ವಿದ್ಯುತ್ ಅವಘಡ : ಮೃತರ ಮನೆಗೆ ಸಚಿವೆ ಜಯಮಾಲಾ ಭೇಟಿ

Minister Jayamala

23-08-2018

ಉಡುಪಿಯ ಕೆಮ್ಮಣ್ಣು ಗ್ರಾಮದ ಫರಂಗಿ ಕುದ್ರು ಬಳಿ ವಿದ್ಯುತ್ ತಂತಿ ತಗುಲಿ ಮೃತಪಟ್ಟ ಕೀರ್ತನ್ ಪುತ್ರನ್ ಹಾಗೂ ರಾಕೇಶ್ ಬೆಳ್ಚಡ ಅವರ ಮನೆಗೆ ಇಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಜಯಮಾಲ ಅವರು ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು.

ಮೊದಲಿಗೆ ಕೀರ್ತನ್ ಅವರ ಮನೆಗೆ ಭೇಟಿ ನೀಡಿದ ಸಚಿವೆ ಡಾ.ಜಯಮಾಲ ಅವರು ಮೃತ ಕೀರ್ತನ್ ಅವರ ತಂದೆ ತಾಯಿ ಹಾಗೂ ಬಂಧುಗಳಿಗೆ ಸಾಂತ್ವನ ಹೇಳಿದರು. ಬಳಿಕ ರಾಕೇಶ್ ಬೆಳ್ಚಡ ಅವರ ಮನೆಗೆ ಭೇಟಿ ನೀಡಿ ಮೃತರ ತಂದೆ ಹಾಗೂ ತಾಯಿ ಮತ್ತು ಕುಟುಂಬ ವರ್ಗದವರಿಗೆ ಧೈರ್ಯ ತುಂಬಿದ್ದಾರೆ.

ಮೃತರಿಬ್ಬರೂ ಯುವಕರಾಗಿದ್ದು, ಇನ್ನೂ ಸಾಕಷ್ಟು ಬಾಳಿ ಬದುಕಬೇಕಾಗಿದ್ದವರು. ಆದರೆ, ಆಕಸ್ಮಿಕ ಅವಘಡದಲ್ಲಿ ಮೃತಪಟ್ಟಿರುವುದು ನೋವಿನ ಸಂಗತಿ. ಮೃತರ ಕುಟುಂಬದ ನೋವಿನಲ್ಲಿ ನಾನು ಭಾಗಿಯಾಗಿದ್ದೇನೆ. ಯಾವ ರೀತಿಯಲ್ಲೂ ಹೋದ ಜೀವವನ್ನು ಮರಳಿ ತರಲಾಗದು, ಕುಟುಂಬಕ್ಕೆ ಆಧಾರವಾಗಬೇಕಾಗಿದ್ದ ಈ ಯುವಕರ ಸಾವು ಇವರ ಕುಟುಂಬದ ಆಧಾರಸ್ಥಂಬವನ್ನೇ ಕಳಚಿದಂತೆ ಮಾಡಿದೆ. ಕುಟುಂಬಕ್ಕೆ ನೆರವಾಗುವ ಉದ್ದೇಶದಿಂದ ಮೆಸ್ಕಾಮ್ ಇಲಾಖೆಯ ವತಿಯಿಂದ ತಕ್ಷಣ ತಲಾ ಐದು ಲಕ್ಷ ರೂಪಾಯಿ ಪರಿಹಾರ ನೀಡುವ ವ್ಯವಸ್ಥೆ ಮಾಡಲಾಗಿದೆ ಎಂದು ಸಚಿವರು ಕುಟುಂಬಸ್ಥರ ಭೇಟಿಯ ಬಳಿಕ ತಿಳಿಸಿದರು.

ಮೃತರ ಮನೆಗಳಿಗೆ ಭೇಟಿ ನೀಡುವ ಸಂದರ್ಭದಲ್ಲಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್,  ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜನಾರ್ಧನ ತೋನ್ಸೆ ಭಾಗವಹಿಸಿದ್ದರು. ಜನ ವಸತಿ ಪ್ರದೇಶದಲ್ಲಿ ಕಡಿದು ಬಿದ್ದಿರುವ ವಿದ್ಯುತ್‌ ತಂತಿಗಳನ್ನು ಹಾಗೂ ಅಪಾಯದ ಅಂಚಿನಲ್ಲಿ ಇರುವ ವಿದ್ಯುತ್ ಕಂಬಗಳನ್ನು ತಕ್ಷಣ ತೆರವು ಗೊಳಿಸುವಂತೆ ಸಚಿವರು ಮೆಸ್ಕಾಮ್ ಅಧಿಕಾರಿಗಳಿಗೆ ಸ್ಥಳದಲ್ಲಿಯೇ ನಿರ್ದೇಶನ ನೀಡಿದರು.

 


ಸಂಬಂಧಿತ ಟ್ಯಾಗ್ಗಳು

Jayamala Minister ಉಸ್ತುವಾರಿ ವ್ಯವಸ್ಥೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ