ಬರೋಬ್ಬರಿ 17 ದೇವಾಲಯಗಳಲ್ಲಿ ಕಳ್ಳತನ: ನಾಲ್ವರ ಬಂಧನ

Robbery in 17 temples: 4 accused arrested

21-08-2018

ಬೆಂಗಳೂರು: ಭಕ್ತರ ಸೋಗಿನಲ್ಲಿ ಬೆಳಗಿನ ವೇಳೆ ದೇವಾಲಯಗಳಿಗೆ ಹೋಗಿ ಹುಂಡಿಯಲ್ಲಿ ಹಣ ಇದೆಯೇ ಇಲ್ಲವೇ ಎನ್ನುವುದನ್ನು ಖಚಿತಪಡಿಸಿಕೊಂಡು ಸುಮಾರು 17 ದೇವಾಲಯದ ಬೀಗ ಮುರಿದು ಹಣ ಚಿನ್ನಾಭರಣಗಳನ್ನು ಕಳವು ಮಾಡಿದ್ದ ನಾಲ್ವರು ಅಲೆಮಾರಿ ಕಳ್ಳರ ಗ್ಯಾಂಗ್‍ನ್ನು ಮೈಕೋ ಲೇಔಟ್ ಪೊಲೀಸರು ಬಂಧಿಸಿದ್ದಾರೆ.

ಮೈಸೂರಿನ ಲಕ್ಷ್ಮಿಪುರದ ಕುಮಾರ್ ಅಲಿಯಾಸ್ ಅರ್ಜುನ್ (23), ಬಂಬೂ ಬಜಾರ್ ನ ಮಂಜ ಅಲಿಯಾಸ್ ಸಂಗಪ್ಪ (24), ವಿಜಯ್ ಕುಮಾರ್ ಅಲಿಯಾಸ್ ಕುಮಾರ (21), ಹೆಚ್.ಡಿ.ಕೋಟೆಯ ಕೃಷ್ಣ (40) ಬಂಧಿತ ಅಲೆಮಾರಿ ಕಳ್ಳರ ಗ್ಯಾಂಗ್‍ನ ಆರೋಪಿಗಳಾಗಿದ್ದಾರೆ.

ಬಂಧಿತರಿಂದ 72 ಸಾವಿರ ರೂ. ನಗದು, 55 ಗ್ರಾಂ ಚಿನ್ನಾಭರಣ, 1 ಕೆಜಿ 314 ಗ್ರಾಂ ಬೆಳ್ಳಿ ಸೇರಿ, 3 ಲಕ್ಷ ರೂ. ಮೌಲ್ಯದ ಮಾಲುಗಳನ್ನು ವಶಪಡಿಸಿಕೊಂಡು 17 ಕಳವು ಪ್ರಕರಣಗಳನ್ನು ಪತ್ತೆಹಚ್ಚಲಾಗಿದೆ. ಆರೋಪಿಗಳು ಅಲೆಮಾರಿಗಳಾಗಿದ್ದು, ಬಯಲು ಪ್ರದೇಶಗಳಲ್ಲಿ ಟೆಂಟ್ ಹಾಕಿಕೊಂಡು ಜೀವನ ಸಾಗಿಸುತ್ತಿದ್ದರು. ಹಗಲು ವೇಳೆಯಲ್ಲಿ ಸ್ಟೌವ್ ರಿಪೇರಿ ಮಾಡುತ್ತೇವೆಂದು ಹೇಳಿಕೊಂಡು ದ್ವಿಚಕ್ರ ವಾಹನಗಳಲ್ಲಿ ಸುತ್ತಾಡುತ್ತಿದ್ದರು. ಬೆಳಗಿನ ವೇಳೆ ದೇವಾಲಯಗಳಿಗೆ ಭಕ್ತರ ಸೋಗಿನಲ್ಲಿ ದೇವಾಲಯಗಳಿಗೆ ಹೋಗಿ ಹುಂಡಿಯಲ್ಲಿ ಹಣ ಹಾಕಿ ಅದು ತುಂಬಿದೆಯೋ, ಇಲ್ಲವೋ ಎಂಬುದನ್ನು ಖಾತರಿ ಪಡಿಸಿಕೊಂಡು ರಾತ್ರಿ ವೇಳೆ ಬೀಗ ಮುರಿದು ಒಳನುಗ್ಗಿ ಕಳವು ಮಾಡುತ್ತಿದ್ದರು.

ಗ್ಯಾಂಗ್‍ನ ಬಂಧನದಿಂದ ಮೈಕೋ ಲೇಔಟ್‍ನ 3, ಎಲೆಕ್ಟ್ರಾನಿಕ್ ಸಿಟಿಯ 4, ಬೊಮ್ಮನಹಳ್ಳಿ, ಕೆ.ಎಸ್.ಲೇಔಟ್‍ನ ತಲಾ 2, ಸರ್ಜಾಪುರ, ಸುಬ್ರಮಣ್ಯಪುರ ತಲಾ ಒಂದು ಸೇರಿದಂತೆ, 17 ದೇವಾಲಯಗಳ ಕಳವು ಪ್ರಕರಣಗಳು ಪತ್ತೆಯಾಗಿವೆ ಎಂದು ಡಿಸಿಪಿ ಡಾ.ಬೋರಲಿಂಗಯ್ಯ ತಿಳಿಸಿದ್ದಾರೆ. ಆರೋಪಿಗಳನ್ನು ಮೈಕೋ ಲೇಔಟ್ ಪೊಲೀಸರು ಖಚಿತ ಮಾಹಿತಿ ಆಧರಿಸಿ, ಬಂಧಿಸಿ, ಮುಂದಿನ ತನಿಖೆ ಕೈಗೊಂಡಿದ್ದಾರೆ ತಿಳಿಸಿದರು.


ಸಂಬಂಧಿತ ಟ್ಯಾಗ್ಗಳು

Thieves gang ಚಿನ್ನಾಭರಣ ಅಲೆಮಾರಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ