ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಗಳಲ್ಲಿ ತಂಬಾಕು ಮಾರಾಟ ಸಂಪೂರ್ಣ ನಿಷೇಧ !

Kannada News

31-05-2017 221

ಬೆಂಗಳೂರು:– ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಗಳಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ಹಾಗೂ ಪ್ರಚಾರವನ್ನು ಸಂಪೂರ್ಣ ನಿಷೇಧಿಸಲಾಗಿದೆ ಎಂದು ಕೆಎಸ್ಆರ್‌ಟಿಸಿಯ ವ್ಯವಸ್ಥಾಪಕ ನಿರ್ದೇಶಕ ಎಸ್.ಆರ್. ಉಮಾಶಂಕರ್ ಹೇಳಿದರು. ಕೆಎಸ್‌ಆರ್‌ಟಿಸಿಯಿಂದ ವಿಶ್ವ ತಂಬಾಕು ಮುಕ್ತ ದಿನಾಚರಣೆಯ ಅಂಗವಾಗಿ ನಗರದ ಮೈಸೂರು ರಸ್ತೆಯಲ್ಲಿರುವ ಸ್ಯಾಟಲೈಟ್ ಬಸ್ ನಿಲ್ದಾಣದಲ್ಲಿಂದು ಸಾರ್ವಜನಿಕರಿಂದ ಬಸ್ ನಿಲ್ದಾಣಗಳಲ್ಲಿ ವಶಪಡಿಸಿಕೊಂಡ ತಂಬಾಕು ಉತ್ಪನ್ನಗಳಿಗೆ ನೀರು ಹಾಕಿ ನಾಶಪಡಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು, ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಸ್ ನಿಲ್ದಾಣಗಳಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ಹಾಗೂ ಪ್ರಚಾರವನ್ನು ನಿಷೇಧಿಸಲಾಗಿದೆ, ಬಸ್ ನಿಲ್ದಾಣಗಳಲ್ಲಿ ಧೂಮಪಾನ ನಿಷೇಧದ ನಂತರವೂ ಧೂಮಪಾನ ಹಾಗೂ ತಂಬಾಕು ಉತ್ಪನ್ನಗಳನ್ನು ಬಳಸಿದ ಸುಮಾರು 1 ಲಕ್ಷ ಜನರಿಂದ 2 ಕೋಟಿ ರೂ. ದಂಡದ ಹಣವನ್ನು ವಸೂಲಿ ಮಾಡಲಾಗಿದೆ ಎಂದು ತಿಳಿಸಿದರು. ಕಳೆದ 5-6 ವರ್ಷಗಳಿಂದ ತಂಬಾಕು ಉತ್ಪನ್ನಗಳನ್ನು ಬಳಕೆ ಮಾಡದಂತೆ ಪ್ರಚಾರ ಮಾಡಲಾಗುತ್ತದೆ, ಅದಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಬಸ್ ನಿಲ್ದಾಣಗಳಲ್ಲಿ ಧೂಮಪಾನ ಮಾಡಿ ಸಿಕ್ಕಿಬೀಳುವವರ ಸಂಖ್ಯೆ ಕಡಿಮೆಯಾಗಿದೆ. ವಿಶ್ವ ಆರೋಗ್ಯ ಸಂಸ್ಥೆ 2030ರ ವೇಳೆಗೆ ತಂಬಾಕು ಸೇವನೆಯಿಂದ ಜಗತ್ತನ್ನು ಮುಕ್ತಗೊಳಿಸುವ ಗುರಿಯನ್ನು ಹೊಂದಿದೆ. ತಂಬಾಕು ವಿರುದ್ಧದ ಹೋರಾಟ ಕಷ್ಟ, ಜನ ಮನಸ್ಸು ಮಾಡಿದರೆ ಮಾತ್ರ ತಂಬಾಕು ಮುಕ್ತ ಪ್ರಪಂಚ ರೂಪುಗೊಳ್ಳುತ್ತದೆ. ಧೂಮಪಾನ ವ್ಯಸನಿಗಳ ಮನಃಪರಿವರ್ತನೆಗಳ ಜಾಗೃತಿ ಮೂಡಿಸುವ ಕೆಲಸದಲ್ಲಿ ಕೆಎಸ್‌ಆರ್‌ಟಿಸಿ ಮುಂದಿದೆ ಎಂದರು. ಕೆಎಸ್‌ಆರ್‌ಟಿಸಿ ಸಿಬ್ಬಂದಿಗೂ ತಂಬಾಕು ಉತ್ಪನ್ನಗಳಿಂದ ಆರೋಗ್ಯದ ಮೇಲೆ ಆಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಕೆಲಸ ನಡೆದಿದೆ. ಆಯ್ದ ಬಸ್ ನಿಲ್ದಾಣಗಳಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರವನ್ನು ನಡೆಸಲಾಗುವುದು ಎಂದು ಅವರು ಹೇಳಿದರು.


ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ