ಟ್ಟೀಟರ್ ನಲ್ಲಿ ರಶ್ಮಿಕಾ ಭಾವನಾತ್ಮಕ ಪತ್ರ

Rashmika

23-08-2018

ಬೆಂಗಳುರು: ಕೊಡಗು ಪ್ರವಾಹಕ್ಕೆ ಟ್ಟೀಟರ್ ನಲ್ಲಿ ಸ್ಯಾಂಡಲ್ ವುಡ್ ನಟಿ ರಶ್ಮಿಕಾ ಮಂದಣ್ಣ ಭಾವುಕರಾಗಿ ಪತ್ರ ಬರೆದಿದ್ದಾರೆ. ತಮ್ಮ ಟ್ಟೀಟ್ ನಲ್ಲಿ ಹೀಗೆ ಬರೆದುಕೊಂಡಿದ್ದಾರೆ ‘ನಮಗೆ ನೋವಾದಾಗ ಅಮ್ಮ ಎಂದು ಕೂಗುತ್ತೇವೆ, ಅಮ್ಮನೇ ಮುನಿಸಿಕೊಂಡಾಗ ಯಾರನ್ನು ಕೂಗುವುದು ಏನೆಂದು ಕೂಗುವುದು. ನಾ ಹುಟ್ಟಿದ, ಬೆಳೆದ, ಆಡಿದ್ದ, ಓದಿದ್ದ ಉಸಿರಾಡುತ್ತಿದ್ದ ಕೊಡಗು ಇಂದು ಮುಳುಗಿದ ಹಡಗಾಗಿದೆ. ಜಲಪ್ರಳಯಕ್ಕೆ ಲಕ್ಷಾಂತರ ಜನರು ಅಕ್ಷರಶಃ ನೀರುಪಾಲಾಗಿದ್ದಾರೆ. ಇದಕ್ಕೆ ಮೂಕ ಜೀವಿಗಳು ಹೊರತಾಗಿಲ್ಲ. ಯಾರಿಗೂ ನೋವು ಮಾಡದ ನಮ್ಮವರು ಇಂದು ನೋವಿನಲ್ಲಿದ್ದಾರೆ. ಪ್ರಪಂಚದಲ್ಲಿ ಮೂರರಷ್ಟು ನೀರು ಒಂದರಷ್ಟು ಭೂಮಿ ಎಂಬುದನ್ನು ನೀರೇ ಮುಂದೆ ನಿಂತು ಹೇಳಿದಂತಿದೆ ! ನಾನು, ನೀನು, ನಂದು, ನಿಂದು, ಮೇಲು, ಕೀಳು, ಶ್ರೀಮಂತಿಕೆ ಎಲ್ಲಾ ನೀರಿನಲ್ಲಿ ಕೊಚ್ಚಿ ಹೋಗಿದೆ. ಮನುಷ್ಯತ್ವವೇ ಕಣ್ತುಂಬಿಕೊಂಡಿದೆ. ಮಳೆಯ ಶಬ್ಧ ನೀರಿನ ಆರ್ಭಟ ಕೇಳಿದರೆ ಜೀವ ನಡುಗುವಂತಾಗಿದೆ. ಮಕ್ಕಳು ಮಾಡಿದ ಪಾಪವಾದರು ಏನು ? ಪ್ರಾಣಿಗಳು ಮಾಡಿದ ಪಾಪವಾದರು ಏನು ? ದೇವರೆ ಉತ್ತರಿಸು. ಬೆಟ್ಟಗಳು ನೆಲವಾಗಿ, ಬಯಲು ಕೆರೆಗಳಾಗಿ, ದಾರಿಗಳು ನದಿಗಳಾಗಿ, ಕೊಡಗು ಸಮುದ್ರವಾಗಿದೆ. ನೀರು-ನೀರು-ನೀರು, ಬಿಟ್ಟರೆ ಕಣ್ಣೀರು." ಧೈರ್ಯವಾಗಿರಿ ನಾವಿದ್ದೇವೆ" ಎಂಬ ನಿಮ್ಮುಗಳ ಮಾತು ನಮ್ಮನ್ನು ಜೀವಂತವಾಗಿರಿಸಿದೆ. ಸರ್ಕಾರಗಳು, ಸ್ವಯಂ ಸಂಘಗಳು, ಸಂಸ್ಥೆಗಳು, ಚಿತ್ರರಂಗದವರು, ಪತ್ರಕರ್ತರು, ಮಾಧ್ಯಮದವರು, ವಿದ್ಯಾರ್ಥಿಗಳು, ಕೋಟ್ಯಾನುಕೋಟಿ ಕನ್ನಡಿಗರು, ಎಲ್ಲಾ ಭಾಷಿಕರು, ಪ್ರಪಂಚದ ಮೂಲೆ ಮೂಲೆಯಲ್ಲಿರುವ ಕೊಡವ ಸಮಾಜದವರು, ನೀವುಗಳು ಕೈ ಮೀರಿ ಸಹಾಯ ಮಾಡಿದ್ದೀರಿ, ಮಾಡುತ್ತಿದ್ದೀರಿ. ಬಳ್ಳಾರಿಯ ಜೈಲಿನ ಖೈದಿಗಳು ನಾಲ್ಕುವಾರದ ಮಾಂಸದೂಟ ಬೇಡವೆಂದು ಮೂರು ಲಕ್ಷ ರೂಗಳನ್ನು ಕೊಡಗಿನ ಸಂತ್ರಸ್ತರಿಗೆ ಕಳಿಸಿದ್ದಾರೆಂದರೆ ಮನುಷ್ಯತ್ವ ನಮಗಿಂತ ಮುಂದಿದೆಯೆನಿಸುತ್ತದೆ. ನಿಮ್ಮ ಸ್ಪಂದನೆಗೆ ಸಹಾಯಕ್ಕೆ ನಾನು ಋಣಿ. ಮನಸ್ಪೂರ್ವಕವಾಗಿ ಕೊಡಗಿನ ಪರವಾಗಿ ಒದ್ದೆಕಣ್ಣಿನಿಂದ ವಂದಿಸುತ್ತಿದ್ದೇನೆ. ಕೊಡಗನ್ನು ಕೊಡಗಿನವರ ನೆಂದ ನೊಂದ ಬದುಕನ್ನು ಪುನರ್ನಿರ್ಮಿಸಬೇಕಾಗಿದೆ, ಕೈ ಜೋಡಿಸಿ ನಾನು ನಿಮ್ಮೊಂದಿಗೆ ಇರುತ್ತೇನೆ- ರಷ್ಮಿಕಾ ಮಂದಣ್ಣ.


ಸಂಬಂಧಿತ ಟ್ಯಾಗ್ಗಳು

Rashmika Mandanna kodagu ಸ್ಯಾಂಡಲ್ ವುಡ್ ಟ್ಟೀಟರ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ