ಕೊಡಗು ಪ್ರವಾಹ: ದೇಣಿಗೆ ನೀಡುವವರಿಗೆ ಆನ್ ಲೈನ್ ವ್ಯವಸ್ಥೆ

Kodagu Flood: Online system for donors

20-08-2018

ಬೆಂಗಳೂರು: ಪ್ರವಾಹ ಪೀಡಿತ ಸಂತ್ರಸ್ತರಿಗೆ ದೇಣಿಗೆ ನೀಡುವವರಿಗೆ ಅನುಕೂಲವಾಗಲೆಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಆನ್ ಲೈನ್ ವ್ಯವಸ್ಥೆ ಮಾಡಿದ್ದಾರೆ.

ಕೊಡಗು ಸಂತ್ರಸ್ತರಿಗೆ ಸಂಘ ಸಂಸ್ಥೆಗಳು, ಉದ್ಯಮಿಗಳು, ಕೈಗಾರಿಕೋದ್ಯಮಿಗಳು, ಸಾರ್ವಜನಿಕರು ಸೇರಿದಂತೆ ದೇಣಿಗೆ ನೀಡುವವರು ಆನ್ ಲೈನ್ ಮೂಲಕ ಹಣವನ್ನು ಪಾವತಿಸಬಹುದು. ಇದಕ್ಕಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿ, ರಾಷ್ಟ್ರೀಯ ವಿಪತ್ತು ಅಕೌಂಟ್ ನಂಬರ್-37887098605, ಐ.ಎಫ್.ಎಸ್.ಸಿ ಕೋಡ್ ಎಸ್.ಬಿ.ಐ.ಎನ್ 0040277, ಎಂಐಸಿಆರ್ ಸಂಖ್ಯೆ 560002419 ಈ ಮೂಲಕ ಹಣವನ್ನು ಪಾವತಿಸಬಹುದು ಎಂದು ಕೋರಲಾಗಿದೆ.

ತಗ್ಗಿದ ಮಳೆಯ ಪ್ರಮಾಣ : ಕೊಡಗು, ಮಲೆನಾಡು ಸೇರಿದಂತೆ ಕರಾವಳಿ ಭಾಗದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸ್ ತಿಳಿಸಿದ್ದಾರೆ. ಈಗ ವಾಡಿಕೆಗಿಂತ ಕಡಿಮೆ ಪ್ರಮಾಣದ ಮಳೆಯಾಗುತ್ತಿದೆ. ಇನ್ನು ಕೆಲವು ದಿನಗಳ ಕಾಲ ಸಾಧಾರಣ ಮಳೆ ಮುಂದುವರೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.

ಕಳೆದ ನಾಲ್ಕೈದು ದಿನಗಳಿಂದ ವಾಡಿಕೆಗಿಂತ ಹೆಚ್ಚು ಪ್ರಮಾಣದ ಮಳೆಯಾಗಿದ್ದರಿಂದ ಅತಿವೃಷ್ಟಿ ಹಾಗು ಪ್ರವಾಹವಾಗಿತ್ತು. ನಿನ್ನೆ ಚಿಕ್ಕಮಗಳೂರು ಹಾಗೂ ಕೊಡಗಿನ ಕೆಲವೆಡೆ ಭಾರೀ ಮಳೆಯಾಗಿದೆ. ಆದರೂ ಒಟ್ಟಾರೆ ಮಳೆ ಪ್ರಮಾಣ ದಿನದಿಂದ ದಿನಕ್ಕೆ ಇಳಿಮುಖವಾಗುತ್ತಿದೆ. ಎಡಬಿಡದೆ ನಿರಂತರವಾಗಿ ಸುರಿದ ಮಳೆಯಿಂದ ಭೂಮಿಯಲ್ಲಿ ತೇವಾಂಶದ ಪ್ರಮಾಣ ಹೆಚ್ಚಾಗಿ ಭೂಕುಸಿತಗಳು ಉಂಟಾಗಿವೆ ಎಂದು ಹೇಳಿದ್ದಾರೆ.

ಕರಾವಳಿ, ಮಲೆನಾಡು ಭಾಗಗಳಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದೆ. ಆದರೆ ರಾಜ್ಯದ ಒಳನಾಡಿನಲ್ಲಿ ಎಲ್ಲೂ ಭಾರೀ ಮಳೆಯಾದ ವರದಿಯಾಗಿಲ್ಲ. ಕೆಲವೆಡೆ ಚದುರಿದಂತೆ ಸಾಧಾರಣ ಪ್ರಮಾಣದ ಮಳೆಯಾಗಿದೆ. ಬಂಗಾಳಕೊಲ್ಲಿಯಲ್ಲಿ ಉಂಟಾಗಿದ್ದ ವಾಯುಭಾರ ಕುಸಿತದ ಪರಿಣಾಮ ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಉತ್ತಮ ಮಳೆಯಾಗಿದೆ. ಸದ್ಯಕ್ಕೆ ರಾಜ್ಯದಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಗಳು ಕಂಡುಬರುತ್ತಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಮಡಿಕೇರಿಗೆ ಪರಿಹಾರ ಸಾಮಗ್ರಿ : ಮಳೆ ಅನಾಹುತದಿಂದ ಸಂಕಷ್ಟಕ್ಕೆ ಸಿಲುಕಿರುವ ಕೊಡಗು ಜಿಲ್ಲೆಯ ಮಡಿಕೇರಿಗೆ ಕೆಎಸ್‍ಆರ್ಟಿಸಿ ಉಚಿತವಾಗಿ ಪರಿಹಾರ ಸಾಮಾಗ್ರಿಗಳನ್ನು ಕೊಂಡೊಯ್ದಿದೆ. ಇಂದು ಬೆಳಗ್ಗೆ 66 ಬಾಕ್ಸ್ ಗಳಲ್ಲಿದ್ದ ಪರಿಹಾರ ಸಾಮಾಗ್ರಿಗಳನ್ನು ಕೆಎಸ್‍ಆರ್ಟಿಸಿ ಬಸ್ಗಳ ಮೂಲಕ ಮಡಿಕೇರಿಗೆ ತಲುಪಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ. ಇದುವರೆಗೂ ಪರಿಹಾರ ಸಾಮಾಗ್ರಿಗಳನ್ನೊಳಗೊಂಡ 162 ಬಾಕ್ಸ್ಗಳನ್ನು ಕೆಎಸ್‍ಆರ್ಟಿಸಿ ನೆರವಿನೊಂದಿಗೆ ಮಡಿಕೇರಿಗೆ ತಲುಪಿಸಲಾಗಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ