ಬಂಧಿತ ಪಾಕಿಸ್ತಾನಿ ಪ್ರಜೆಗಳ ಹೆಚ್ಚಿನ ತನಿಖೆಗೆ ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್ !

Kannada News

31-05-2017 484

ಬೆಂಗಳೂರು:- ಇತ್ತೀಚಿಗಷ್ಟೆ ಬೆಂಗಳೂರಿನಲ್ಲಿ ಬಂಧಿಸಲಾಗಿದ್ದ ಮೂವರು ಪಾಕಿಸ್ತಾನದ ಪ್ರಜೆಗಳ ತನಿಖೆ ಚುರುಕುಗೊಂಡಿದ್ದು, ಪಾಕ್ ಪ್ರಜೆಗಳಿಗೆ ಸಂಬಂಧಿಸಿದ ಮಾಹಿತಿ ಕಲೆ ಹಾಕಲು ನಗರ ಪೊಲೀಸರು ಕೇಂದ್ರ ಗೃಹ ಸಚಿವಾಲಯದ ಮೂಲಕ ದೆಹಲಿಯಲ್ಲಿರುವ ಪಾಕಿಸ್ತಾನ ಹೈಕಮಿಷನರ್ ಕಚೇರಿಯನ್ನು ಸಂಪರ್ಕಿಸಿದ್ದಾರೆ. ಪಾಕಿಸ್ತಾನ ಪ್ರಜೆ ಸಮೀರಾ ಅಬ್ದುಲ್ ರಹ್ಮಾನ್ (25) ಅವರು ಕೇರಳದ ಮುಹಮ್ಮದ ಶಿಹಾಬ್ ಅವರನ್ನು ಮದುವೆಯಾಗಿದ್ದರು. ಇವರೊಂದಿಗೆ ಅವರ ಕರಾಚಿಯ ಸಂಬಂಧಿಗಳಾದ ಕ್ರಿಹೊನ್ ಗುಲಾಮ್ ಅಲಿ (26) ಮತ್ತು ಖಾಶಿಪ್ ಶಂಶುದ್ದೀನ್ (30) ಅವರನ್ನು ಮೇ 25ರಂದು ಬಂಧಿಸಲಾಗಿತ್ತು. ತನಿಖೆಗೆ ಸಹಕಾರಿಯಾಗುವ ಅವರ ವೈಯಕ್ತಿಕ ಮಾಹಿತಿಗಳನ್ನು ಪಾಕಿಸ್ತಾನ ರಾಯಭಾರಿ ಕಚೇರಿಯಿಂದ ಕೋರಲಾಗಿದೆ. ಮಾತ್ರವಲ್ಲ ಈ ಮೂವರು ಬೆಂಗಳೂರಿನಲ್ಲಿ ನೆಲೆಸಿದ್ದಾಗ ಪಾಕಿಸ್ತಾನಕ್ಕೆ ಮಾಡಿರುವ ಕರೆಗಳ ಬಗ್ಗೆಯೂ ಕೇಂದ್ರೀಯ ತನಿಖಾ ಸಂಸ್ಥೆ ಪರಿಶೀಲನೆ ನಡೆಸುತ್ತಿದೆ. ಇದುವರೆಗೆ ನಡೆಸಿದ ತನಿಖೆಯಲ್ಲಿ ಇವರು ಯಾವುದೇ ಉಗ್ರರೊಂದಿಗೆ ಸಂಪರ್ಕ ಹೊಂದಿರುವ ಬಗ್ಗೆ ಮಾಹಿತಿ ಇಲ್ಲ. ಅವರು ಯಾವುದಾದರೂ ಸ್ಲೀಪರ್ ಸೆಲ್ ಭಾಗವೇ ಎಂಬುದರ ಬಗ್ಗೆಯೂ ಪರೀಶೀಲನೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಇವರಿಗೆ ಗಡಿಯಲ್ಲಿ ಯಾರಾದರೂ ಸಹಾಯ ಮಾಡಿದ್ದಾರೆಯೇ ಎಂಬುದರ ಬಗ್ಗೆಯೂ ಮಾಹಿತಿ ಪಡೆಯಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಲ್ಲದೆ ಹೆಚ್ಚಿನ ವಿಚಾರಣೆಗೆ ರಿಸರ್ಚ್ & ಅನಲಿಸಿಸ್ ವಿಂಗ್ (ರಾ) ಅಧಿಕಾರಿಗಳ ತಂಡ ನಗರಕ್ಕೆ ಬಂದಿದೆ. ಇದೇ ವೇಳೆ ಪಾಕ್ ಪ್ರಜೆಗಳು ದೇಶಕ್ಕೆ ನುಸುಳಿದ್ದು ಹೇಗೆ ಎಂಬ ಮಾಹಿತಿ ಕಲೆ ಹಾಕಲಿದೆ. ಉಗ್ರರ ಸಹಾಯ ಪಡೆದು ಭಾರತ-ನೇಪಾಳ ಗಡಿ ದಾಟಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿರುವ ಅಧಿಕಾರಿಗಳು, ಮುಂದಿನ ದಿನಗಳಲ್ಲಿ ಸ್ಲೀಪರ್ ಸೆಲ್ ಗಳ ಕೆಲಸ ಮಾಡಬಹುದಾದ ಸಾಧ್ಯತೆಗಳ ಬಗ್ಗೆ ಅನುಮಾನ ಹೊಂದಿದ್ದಾರೆ. ಆರೋಪಿಗಳು 9 ತಿಂಗಳಲ್ಲಿ 18 ಮಂದಿಯ ಜತೆ ಸಂಪರ್ಕ ಮಾಡಿದ್ದಾರೆ. ಪಾಕಿಸ್ತಾನದ 25ಕ್ಕೂ ಅಧಿಕ ಜನರ ಜೊತೆ ನಿರಂತರ ಸಂಪರ್ಕ ಹೊಂದಿದ್ದರು ಎಂದು ಹೇಳಲಾಗಿದೆ. ಬಂಧಿತರು ಸದ್ಯ ಸಿಸಿಬಿ ಪೊಲೀಸರ ವಶದಲ್ಲಿದ್ದಾರೆ.


ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ