ಪ್ರವಾಹ ಅಲ್ಪ ತಗ್ಗಿತ್ತಾದರೂ..ಮಳೆ ನಿಂತಿಲ್ಲ!

Rain continued at kodagu: thousand of people rescued

20-08-2018

ಬೆಂಗಳೂರು: ಕಳೆದ 2 ವಾರಗಳಿಂದ ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಉಂಟಾಗಿರುವ ಭೀಕರ ಪ್ರವಾಹ ಪರಿಸ್ಥಿತಿಯಿಂದ ನಲುಗಿ ಹೋಗಿರುವ ಕೊಡಗು ಜಿಲ್ಲೆಯಲ್ಲಿ ಭಾರತೀಯ ಸೇನೆ, ನೌಕಾಪಡೆ, ಎನ್.ಡಿ.ಆರ್.ಎಫ್. ಸಿಬ್ಬಂದಿ, ರಾಜ್ಯ ನಾಗರಿಕ ರಕ್ಷಣಾ ಪಡೆಗಳ ತುಕಡಿಗಳೂ ಸೇರಿದಂತೆ ಹಲವಾರು ಸಂಸ್ಥೆಗಳು ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರೆಸಿದೆ. ಕೃಷ್ಣಾ, ವೇದಗಂಗಾ ಮತ್ತು ದೂದ್ ಗಂಗಾ ನದಿಗಳು ಉಕ್ಕಿ ಹರಿಯುತ್ತಿವೆ.

ಬೆಟ್ಟ ಗುಡ್ಡಗಳ ಈ ಜಿಲ್ಲೆಯಲ್ಲಿ ಮಹಾ ಮಳೆ ಮುಂದುವರೆದಿದ್ದು, ಸಂಕಷ್ಟದಲ್ಲಿ ಸಿಲುಕಿರುವ ಸಾವಿರಾರು ಮಂದಿಯ ರಕ್ಷಣೆಗೆ ರಕ್ಷಣಾ ಕಾರ್ಯಕರ್ತರು ಅವಿರತ ಶ್ರಮಿಸುತ್ತಿದ್ದಾರೆ. ಶಾಲಾ ಕಾಲೇಜುಗಳಿಗೆ ಜಿಲ್ಲಾಡಳಿತ ಇನ್ನು 2 ದಿನ ರಜೆ ಪ್ರಕಟಿಸಿದೆ.

ಕಾಫಿಯ ಜಿಲ್ಲೆಯಲ್ಲಿ 5ನೇ ದಿನವಾದ ಇಂದು ಸಹ ಪ್ರವಾಹ ಪರಿಸ್ಥಿತಿ ಗಂಭೀರವಾಗಿಯೇ ಇತ್ತು, ತುರ್ತು ಕರೆಗಳ ಮೇರೆಗೆ ರಕ್ಷಣಾ ತಂಡಗಳು ದೂರದೂರದ ಗ್ರಾಮಗಳಿಗೆ ಧಾವಿಸುತ್ತಿವೆ. ಹಲವಾರು ಗ್ರಾಮಗಳು ಗುರುತು ಸಿಗದ ರೀತಿ ಕಣ್ಮರೆಯಾಗಿವೆ. ಸಂಕಷ್ಟದಲ್ಲಿ ಸಿಲುಕಿರುವ ಜನರನ್ನು ಪರಿಹಾರ ಕೇಂದ್ರಗಳಿಗೆ ಸಾಗಿಸುವ ಕಾರ್ಯ ಮುಂದುವರೆದಿದೆ.

ಕೊಡಗಿನಲ್ಲಿ ಪ್ರವಾಹ ನೀರಿನ ಮಟ್ಟ ಸ್ವಲ್ಪ ಮಟ್ಟಿಗೆ ತಗ್ಗಿದೆಯಾದರೂ ಜಿಲ್ಲೆಯಲ್ಲಿ ಧಾರಕಾರ ಮಳೆ ಮುಂದುವರೆದಿದ್ದು, ಕಾರ್ಯಾಚರಣೆ ನಡೆಸಲು ರಕ್ಷಣಾ ಕಾರ್ಯಕರ್ತರಿಗೆ ಬಹಳಷ್ಟು ಅಡಚಣೆಯಾಗಿದೆ.

ಕಳೆದ 2 ವಾರಗಳಲ್ಲಿ ಜಿಲ್ಲೆಯಲ್ಲಿ 9 ಸಾವುಗಳು ಸಂಭವಿಸಿರುವುದಾಗಿ ಕಂದಾಯ ಇಲಾಖೆಯ ಮೂಲಗಳು ತಿಳಿಸಿವೆ. ಜಿಲ್ಲೆಯಲ್ಲಿ ಈವರೆಗೆ ಮಳೆಯ ಸಂಬಂಧಿ ಅವಘಡಗಳಿಂದ ಕನಿಷ್ಠ 1, 206 ಮನೆಗಳು ಸಂಪೂರ್ಣ ಇಲ್ಲವೆ ಭಾಗಶಃ ಹಾನಿಗೊಂಡಿದ್ದು, 278 ಸರ್ಕಾರಿ ಕಟ್ಟಡಗಳೂ ಸಹ ಜಖಂಗೊಂಡಿವೆ. ಹಲವೆಡೆ ಭೂಕುಸಿತಗಳು ಉಂಟಾಗಿದೆ ಅಲ್ಲದೆ ಸುಮಾರು 123 ಕಿಲೋಮೀಟರ್‍ ನಷ್ಟು ರಸ್ತೆ ಕೊಚ್ಚಿಹೋಗಿದೆ. ಭಾರಿ ಮಳೆಯಿಂದಾಗಿರುವ ಅನಾಹುತಗಳನ್ನು ಸರಿಪಡಿಸಲು ತಿಂಗಳುಗಟ್ಟಲೆ ಸಮಯ ಬೇಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈವೆರೆಗೆ 4,200 ಕ್ಕೂ ಹೆಚ್ಚು ಮಂದಿಯನ್ನು ರಕ್ಷಿಸಲಾಗಿದ್ದು, 3,800ಕ್ಕೂ ಹೆಚ್ಚು ವಿದ್ಯುತ್ ಟ್ರಾನ್ಸ್‍ ಫಾರ್ಮರ್‍ ಗಳು ಹಾಗೂ ಸಾವಿರಾರು ವಿದ್ಯುತ್ ಕಂಬಳು ಉರುಳಿ ಬಿದ್ದು, ಜಿಲ್ಲೆ 5ನೇ ದಿನವಾದ ಇಂದು ಸಹ ಕತ್ತಲಲ್ಲಿ ಮುಳುಗಿದೆ.

ಸಂಕಷ್ಟಕ್ಕೆ ಸಿಲುಕಿರುವವರನ್ನು ಪಾರು ಮಾಡಲು ಸೇನೆ, ನೌಕಾಪಡೆ, ವಾಯುಪಡೆ, ಅಗ್ನಿ ಶಾಮಕ ದಳಗಳ 1,200ಕ್ಕೂ ಹೆಚ್ಚು ಸಿಬ್ಬಂದಿ ದಿನದ 24 ಗಂಟೆಯೂ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಭೂಕುಸಿತಗಳ ಅವಷೇಶಗಳು ತೆರವುಗೊಳಿಸಿ ರಸ್ತೆಯನ್ನು ಸಂಚಾರಕ್ಕೆ ಸುಗಮಗೊಳಿಸಲು ಸುಮಾರು 50 ಎಕ್ಸ್‍ಕವೇಟರ್‍ ಗಳನ್ನು ಕಾರ್ಯಾಚರಣೆಗೆ ತೊಡಗಿಸಲಾಗಿದೆ. ನೀರಿನಲ್ಲಿ ಸಿಕ್ಕಿ ಹಾಕಿಕೊಂಡಿರುವ ಕುಟುಂಬಗಳ ರಕ್ಷಣೆಗೆ ದೋಣಿಗಳನ್ನು ಬಳಸಲಾಗುತ್ತಿದೆ. ಜನರನ್ನು ತೆರವು ಮಾಡಲು ಹಾಗೂ ನೀರು-ಆಹಾರ ವಿತರಿಸಲು ವಾಯುಪಡೆಯ ಹೆಲಿಕಾಪ್ಟರ್‍ ಗಳನ್ನು ನಿಯೋಜಿಸಲಾಗಿದೆ.

ಸಕಲೇಶಪುರ ತಾಲ್ಲೂಕಿನ ಕೆಲ ಭಾಗಗಳು, ಭಾರಿ ಮಳೆಯಿಂದ ಉಂಟಾಗಿರುವ ಪ್ರವಾಹಗಳಿಂದಾಗಿ ತೀವ್ರ ಬಾಧಿತವಾಗಿವೆ. ಮನೆಗಳು ಕುಸಿದು ಬೀಳಬಹುದೆಂಬ ಭೀತಿಯಿಂದ ಯಸ್ಲೂರು ಹೊಬಳಿಯ ಹಿಜ್ಜನಹಳ್ಳಿಯ ವಾಸಿಗಳು ಗ್ರಾಮವನ್ನು ತೊರೆದಿದ್ದಾರೆ. ಈ ಭಾಗದಲ್ಲಿ ನೂರಾರು ಎಕರೆ ಪ್ರದೇಶ ನೀರಿನಲ್ಲಿ ಮುಳುಗಿದೆ. ಹಿಜ್ಜನಹಳ್ಳಿಯಲ್ಲಿ ಪರಿಹಾರ ಕೇಂದ್ರವನ್ನು ತೆರೆಯಲಾಗಿದ್ದು, ನೂರು ಮಂದಿ ಅಲ್ಲಿ ಆಶ್ರಯ ಪಡೆದಿದ್ದಾರೆ.

ಕಲ್ಲಹಳ್ಳಿ ಮಾಗೇರಿ ನಡುವಣ ರಸ್ತೆ ತೀವ್ರ ಹಾನಿಗೊಂಡಿದೆ. ತಾಲೂಕಿನ ಅನೇಕ ರಸ್ತೆಗಳ ಪರಿಸ್ಥಿತಿಯು ಇದೇ ರೀತಿ ಇದೆ. ಕೊಡಗು, ಚಿಕ್ಕಮಗಳೂರು ಜಿಲ್ಲೆಗಳ ವ್ಯಾಪಕ ಕಾಫಿ, ಬಾಳೆ ತೋಟಗಳು ನೀರಿನಿಂದ ಆವೃತವಾಗಿವೆ. ಭತ್ತದ ಫಸಲಿದ್ದ 10 ಸಾವಿರದ 600 ಹೆಕ್ಟೇರ್ ಪ್ರದೇಶದ ಪೈಕಿ ಸುಮಾರು 60 ಸಾವಿರ ಹೆಕ್ಟೇರ್ ಪ್ರದೇಶ ಹಾಳಾಗಿದೆ. ಶಿರಾಡಿ ಘಾಟ್ ಪ್ರದೇಶದಲ್ಲಿ ಭೂಕುಸಿತಗಳು ಮುಂದುವರೆದಿದ್ದು, ಹಾಸನ-ಮಂಗಳೂರು ರಸ್ತೆಯನ್ನು ಇನ್ನು ಕೆಲ ದಿನಗಳ ಕಾಲ ಸಂಚಾರಕ್ಕೆ ಮುಚ್ಚಲಾಗಿದೆ.

ಚಿಕ್ಕಮಂಗಳೂರು ಜಿಲ್ಲೆಯ ಕಳಸ ಮಂಗಳೂರು ರಸ್ತೆಯಲ್ಲಿ ಕುದುರೆಮುಖ ಸಮೀಪ 4 ಕಡೆ ಮಣ್ಣು ಕುಸಿದ ಬಗ್ಗೆ ವರದಿಯಾಗಿದೆ. ಈ ಮಾರ್ಗದಲ್ಲೂ ಸಂಚಾರಕ್ಕೆ ಅಡಚಣೆಯಾಗಿದೆ. ಅದೇ ರೀತಿ ಕೊಪ್ಪ ತಾಲೂಕಿನ ಜಯಪುರ-ಬಸರಿ ಕಟ್ಟೆ ಸಂಪರ್ಕ ರಸ್ತೆಯಲ್ಲಿ ಬಿರುಕುಗಳು ಕಾಣಿಸಿಕೊಂಡಿದ್ದು, ವಾಹನ ಸಂಚಾರ ಸ್ಥಗಿತಗೊಂಡಿದೆ. ಬಾಬಾ ಬುಡನ್‍ಗಿರಿಗೆ ಸಂಪರ್ಕಿಸುವ ರಸ್ತೆಗಳಲ್ಲೂ ಭೂಕುಸಿತಗಳು ಉಂಟಾಗಿದ್ದು, ವಾಹನ ಸಂಚಾರ ಬಾಧಿತವಾಗಿದೆ. ಜಿಲ್ಲೆಯ ತುಂಗಾ, ಭದ್ರಾ ಮತ್ತು ಹೇಮಾವತಿ ತುಂಬಿ ತುಳುಕುತ್ತಿದೆ.

ಈ ಮಧ್ಯೆ, ಮಹಾರಾಷ್ಟ್ರದ ಅಣೆಕಟ್ಟೆಗಳಿಂದ 1 ಲಕ್ಷ 15 ಸಾವಿರ ಕ್ಯೂಸೆಕ್ ನೀರನ್ನು ಹೊರ ಬಿಟ್ಟಿರುವುದರಿಂದ ಕೃಷ್ಣಾ ಹಾಗೂ ವೇದಗಂಗಾ ಮತ್ತು ದೂದ್ ಗಂಗಾ ನದಿಗಳು ಉಕ್ಕಿ ಹರಿಯುತ್ತಿವೆ. ಇದರಿಂದಾಗಿ ಚಿಕ್ಕೋಡಿ ತಾಲೂಕಿನ 6 ಸೇತುವೆ-ಬ್ಯಾರೆಜ್‍ಗಳು ನೀರಿನಲ್ಲಿ ಮುಳುಗಿವೆ. ಅಲ್ಲದೆ ರಾಯಬಾಗ್ ತಾಲೂಕಿನ ಸೇತುವೆಯೊಂದು ಸಹ ಇಂದು ನೀರಿನಲ್ಲಿ ಮುಳುಗಿವೆ.

ಕೃಷ್ಣಾನದಿ ದಂಡೆ ಹಾಗೂ ಸಮೀಪದ ಗ್ರಾಮಗಳಿಗೆ ಹಾನಿಯಾಗದಂತೆ ಜಿಲ್ಲಾಡಳಿತ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಕೃಷ್ಣಾ ನದಿ ದಂಡೆಯ ಸಮೀಪದಲ್ಲಿ ವಾಸಿಸುತ್ತಿರುವವರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಅಧಿಕಾರಿಗಳು ಸೂಚಿಸಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಪರಿಸ್ಥಿತಿ ಸದ್ಯಕ್ಕೆ ನಿಯಂತ್ರಣದಲ್ಲಿದೆ ಎಂದು ಅಧಿಕಾರಿ ಮೂಲಗಳು ತಿಳಿಸಿವೆ. ಜಿಲ್ಲೆಯ ಹಿಡಕಲ್, ನವಿಲು ತೀರ್ಥ, ದೂಪ್ದಲ್‍ನಂತಹ ಅಣೆಕಟ್ಟೆಗಳು ಸಹ ಭರ್ತಿಯಾಗಿವೆ. ಈ ಜಲಾಶಯಗಳಿಗೆ ಒಳ ಹರಿವು ಹೆಚ್ಚಿರುವ ಕಾರಣ ಮುನ್ನಚ್ಚರಿಕೆ ಕ್ರಮವಾಗಿ ಹೊರ ಹರಿವನ್ನು ಸಹ ಹೆಚ್ಚಿಸಲಾಗಿದೆ.

ಈ ನಡುವೆ, ಕೊಡಗು ಮತ್ತು ಕೇರಳದಲ್ಲಿ ನೆರೆ ಪರಿಸ್ಥಿತಿಯಿಂದ ತೀವ್ರ ಸಂಕಷ್ಟಕ್ಕೆ ಗುರಿಯಾಗಿರುವವರಿಗೆ ಎಲ್ಲೆಡೆಯಿಂದ ನೆರವಿನ ಮಹಾಪೂರ ಹರಿದು ಬರುತ್ತಿದೆ.


ಸಂಬಂಧಿತ ಟ್ಯಾಗ್ಗಳು

Madikeri flood ಮಹಾರಾಷ್ಟ್ರ ಸಂಚಾರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ