ್.ಮಹೇಶ್ ತಿಳಿಸಿದ್ದಾರೆ.

ಮಡಿಕೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮತನಾಡಿದ ಅವರು, ಕೊಡಗಿನಲ್ಲಿ ಸುರಿದ ಮಹಾಮಳೆಯಿಂದ ಹಾನಿಗೀಡಾಗಿರುವ ಶಾಲೆಗಳ ಅಭಿವೃದ್ಧಿಗೆ 4 ಕೋಟಿ ರೂಪಾಯಿ ಅಗತ್ಯವಿದೆ. ಮಡಿಕೇರಿ ತಾಲ್ಲೂಕಿನ ಏಳು ಹಾಗೂ ವಿರಾಜಪೇಟೆ ತಾಲ್ಲೂಕಿನ ಎರಡು ಸೇರಿ ಒಟ್ಟು 9 ಶಾಲೆಗಳು ಸಂಪೂರ್ಣವಾಗಿ ನಾಶವಾಗಿವೆ. 163 ಕೊಠಡಿಗಳು ಹಾನಿಗೊಂಡಿವೆ ಎಂದು ಮಾಹಿತಿ ನೀಡಿದರು. ಅತಂತ್ರ ಸ್ಥಿತಿಯಲ್ಲಿರುವ ವಿದ್ಯಾರ್ಥಿಗಳನ್ನು ಸಮೀಪದ ಶಾಲೆಗಳಲ್ಲಿ ದಾಖಲಿಸಿಕೊಳ್ಳಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಮೂರು ದಿನಗಳಲ್ಲಿ ನಿರಾಶ್ರಿತ ವಿದ್ಯಾರ್ಥಿಗಳಿಗೆ ಪಠ್ಯ, ನೋಟ್ ಪುಸ್ತಕ ಹಾಗೂ ಸಮವಸ್ತ್ರಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗುವುದು. ವಿದ್ಯಾರ್ಥಿಗಳ ಶೈಕ್ಷಣಿಕ ಬದುಕಿಗೆ ಮತ್ತು ವ್ಯಾಸಂಗಕ್ಕೆ ತೊಂದರೆಯಾಗದ ರೀತಿಯಲ್ಲಿ ಸರ್ಕಾರ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಭರವಸೆ ನೀಡಿದರು.

ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಮಡಿಕೇರಿ ಜಿಲ್ಲೆಯ ಕುಶಾಲನಗರದ ದಂಡಿನ ಪೇಟೆ ಬಡಾವಣೆಯಲ್ಲಿ ಮಲೆಯಿಂದ ಹಾನಿಗೊಳಗಾದ ಮನೆಗಳನ್ನು ವೀಕ್ಷಿಸಿದರು. ನಂತರ ಸುಂಟಿಕೊಪ್ಪದ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿದರು.

ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣ ಭೈರೇಗೌಡ ಭೂ ಕುಸಿತಕ್ಕೆ ಒಳಗಾಗಿರುವ ಕುಶಾಲನಗರದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಮಣ್ಣಿನ ಸತ್ವದ ಬಗ್ಗೆ ಮಾಹಿತಿ ಪಡೆದುಕೊಂಡರು. ನಂತರ ಅವರು, ಕೊಡಗು ಜಿಲ್ಲೆಯಲ್ಲಿ 4 ಸಾವಿರದ 500 ಕಿ.ಮೀ.ಗಳಷ್ಟು ಗ್ರಾಮೀಣ ರಸ್ತೆಗಳು ಹಾಳಾಗಿದ್ದು, ಹಲವು ಗ್ರಾಮಗಳಿಗೆ ರಸ್ತೆಯನ್ನೇ ನಿರ್ಮಿಸಲು ಅಸಾಧ್ಯವಾದ ಪರಿಸ್ಥಿತಿಯಿದೆ. 250 ಕಿ.ಮೀ. ಗ್ರಾಮೀಣ ರಸ್ತೆಗಳು ಸಂಪೂರ್ಣ ಹಾಳಾಗಿದ್ದು ಇವುಗಳನ್ನು ಹೊಸ ರಸ್ತೆಯಂತೆಯೇ ನಿರ್ಮಿಸಬೇಕಾಗಿದೆ. ಮುಕ್ಕೋಡ್ಲು, ದೇವಸ್ತೂರು ಗ್ರಾಮಗಳಿಗೆ ಮುಂದಿನ ದಿನಗಳಲ್ಲಿ ರಸ್ತೆ ಸಂಪರ್ಕ ಕಲ್ಪಿಸುವುದೇ ಅಸಾಧ್ಯವಾಗಿದೆ. ಪ್ರಕೃತಿ ವಿಕೋಪ ನಿಧಿಯಡಿ ಕೊಡಗು ಜಿಲ್ಲೆಗೆ 12 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಲಾಗಿದ್ದು,  ರಸ್ತೆಗಳ ದುರಸ್ಥಿಗೆ ಎಲ್ಲಾ ರೀತಿಯ ಆರ್ಥಿಕ ಮತ್ತು ತಾಂತ್ರಿಕ ನೆರವು ನೀಡಲು ನಮ್ಮ ಇಲಾಖೆ ಬದ್ಧವಾಗಿದೆ ಎಂದು ಭರವಸೆ ನೀಡಿದರು.

ವಸತಿ ಸಚಿವ ಯು.ಟಿ.ಖಾದರ್ ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಸಂತ್ರಸ್ತರಾದ 7 ಗ್ರಾಮಗಳ ಜನರಿಗೆ ಮಡಿಕೇರಿ, ಸೋಮವಾರಪೇಟೆ ತಾಲೂಕಿನ ವಿವಿಧೆಡೆ 42 ಎಕರೆ ಜಾಗ ಗುರುತಿಸಲಾಗಿದ್ದು, ಸಮಾರೋಪಾದಿಯಲ್ಲಿ  ನವ ತಂತ್ರಜ್ಞಾನ ಬಳಸಿ ಮಾದರಿ ಮನೆಗಳನ್ನು ಸರ್ಕಾರ ನಿರ್ಮಿಸಿಕೊಡಲಿದೆ ಎಂದರು.

ಪ್ರತಿ ಪಂಚಾಯತ್‍ಗಳಿಂದ ಲಭ್ಯವಿರುವ ಜಮೀನಿನ ಬಗ್ಗೆ ಮಾಹಿತಿ ತರಿಸಿಕೊಳ್ಳಲಾಗುತ್ತಿದೆ. ಪ್ರವಾಹದಿಂದ 1120 ಮನೆಗಳು ಹಾನಿಗೊಳಗಾಗಿದ್ದು 186 ಮನೆಗಳು ಸಂಪೂರ್ಣ ನಾಶವಾಗಿವೆ. ಮುಂದಿನ ದಿನಗಳಲ್ಲಿ ಸೂಕ್ತ ನಿವೇಶನಗಳನ್ನು ಗುರುತಿಸಿ ನಿರಾಶ್ರಿತರಿಗೆ ಮನೆಗಳನ್ನು ನಿರ್ಮಿಸಿಕೊಡಲಾಗುವುದು. ಲಭ್ಯವಿರುವ ಭೂಮಿ ಗುರುತಿಸಿ ಪರಿಶೀಲನೆ ನಡೆಸುವ ಸಲುವಾಗಿ ವಿಶೇಷ ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ ಎಂ.ಕೆ.ಜಗದೀಶ್ ಅವರನ್ನು ನೇಮಿಸಲಾಗಿದೆ ಎಂದು ಹೇಳಿದರು.

ಮೈಸೂರು ಜೆಎಸ್‍ಎಸ್ ಮಹಾಸಂಸ್ಥಾನದ ಮಠಾಧೀಶ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಕೊಡಗಿನ ಮುಕ್ಕೋಡ್ಲು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ನಂತರ ಅವರು ಜೆಎಸ್‍ಎಸ್ ಸಂಸ್ಥೆಯಿಂದ ಕೊಡಗಿನಲ್ಲಿ ನಿರಾಶ್ರಿತರಾದವರಿಗೆ ಮನೆ ನಿರ್ಮಿಸಿಕೊಡುವ ಮತ್ತು ಮಕ್ಕಳಿಗೆ ಶಿಕ್ಷಣ ನೀಡಲು ಕ್ರಮ ಕೈಗೊಳ್ಳಲಾಗುವುದು. ನಿರಾಶ್ರಿತ ಮಕ್ಕಳಿಗೆ ಜೆ.ಎಸ್.ಎಸ್.ಶಿಕ್ಷಣ ಸಂಸ್ಥೆಯ ವಸತಿ ಶಾಲೆಗಳಲ್ಲಿ ಉಚಿತ ಶಿಕ್ಷಣ ನೀಡಲಾಗುವುದು ಎಂದರು.


ಸಂಬಂಧಿತ ಟ್ಯಾಗ್ಗಳು

U.T.Khader flood ತಂತ್ರಜ್ಞಾನ ಪ್ರವಾಹ ಪೀಡಿತ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ