'ಅಟಲ್ ಗೆ ಅಟಲ್ ಜಿ ಅವರೇ ಸಾಟಿ'

final tribute to atal ji in bjp office bengaluru

17-08-2018

ಬೆಂಗಳೂರು: ಅತಂತ್ರ ವಿಧಾನಸಭೆಯಲ್ಲಿ ಅಧಿಕಾರ ನಡೆಸುವುದು ಬೇಡ ಎಂದು ಕರ್ನಾಟಕದಲ್ಲಿ ರಾಮಕೃಷ್ಣ ಹೆಗಡೆ ಸರ್ಕಾರಕ್ಕೆ ವಾಜಪೇಯಿ ಬೇಷರತ್ ಬೆಂಬಲ ನೀಡಿದ್ದರು. ಕಾಂಗ್ರೆಸ್ ಅಧಿಕಾರಕ್ಕೆ ಬರುವುದನ್ನು ತಡೆದಿದ್ದೇವೆ. ಮುಂದೆ ನಮ್ಮ ಪಕ್ಷಕ್ಕೆ ಅಧಿಕಾರ ಸಿಗಲಿದೆ ಚಿಂತಿಸಬೇಡಿ ಎಂದಿದ್ದರು ಅದರಂತೆ ನಾವು ರಾಜ್ಯದಲ್ಲಿ ಅಧಿಕಾರ ನಡೆಸಿದೆವು ಎಂದು ಮಾಜಿ ಸಭಾಪತಿ ಡಿ.ಹೆಚ್.ಶಂಕರಮೂರ್ತಿ ಸ್ಮರಿಸಿದರು.

ಮಾಜಿ ಪ್ರಧಾನಿ ವಾಜಪೇಯಿ ನಿಧನ ಹಿನ್ನಲೆ ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ಶ್ರದ್ಧಾಂಜಲಿ ಸಲ್ಲಿಕೆ ಸಭೆಯಲ್ಲಿ ಮಾತನಾಡಿದ ಅವರು, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಚಾಣಾಕ್ಷ ರಾಜಕಾರಣಿ. ಅವರ ದಿಟ್ಟ ನಿರ್ಧಾರಗಳ ಫಲವಾಗಿ ಇಂದು ನಾವು ರಾಜ್ಯದಲ್ಲಿ ಅಧಿಕಾರಕ್ಕೇರುವ ಮಟ್ಟಕ್ಕೆ ಬೆಳೆದಿದ್ದೇವೆ ಎಂದರು. 

ಅಟಲ್ ಅವರ ಪರಿಶ್ರಮದಿಂದಲೇ ಬಿಜೆಪಿ ಇಷ್ಟು ದೊಡ್ಡದಾಗಿ ಬೆಳೆಯಲು ಸಾಧ್ಯವಾಗಿದೆ. ಅವರು ರಾಜಕಾರಣಿಯಾಗಿರದೇ ಇದ್ದಿದ್ದರೆ ದೇಶದ ಅಂತ್ಯಂತ ಹೆಮ್ಮೆಯ ಕವಿಯಾಗುತ್ತಿದ್ದರು. ಅವರ ಮಾತಿನಲ್ಲಿ ಅವರೊಳಗಿದ್ದ ಕವಿ ಹೊರಬರುತ್ತಿದ್ದ, ಕವಿಯೂ ಆಗದಿದ್ದರೆ ಒಳ್ಳೆಯ ಪತ್ರಕರ್ತ ಆಗಿರುತ್ತಿದ್ದರು ಎಂದರು.

1983ರಲ್ಲಿ ವಿಧಾನಸಭಾ ಚುನಾವಣಾ ಪ್ರಚಾರಕ್ಕೆ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಕರೆತಂದು ಪ್ರಚಾರ ಮಾಡಿಸಲಾಯಿತು. ಆಗ ನಮಗೆ 18 ಸ್ಥಾನ ಬಂತು. ಮೊದಲ ಬಾರಿಗೆ ಕರ್ನಾಟಕದಲ್ಲಿ ಕಾಂಗ್ರೆಸ್‍ಗೆ ಸೋಲಾಯಿತು. ಆದರೆ, ಅತಂತ್ರ ವಿಧಾನಸಭೆ ನಿರ್ಮಾಣವಾಯಿತು. ಆಗ ವಾಜಪೇಯಿ ಬೇಷರತ್ ಬೆಂಬಲವನ್ನು ರಾಮಕೃಷ್ಣ ಹೆಗಡೆ ಸರ್ಕಾರಕ್ಕೆ ಘೋಷಿಸಿದರು. ಮಂತ್ರಿ ಸ್ಥಾನ ಸಿಗುವ ಸಾಧ್ಯತೆ ನಮ್ಮ ಪಕ್ಷಕ್ಕೆ ಇದ್ದರೂ ಪಡೆಯಲಿಲ್ಲ ಎಂದರು.

ಕಾಂಗ್ರೆಸ್ ಸೋಲಬೇಕು ಎನ್ನುವ ನಮ್ಮ ಉದ್ದೇಶ ಈಡೇರಿದೆ, ನಾವು ಅಧಿಕಾರಕ್ಕೆ ಬರಲ್ಲ ಅಂತಾ ಗೊತ್ತಿತ್ತು. ಆದರೆ, ಕಾಂಗ್ರೆಸ್ ಗೆಲ್ಲಬಾರದು ಎನ್ನುವ ಗುರಿ ತಲುಪಿದ್ದೇವೆ, ಒಡೆದಾಳುವ ನೀತಿಯಿಂದ ಅಧಿಕಾರಕ್ಕೆ ಬರುವ ಕಾಂಗ್ರೆಸ್ ತಂತ್ರ ಈಡೇರಿಲ್ಲ, ನಮ್ಮ ಬೇಷರತ್ ಬೆಂಬಲದಿಂದ ರಾಜ್ಯದಲ್ಲಿ ಪಕ್ಷ ಸಮರ್ಥವಾಗಿ ಸಂಘಟನೆಯಾಯಿತು ಎಂದರು.

ಬಿಜೆಪಿ ಹಿರಿಯ ನಾಯಕ ರಾಮಚಂದ್ರೇಗೌಡ ಮಾತನಾಡಿ, 1970 ಡಿ.8 ರಂದು ಮೊದಲ ಬಾರಿ ಅಟಲ್ ಜೊತೆ ಮಾತನಾಡಿದ್ದೆ, ಜನಸಂಘದ ಕಾಲದಲ್ಲಿ ಕಾರ್ಪೋರೇಷನ್ ಚುನಾವಣೆ ಕುರಿತ ಸಭೆ ಅದಾಗಿತ್ತು. ನಾನು ಗೆಲ್ಲುತ್ತೇನೆ ಎಂದು ಅಂದೇ ಅಟಲ್ ಜಿ ಹೇಳಿದ್ದರು, ಅದರಂತೆ ನಾನು ಗೆದ್ದಿದ್ದೆ, ಅಟಲ್ ಅವರನ್ನು ಬೇರೆಯವರಿಗೆ ಹೋಲಿಕೆ ಮಾಡಲು ಸಾಧ್ಯವಿಲ್ಲ. ಸೂರ್ಯನನ್ನು ಸೂರ್ಯನಿಗೇ ಹೋಲಿಸಬೇಕು ಎಂದರು.

ಗುಲ್ಬರ್ಗಾ ಚುನಾವಣಾ ವೇಳೆ ತಾಲ್ಲೂಕು ತಾಲ್ಲೂಕಿಗೆ ಹೋಗಿದ್ದರು, ಅವರು ಬದುಕಿದ್ದಾಗಲೂ ಕಷ್ಟ ಕೊಟ್ಟೆವು ಕಡೆಯ ಕಾಲದಲ್ಲಿಯೂ ಕೊಟ್ಟೆವು, ಗಂಧದ ರೀತಿ ದೇಹವನ್ನು ಸವೆಸಿ ಸುಗಂಧ ನೀಡಿದ್ದರು. ಭದ್ರಾವತಿ ಕಾರ್ಯಕರ್ತ ಲಕ್ಷ್ಮೀನಾರಾಯಣ ಎಂಬುವರು ಆತ್ಮಹತ್ಯೆ ಮಾಡಿಕೊಂಡಿದ್ದಾಗ, ಅವರ ಕುಟುಂಬಕ್ಕೆ ಸಾಂತ್ವನ ಹೇಳಲು ಬಂದ ಅಟಲ್ ಶಿವಮೊಗ್ಗ ಸಮಾವೇಶದಲ್ಲಿ ಮಾತನಾಡುತ್ತಾ ಇಂದು ಪಕ್ಷ ಸೊತಿದೆ, ನಾನು ಸೋತಿದ್ದೇನೆ ಆದರೂ ಎಲ್ಲವೂ ಒಳ್ಳೆಯದೇ ಆಗಿದೆ ಎಂದಿದ್ದರು. ಬೆಂಗಳೂರು ಸಮಾವೇಶದಲ್ಲಿ ಮಾತನಾಡುತ್ತಾ ನಾ ಧೈರ್ಯಂ ನಾ ಪಲಾಯನಂ ಎಂದಿದ್ದರು. ಆದರೆ ಅವರು ಇಂದು ನಮ್ಮೊಂದಿಗೆ ಇಲ್ಲ ಆದರೆ ಅವರ ಸ್ಪೂರ್ತಿ ನಮ್ಮ ಜೊತೆ ಇದೆ ಎಂದರು.

ನಂತರ ಮಾತನಾಡಿದ ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್, ಕೇವಲ ಎರಡು ಸೀಟು ಗೆದ್ದಾಗ ಎಲ್ಲರೂ ಗೇಲಿ ಮಾಡಿದ್ದರು. ಈ ಪಕ್ಷವೂ ಇತರ ಪಕ್ಷದಂತೆ ಎಂದಿದ್ದರು. ಆದರೆ ಅಟಲ್ ಸ್ವತಃ ಸೋತಿದ್ದರೂ ನ ದೈನ್ಯಂ ನ ಪಲಾಯನಂ ಎನ್ನುವ ಹೇಳಿಕೆ ನೀಡಿದ್ದರು. ಮೊದಲ ಸಭೆಯಲ್ಲಿಯೇ ಅಟಲ್ ಹೇಳಿದ ಆತ್ಮವಿಶ್ವಾಸದ ಮಾತಿನಂತೆ ಇಂದು ಕತ್ತಲು ಹೋಗಿದೆ ಸೂರ್ಯ ಉದಯವಾಗಿದೆ, ಕಮಲ ಇಡೀ ದೇಶದಲ್ಲಿ ಅರಳಿದೆ ಎಂದರು.

ಆಡಳಿತ ಪಕ್ಷದ ನಾಯಕರು ಮಾತ್ರವಲ್ಲ ಪ್ರತಿಪಕ್ಷಗಳ ನಾಯಕರು ಅಷ್ಟೇ ಏಕೆ ಇಂದು ಪಾಕಿಸ್ತಾನ ನಾಯಕರು ಕೂಡ ಅಟಲ್ ಬಿಹಾರಿ ವಾಜಪೇಯಿ ಬಗ್ಗೆ ನಮನ ಸಲ್ಲಿಸಿರುವುದೇ ಅವರು ಅಜಾತಶತ್ರು ಎನ್ನುವುದದಕ್ಕೆ ಸಾಕ್ಷಿ. ರಾಜ್ಯದಲ್ಲಿ ವಿರೋಧ ಪಕ್ಷ ಆಡಳಿತದಲ್ಲಿ ಇದ್ದರೂ ಪ್ರಧಾನಿಯಾಗಿದ್ದ ವಾಜಪೇಯಿ ಬೆಂಗಳೂರಿಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನೀಡಿದರು, ಮೆಟ್ರೋ ರೈಲು ಯೋಜನೆ ಕರ್ನಾಟಕಕ್ಕೆ ಕೊಟ್ಟರು, ವಾಲ್ಮೀಕಿ, ಅಂಬೇಡ್ಕರ್ ಯೋಜನೆ ಮೂಲಕ ಗುಡಿಸಲು ವಾಸಿಗಳಿಗೆ ಮನೆ ನಿರ್ಮಿಸಿಕೊಟ್ಟರು, ಸರ್ವ ಶಿಕ್ಷಣ ಅಭಿಯಾನದ ಮೂಲಕ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿದ್ದನ್ನು ಸ್ಮರಿಸಿದರು.

ಕಾರ್ಗಿಲ್ ಯುದ್ಧದ ಮೂಲಕ ದೇಶದ ಶಕ್ತಿಯನ್ನು ಜಗತ್ತಿಗೆ ಪರಿಚಯಿಸಿದರು. ಅಮೆರಿಕಾ ಕಣ್ಣಿಗೆ ಕಾಣದೆ ಹುಲ್ಲುಕಡ್ಡಿಯೂ ಅಲ್ಲಾಡಲ್ಲ ಹಾಗಾಗಿ ಹಿಂದಿನ ಪ್ರಧಾನಿಗಳೆಲ್ಲರೂ ಹಿಂದೇಟು ಹಾಕಿದ್ದರು. ಆದರೆ ವಾಜಪೇಯಿ ಪ್ರಧಾನಿ ಆಗಿದ್ದ ವೇಳೆ ಕಲಾಂ ಇಸ್ರೋ ಅಧ್ಯಕ್ಷರಾಗಿದ್ದರು. ಅಮೆರಿಕಾ ಉಪಗ್ರಹದ ಕಣ್ತಪ್ಪಿಸಿ ಪೋಖ್ರಾನ್ ಅಣುಬಾಂಬ್ ಸ್ಪೋಟ ಮಾಡಿ ಅಣ್ವಸ್ತ್ರ ಹೊಂದಿದ ರಾಷ್ಟ್ರಗಳ ಸಾಲಿಗೆ ದೇಶವನ್ನು ಸೇರಿಸಿದರು ಎಂದು ಸ್ಮರಿಸಿದರು. ಮತ್ತೆ ಮತ್ತೆ ಹುಟ್ಟಿಬರಲಿ ಎಂದು ಆಶಿಸಿದರು.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಮಾತನಾಡಿ, ಅಟಲ್ ಗೆ ಅಟಲ್ ಸಾಟಿ, ಅವರು ನಮ್ಮದೇಶಕ್ಕೆ ಮಾತ್ರವಲ್ಲ ಇಡೀ ವಿಶ್ವಕ್ಕೆ ರತ್ನವಾಗಿದ್ದರು, ಎಲ್ಲರ ಸ್ಪೂರ್ತಿ, ಪ್ರೇರಣೆ, ವೈಚಾರಿಕ ಸ್ಥಂಭದಂತಿದ್ದ ದೀಪ ಆರಿದೆ. ಆದರೆ, ಅವರು ಬಿಟ್ಟುಹೋಗಿರುವ ಕಾರ್ಯ ಅಜರಾಮರ. ಚಿರಸ್ಥಾಯಿಯಾಗಿ ಉಳಿದಿವೆ. ಅಟಲ್ ಕಟ್ಟಿದ ಪಕ್ಷದಲ್ಲಿ ನಾವುದ್ದೇವೆ ಎನ್ನುವುದೇ ನಮ್ಮ ಪುಣ್ಯ. ಮಹಾನ್ ವ್ಯಕ್ತಿಯನ್ನು ನಾವು ಕಳೆದುಕೊಂಡಿದ್ದೇವೆ, ಅವರು ನಡೆದ ದಾರಿಯಲ್ಲಿ ನಾವು ಹೋಗುವುದೇ ನಾವು ಸಲ್ಲಿಸುವ ನಿಜವಾದ ಶ್ರದ್ಧಾಂಜಲಿ, ಅಟಲ್ ಕಟ್ಟಿದ ಪಕ್ಷವನ್ನು ಕಟ್ಟೋಣ ಆ ಮೂಲಕ ದೇಶವನ್ನು ಕಟ್ಟೋಣ, ಶೈನಿಂಗ್ ಇಂಡಿಯಾ ಕನಸನ್ನು ನನಸಾಗಿಸೋಣ, ಜಗತ್ತಿನಲ್ಲಿ ಭಾರತ ಬೆಳಗುವ ಅಟಲ್ ಆಸೆಯನ್ನು ಈಡೇರಿಸೋಣ ಎಂದು ಕರೆ ನೀಡಿದರು.


ಸಂಬಂಧಿತ ಟ್ಯಾಗ್ಗಳು

atal bihari vajpayee R.Ashok ಚಿರಸ್ಥಾಯಿ ಪಾಕಿಸ್ತಾನ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ