ಗುತ್ತಿಗೆ ನೌಕರರ ಅನಿರ್ದಿಷ್ಟಾವಧಿ ಧರಣಿ

The contractor

20-08-2018

ಬೆಂಗಳೂರು: ಹಲವು ತಿಂಗಳಿನಿಂದ ವೇತನ ನೀಡದಿರುವುದನ್ನು ಖಂಡಿಸಿ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಗುತ್ತಿಗೆ ನೌಕರರು ಸೋಮವಾರದಿಂದ ನಗರದಲ್ಲಿ ಅನಿರ್ದಿಷ್ಟಾವಧಿ ಧರಣಿ ಕೈಗೊಂಡಿದ್ದಾರೆ.

ಫ್ರೀಡಂ ಪಾರ್ಕ್‍ನಲ್ಲಿ ನೂರಾರು ಗುತ್ತಿಗೆ ನೌಕರರು, ತಡೆಹಿಡಿದಿರುವ ವೇತನವನ್ನು ಕೂಡಲೇ ಬಿಡುಗಡೆ ಮಾಡಿ ಕಾಲಕಾಲಕ್ಕೆ ವೇತನ ನೀಡಬೇಕೆಂದು ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಇಲಾಖೆಯ ತಾಂತ್ರಿಕ ಸಮಸ್ಯೆಯಿಂದ ವರ್ಷಾನುಗಟ್ಟಲೆ ದುಡಿದ ಪಶು ಸಂಗೋಪನೆ ಇಲಾಖೆಯ ಗುತ್ತಿಗೆ ನೌಕರರನ್ನು ವಿನಾ ಕಾರಣ, ಕೆಲಸದಿಂದ ವಜಾ ಮಾಡಲಾಗುತ್ತಿದೆ. ಅಷ್ಟೇ ಅಲ್ಲದೆ, ಐದಾರು ತಿಂಗಳಿನಿಂದ ವೇತನ ನೀಡಿಲ್ಲ ಎಂದು ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕರ್ನಾಟಕ ಸರ್ಕಾರಿ ಗುತ್ತಿಗೆ ನೌಕರರ ಮಹಾ ಒಕ್ಕೂಟದ ಮುಖಂಡ ಡಾ.ಎಚ್.ವಿ.ವಾಸು ಆರೋಪಿಸಿದರು.

ಹಲವು ವರ್ಷಗಳಿಂದ ಪಶುಸಂಗೋಪನಾ ಇಲಾಖೆಯಲ್ಲಿ ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವ ಗ್ರೂಪ್ ಡಿ ನೌಕರರು, ಡಾಟಾ ಎಂಟ್ರಿ ಆಪರೇಟರ್, ಮತ್ತು ವಾಹನ ಚಾಲಕರನ್ನು ಇಲಾಖೆಯ ತಾಂತ್ರಿಕ ಸಮಸ್ಯೆ ಕಾರಣ ಹೇಳಿ ವಜಾ ಮಾಡಲಾಗುತ್ತಿದೆ. ಇದರಿಂದ ಸಾವಿರಾರು ನೌಕರರ ಬದುಕು ಅತಂತ್ರವಾಗಿದೆ ಎಂದು ದೂರಿದರು.

ಸರ್ಕಾರದ 15 ವಿವಿಧ ಇಲಾಖೆಗಳ 30ಸಾವಿರಕ್ಕೂ ಅಧಿಕ ಗುತ್ತಿಗೆ ನೌಕರರು ವೇತನ ಇಲ್ಲದೆ, ಸಂಕಷ್ಟದಲ್ಲಿದ್ದಾರೆ. ಇದು ಕಾನೂನಿನ ಉಲ್ಲಂಘನೆ ಮಾತ್ರವಲ್ಲದೆ, ಮಾನವ ಹಕ್ಕುಗಳ ಉಲ್ಲಂಘನೆಯೂ ಹೌದು ಎಂದ ಅವರು, ಈ ಕೂಡಲೇ ರಾಜ್ಯ ಸರ್ಕಾರವೂ ಗುತ್ತಿಗೆ ನೌಕರರ ವೇತನ ಪಾವತಿಗೆ ಮುಂದಾಗಬೇಕು. ಯಾವುದೇ ಇಲಾಖೆ ಇರಲಿ, ಹಾಲಿ ದುಡಿಯುತ್ತಿರುವ ನೌಕರರನ್ನು, ವಜಾ ಮಾಡದಂತೆ ಕಟ್ಟುನಿಟ್ಟಿನ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.


ಸಂಬಂಧಿತ ಟ್ಯಾಗ್ಗಳು

contract laborers workers ಪ್ರತಿಭಟನೆ ತಾಂತ್ರಿಕ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ