ರಾಜಧಾನಿಯಲ್ಲಿ ತರಾವರಿ ಕುರಿ-ಮೇಕೆಗಳ ಮಾರಾಟ ಜೋರು

Sale of goat, sheep goes up for Bakrid in bangalore

17-08-2018

ಬೆಂಗಳೂರು: ಬಕ್ರೀದ್ ಆಚರಣೆಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ರಾಜಧಾನಿ ಬೆಂಗಳೂರಿನಲ್ಲಿ ಕುರಿ ಮತ್ತು ಮೇಕೆಗಳ ಮಾರಾಟದ ಭರಾಟೆ ಜೋರಾಗಿದೆ.

ಚಾಮರಾಜಪೇಟೆಯ ಈದ್ಗಾ ಮೈದಾನ ಬನ್ನೇರುಘಟ್ಟ ರಸ್ತೆಯ ಮಸೀದಿ ಬಳಿ ಸೇರಿದಂತೆ ನಗರದ ವಿವಿಧೆಡೆ ತರಾವರಿ ತಳಿಗಳ ಕುರಿ ಮತ್ತು ಮೇಕೆಗಳ ಮಾರಾಟ ಭರದಿಂದ ಸಾಗಿದೆ. ಬಾಗಲಕೋಟೆ, ಜಮಖಂಡಿ, ಮಳವಳ್ಳಿ, ಮಂಡ್ಯ, ಮದ್ದೂರು, ಹೊಸಕೋಟೆ, ಚಿತ್ರದುರ್ಗ ಮತ್ತು ಪಕ್ಕದ ಆಂಧ್ರ ಪ್ರದೇಶ ಹೀಗೆ ರಾಜ್ಯ ಮತ್ತು ಹೊರರಾಜ್ಯಗಳಿಂದ ರೈತರು ಕುರಿ ಹೆಚ್ಚು ಬೆಲೆ ದೊರೆಯಲಿದೆ ಎನ್ನುವ ಆಸೆಯಿಂದ ನಗರಕ್ಕೆ ಲಗ್ಗೆಯಿಟ್ಟಿದ್ದಾರೆ.

ಕೆಂದಕುರಿ, ಬಿಳಿಕುರಿ, ಟಗರು, ಕರಿ ಹೋತ, ಬಿಳಿ ಹೋತ ಸೇರಿದಂತೆ ಹಲವು ಬಗೆಯ ಕುರಿಗಳು ಹಾಸನದ ಗೆಣಸಿ, ಮಂಡ್ಯದ ಕಿರುಗಾವಲು ಭಾಗಗಳ ಕುರಿಗಳು, ಹೋತ, ಮೈಲಾರಿ, ಕರಿಕುರಿ, ಟಗರು ಜಾತಿಯ ಕುರಿಗಳೂ ಮಾರಾಟಕ್ಕಿದ್ದು ಕೋಟ್ಯಾಂತರ ರೂಗಳ ವಹೀವಾಟು ನಡೆದಿದೆ.

ವಿವಿಧ ತಳಿಯ ಕುರಿ: ರಾಜ್ಯದ ಬನ್ನೂರು, ಹಾವೇರಿ, ಚಿತ್ರದುರ್ಗ, ಮುಧೋಳ, ಮಾಗಡಿ, ನೆಲಮಂಗಲ, ಮಂಡ್ಯ, ಚನ್ನಪಟ್ಟಣ, ಆನೇಕಲ್, ಚಿಂತಾಮಣಿ, ಶ್ರೀನಿವಾಸಪುರ, ಮುಳಬಾಗಿಲು, ಕೋಲಾರ, ಕೆಜಿಎಫ್ ಹಾಗೂ ಆಂಧ್ರ, ತಮಿಳುನಾಡು, ಮಹಾರಾಷ್ಟ್ರ ಸೇರಿದಂತೆ ಅನೇಕ ಭಾಗಗಳಿಂದ ಮಾರಾಟಗಾರರು ಮಾರುಕಟ್ಟೆಗೆ ಬಂದಿದ್ದಾರೆ.

ಹೊರ ರಾಜ್ಯದ ಕುರಿಗಳ ಸಂಖ್ಯೆ ಕಡಿಮೆ ಇದ್ದು, ರಾಜ್ಯದ ಕುರಿಗಳೆ ಹೆಚ್ಚಿವೆ. ಅಲ್ಲದೆ, ಹೊರ ರಾಜ್ಯದವರು ಈ ಮಾರುಕಟ್ಟೆಯಿಂದ ಕುರಿಗಳನ್ನು ಖರೀದಿಸುತ್ತಿರುವುದು ಕಂಡು ಬಂತು. ಇವುಗಳಲ್ಲಿ ಬನ್ನೂರು ಕುರಿ, ಜಮುನಾಪುರಿ ತಳಿ, ಅಮೀನ್‍ಘಡ ತಳಿಗಳಿಗೆ ಬೇಡಿಕೆ ಹೆಚ್ಚಿದೆ.

ಅಮೀನ್‍ಘಡ ತಳಿಯ ಕುರಿಯೊಂದಕ್ಕೆ 80 ಸಾವಿರದಿಂದ 3ಲಕ್ಷ ರೂ.ವರೆಗೆ ಮಾರಾಟವಾಗುತ್ತಿರುವುದು ವಿಶೇಷ, ಜೊತೆಗೆ ಕಂದುಕುರಿ 50 ಸಾವಿರ ರೂ.ಗಳಿಗೆ ಮಾರಾಟವಾದರೆ, ಬಿಳಿಕುರಿ 10 ರಿಂದ 15 ಸಾವಿರ ರೂ.ಗಳಿಗೆ ಬಿಕರಿಯಾಗುತ್ತಿವೆ. ಉಳಿದಂತೆ ನಾಟಿ ತಳಿಯ ಕುರಿ ಮತ್ತು ಮೇಕೆಗಳು ಗ್ರಾಹಕರನ್ನು ಸೆಳೆದಿವೆ.

ಕುರಿಗಳ ಮಾರಾಟವು ಕಳೆದ ವರ್ಷಕ್ಕೆ ಹೋಲಿಸಿದರೆ ಕಡಿಮೆಯಾಗಿರುವುದು ಮಾರಾಟಗಾರರ ನಿರಾಸೆಗೆ ಕಾರಣವಾಗಿದೆ. ಕುರಿಗಳ ಬೆಲೆ ಹೆಚ್ಚಳವಾಗಿರುವುದು ಗ್ರಾಹಕರು ಹಾಗೂ ಮಾರಾಟಗಾರರಿಗೆ ಸಮಸ್ಯೆ ತಂದಿದೆ. ಬಕ್ರೀದ್ ಹಬ್ಬಕ್ಕಾಗಿಯೆ ಸಾಕುವ ಕುರಿಗಳನ್ನು 35-40 ಸಾವಿರ ರೂ.ಬೆಲೆ ನಿಗದಿ ಮಾಡಿದರೆ, ಗ್ರಾಹಕರು ಅದೇ, ಕುರಿಯನ್ನು 15-20 ಸಾವಿರ ರೂ.ಗೆ ಕೇಳುತ್ತಾರೆ ಎಂದು ಕುರಿ ವ್ಯಾಪಾರಿಯೊಬ್ಬರು ಬೇಸರ ವ್ಯಕ್ತಪಡಿಸುತ್ತಾರೆ.


ಸಂಬಂಧಿತ ಟ್ಯಾಗ್ಗಳು

Bakrid sheep ಗ್ರಾಹಕ ಸಮಸ್ಯೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ