ಅಟಲ್ ಜಿ ಅಸ್ಥಿಕಳಶ ಸ್ವೀಕರಿಸಲು ದೆಹಲಿಗೆ ತೆರಳಿದ ಬಿಎಸ್ವೈ

yeddyurappa to meet modi and amit shah at delhi

22-08-2018

ನವದೆಹಲಿ: ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಅಸ್ಥಿಯನ್ನು ದೇಶದ ವಿವಿಧ ನೂರು‌ ನದಿಗಳಿಗೆ ಬಿಡಲು ಕೇಂದ್ರ ಬಿಜೆಪಿ ನಿರ್ಧಿಸಿದ್ದು, ಎರಡು ದಿನಗಳ ಹಿಂದಷ್ಟೇ ಗಂಗಾ ನದಿಯಲ್ಲಿ ಅಸ್ಥಿಯನ್ನು ವಿಸರ್ಜನೆ ಮಾಡಲಾಗಿತ್ತು. ಇನ್ನು ರಾಜ್ಯದ ಎಂಟು ನದಿಗಳಲ್ಲಿ ಅಸ್ಥಿ ಕಳಶ ವಿಸರ್ಜನೆಗೆ ರಾಜ್ಯ ಬಿಜೆಪಿ ತೀರ್ಮಾನಿಸಿತ್ತು. ಅದರಂತೆ ಇಂದು ಅಸ್ಥಿ ಕಳಶ ಸ್ವೀಕರಿಸಲು ಬಿ.ಎಸ್.ಯಡಿಯೂರಪ್ಪ ಅವರು ದೆಹಲಿಯ ಬಿಜೆಪಿ ಕೇಂದ್ರ ಕಚೇರಿಗೆ ತೆರಳಿದ್ದಾರೆ. ಬಿಎಸ್ವೈಗೆ ಸಂಸದರಾದ ಪಿ.ಸಿ. ಮೋಹನ್, ಶಿವಕುಮಾರ್ ಉದಾಸಿ, ಸುರೇಶ್ ಅಂಗಡಿ ಸಾಥ್ ನೀಡಿದ್ದರು.

ದೆಹಲಿಯ ಬಿಜೆಪಿ‌ ಕಚೇರಿಯಲ್ಲಿ ಅಸ್ಥಿ ಕಳಶ ಸ್ವೀಕಾರ ಕಾರ್ಯಕ್ರಮದಲ್ಲಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅಸ್ಥಿ ಕಳಶ ನೀಡಲಿದ್ದಾರೆ. ಇದಕ್ಕೂ ಮುನ್ನ ಕರ್ನಾಟಕ ಭವನದಲ್ಲಿ ಮಾತನಾಡಿದ ಬಿಎಸ್ ವೈ ‘ಇಂದು ಪ್ರಧಾನಿ ಮೋದಿ-ಅಮಿತ್ ಷಾ ಅವರಿಂದ ವಾಜಪೇಯಿ ಅಸ್ಥಿ ಸ್ವೀಕರಿಸಲಿದ್ದೇನೆ. ಅಸ್ಥಿ ತೆಗೆದುಕೊಂಡು ಮಧ್ಯಾಹ್ನ ಬೆಂಗಳೂರಿಗೆ ಬರುವುದಾಗಿ ತಿಳಿಸಿದರು. ಬೆಂಗಳೂರು ವಿಮಾನ ನಿಲ್ದಾಣದಿಂದ ಮೆರವಣಿಗೆ ಮೂಲಕ‌ ಕೊಂಡೊಯ್ಯಲಾಗುವುದು, ನಾಳೆ ಶ್ರೀರಂಗಪಟ್ಟಣದ ತ್ರಿವೇಣಿ ಸಂಗಮದಲ್ಲಿ ಅಸ್ಥಿಯನ್ನು ವಿಸರ್ಜಿಸಲಿದ್ದೇವೆ, ನಂತರ ಇನ್ನೂ ಆರು ನದಿಗಳಿಗೆ ವಾಜಪೇಯಿ ಅಸ್ಥಿ ಬಿಡಲಾಗುವುದು’ ಎಂದರು.

ಇದೇ ವೇಳೆ ಮಡಿಕೇರಿಯಲ್ಲಿ ಪ್ರವಾಹದಿಂದ ಉಂಟಾಗಿರುವ ನಷ್ಟಕ್ಕೆ ಕೇಂದ್ರ ಸರ್ಕಾರದಿಂದ ಪರಿಹಾರ ಕೊಡಿಸುವ ವಿಚಾರದ ಕುರಿತು ಪ್ರತಿಕ್ರಿಯಿಸಿ, ‘ಈಗಾಗಲೇ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಇಂದು ಪ್ರಧಾನಿ ನರೇಂದ್ರ ಮೋದಿಯವರ ಭೇಟಿ ಸಂದರ್ಭ ಸಂಸದರ ಜೊತೆ ಮಡಿಕೇರಿ ವಿಚಾರವಾಗಿ ಚರ್ಚೆ ನಡೆಸುತ್ತೇವೆ. ಹೆಚ್ಚಿನ ನೆರವು ನೀಡುವಂತೆ ಮನವಿ ಮಾಡುವೆ, ವೈಮಾನಿಕ‌ ಸಮೀಕ್ಷೆ ಮಾಡುವಂತೆ ಕೇಳಿಕೊಳ್ಳುವೆ’ ಎಂದು ಹೇಳಿದರು.

 


ಸಂಬಂಧಿತ ಟ್ಯಾಗ್ಗಳು

Atal Bihari Vajpayee yeddyurappa ವಿಸರ್ಜನೆ ಅಸ್ಥಿ ಕಳಶ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ