ಎಲ್ಲಿ ನೀರಪ್ಪೋ.. ಎಲ್ಲಿ ನೀರು..!?

Kannada News

26-01-2017 425

ಕರ್ನಾಟಕ ಹಿಂದೆಂದೂ ಕಂಡರಿಯದಂತಹ ಭೀಕರ ಬರದ ದವಡೆಗೆ ಸಿಲುಕಿದೆ. ರಾಜ್ಯದ 136 ತಾಲೂಕುಗಳಲ್ಲಿ ಕುಡಿಯುವ ನೀರಿಲ್ಲದೆ, ರಾಸುಗಳಿಗೆ ಮೇವಿಲ್ಲದೆ, ಉದ್ಯೋಗವೂ ಇಲ್ಲದೆ  ಜನ ಪರದಾಡುತ್ತಿದ್ದಾರೆ. ಇದು ಸಾಲದ್ದಕ್ಕೆ ಬಿಸಿಲಿನ ತಾಪ 40 ಡಿಗ್ರಿ ಸೆಂಟಿಗ್ರೇಡ್ ದಾಟುತ್ತಿರುವುದು ಜನರ ಬದುಕನ್ನು ಹೈರಾಣ ಮಾಡಿದೆ. ಹಿಂದೆ 1973ರಲ್ಲಿ ರಾಜ್ಯದಲ್ಲಿ ಇಂತಹ ಬರಗಾಲದ ಪರಿಸ್ಥಿತಿ ನಿರ್ಮಾಣವಾಗಿತ್ತು, ಆಗ ಮಳೆ ಅಭಾವ ಹಾಗೂ ರೋಗ ಬಾಧೆಯಿಂದ ಬೆಳೆ ಹಾನಿಯಾಗಿ ಜನ ತತ್ತರಿಸಿದ್ದರು. ಆದರೆ, ಕುಡಿಯುವ ನೀರಿಗೆ ಅಂತಹ ತತ್ವಾರ ಉಂಟಾಗಿರಲಿಲ್ಲ.


ಅದಕ್ಕೆ ಪ್ರಮುಖ ಕಾರಣ, ಅಂದು ಇಷ್ಟೊಂದು ಪ್ರಮಾಣದಲ್ಲಿ ಅಂತರ್ಜಲ ದುರ್ಬಳಕೆಯಾಗಿರಲಿಲ್ಲ. ನದಿ, ಹಳ್ಳ, ತೊರೆಗಳ ಮಧ್ಯದಲ್ಲಿ ಒಂದು ಗುಂಡಿ ತೋಡಿದರೆ ಸಾಕು, ಜೀವಜಲ ಚಿಮ್ಮುತ್ತಿತ್ತು, ಅಂದಿನ ಬರಗಾಲದ ಸಮಯದಲ್ಲಿ, ಸರ್ಕಾರ ಕೆರೆಗಳಲ್ಲಿ ಬಾವಿಗಿಂತಲೂ ದೊಡ್ಡ‍ದಾದ ತಗ್ಗುಗಳನ್ನು ತೋಡಿ, ಕುಡಿಯುವ ನೀರಿಗೆ ತೊಂದರೆಯಾಗದಂತೆ ನೋಡಿಕೊಂಡಿತ್ತು. ಆದರೆ ಇದೀಗ, ಎಲ್ಲೆಡೆ ಅಂತರ್ಜಲವನ್ನು ಅತಿಯಾಗಿ ಬಳಸಲಾಗುತ್ತಿದೆ. ಕೆರೆಗಳಿರಲಿ, 500 ಅಡಿ ಆಳ ಬೋರ್‍ವೆಲ್‍ ಕೊರೆದರೂ ನೀರು ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ರಾಯಚೂರು, ಬಳ್ಳಾರಿ, ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ಬಹುತೇಕ ರಾಜ್ಯದ ಎಲ್ಲ ಕಡೆ ಇಂತಹದೇ ಪರಿಸ್ಥಿತಿ ನಿರ್ಮಾಣವಾಗಿದೆ. ದನಕರುಗಳಿಗೆ ಕುಡಿಯುವ ನೀರು ಒದಗಿಸಲೂ ಹರಸಾಹಸ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ.


ಕಳೆದ ವರ್ಷ, ಮುಂಗಾರು ಮತ್ತು ಹಿಂಗಾರಿನ ಎರಡೂ ಅವಧಿಯಲ್ಲಿ ರಾಜ್ಯದಲ್ಲಿ ವಾಡಿಕೆ ಮಳೆಗಿಂತ ಶೇ. 36 ರಷ್ಟು ಕೊರತೆ ಉಂಟಾಗಿದೆ. ಇದರ ಪರಿಣಾಮ ರಾಜ್ಯದ ಪ್ರಮುಖ ಜಲಾಶಯಗಳಾದ ಲಿಂಗನಮಕ್ಕಿ, ಆಲಮಟ್ಟಿ, ತುಂಗಭದ್ರಾ, ಕೆಆರ್‍ಎಸ್‍ ಹೇಮಾವತಿ ಜಲಾಶಯಗಳು ಭರ್ತಿಯಾಗುವುದಿರಲಿ ಶೇ. ಅರ್ಧದಷ್ಟು ನೀರೂ ಶೇಖರಣೆಯಾಗಲಿಲ್ಲ. ಇದರ ಪರಿಣಾಮ, ಕೃಷಿ ಮತ್ತು ವಿದ್ಯುತ್‍ ಉತ್ಪಾದನೆಯ ಮೇಲೂ ಗಂಭೀರ ಪರಿಣಾಮ ಉಂಟಾಗಿದೆ. ಇನ್ನು ರಾಜಧಾನಿ ಬೆಂಗಳೂರಿನಲ್ಲಂತೂ ಕಳೆದ ಡಿಸೆಂಬರ್‍ನಿಂದಲೇ ನೀರಿಗೆ ಅಭಾವ ಉಂಟಾಗಿದೆ. ಮಹಾನಗರಕ್ಕೆ ಕುಡಿಯುವ ನೀರು ಪೂರೈಸುವ ಹೆಸರಘಟ್ಟ, ತಿಪ್ಪಗೊಂಡನಹಳ್ಳಿ ಜಲಾಶಯಗಳು ಒಣಗಿ ನಿಂತು ಹಲವು ವರ್ಷಗಳೇ ಕಳೆದಿವೆ. ಕಳೆದ ವರ್ಷ ತಿಪ್ಪಗೊಂಡನ ಹಳ್ಳಿ ಜಲಾಶಯಕ್ಕೆ ಸ್ವಲ್ಪ ನೀರು ಹರಿದು ಬಂದಿತ್ತಾದರೂ ಜಲಾಶಯ ಸೇರುವ ನದಿ ಮೂಲಗಳು ಕಲುಷಿತಗೊಂಡ ಪರಿಣಾಮ ನೀರು ಬಳಕೆಗೆ ಯೋಗ್ಯವಾಗಿರಲಿಲ್ಲ.


ಇದರಿಂದಾಗಿ ಬೆಂಗಳೂರು ನಗರದ ಜನತೆ ನೀರಿಗಾಗಿ ಕಾವೇರಿಯನ್ನೇ ಆಶ್ರಯಿಸಬೇಕಾಗಿದೆ. ಮಂಡ್ಯ ಜಿಲ್ಲೆಯ ತೊರೆಕಾಡನಹಳ್ಳಿ ಜಲಸಂಗ್ರಹಗಾರದಲ್ಲಿ ಶುದ್ದೀಕರಣಗೊಂಡು, ಸುಮಾರು 85 ಕಿ.ಮೀ ಪೈಪ್‌ ಲೈನ್ ಮೂಲಕ ನಗರಕ್ಕೆ ತಲುಪಿಸಲಾಗುತ್ತದೆ. ಈ ನೀರು ಬೆಂಗಳೂರಿನ ಹೃದಯ ಭಾಗದ ಶೇ. 60 ರಷ್ಟು ಜನರ ಬಾಯಾರಿಕೆಯನ್ನು ಮಾತ್ರ ನೀಗಿಸುತ್ತದೆ. ಇನ್ನು ಮಹಾನಗರ ಬೆಂಗಳೂರಿಗೆ, ಇತ್ತೀಚೆಗೆ ಏಳು ನಗರಸಭೆಗಳು ಮತ್ತು ಒಂದು ಪುರಸಭೆ ಹೊಸದಾಗಿ ಸೇರ್ಪಡೆಯಾಗಿವೆ. ಈ ರೀತಿ ಸೇರ್ಪಡೆಯಾಗಿರುವ ಹೊಸ ಪ್ರದೇಶಗಳ ಪೈಕಿ, ಯಲಹಂಕ, ಬ್ಯಾಟರಾಯನಪುರ, ಕೃಷ್ಣರಾಜಪುರ ಮತ್ತು ಕೆಂಗೇರಿಯ ಕೆಲ ಪ್ರದೇಶಗಳಿಗೆ, ಕಾವೇರಿ ನೀರು ಸರಬರಾಜು ಮಾಡಲಾಗುತ್ತದೆ. ಇದರ ಹೊರತಾಗಿ, ನಗರಕ್ಕೆ 110 ಹಳ್ಳಿಗಳು ಸೇರ್ಪಡೆಯಾಗಿದ್ದು, ಇಲ್ಲಿ ಸ್ಥಳೀಯ ಆಡಳಿತದವರು ಪೂರೈಸುತ್ತಿರುವ ಅಂತರ್ಜಲ ಆಧಾರಿತ ಟ್ಯಾಂಕರ್ ನೀರೇ ಪ್ರಮುಖ ಆಧಾರವಾಗಿದೆ.


1991ರ ನಂತರ, ಬೆಂಗಳೂರು ಬೃಹದಾಕಾರವಾಗಿ ಬೆಳೆಯುತ್ತಾ ಸಾಗಿತ್ತು. ಅಂದು ಸರ್ಕಾರ, ನಗರೀಕರಣಕ್ಕೆ ಉತ್ತೇಜನ ನೀಡುವ ಸಲುವಾಗಿ ಭೂಮಿಯ ಬಳಕೆಗೆ ಇದ್ದ ನಿರ್ಬಂಧ ತೆಗೆದು ಹಾಕಿತ್ತು. ಹೀಗಾಗಿ ಬೆಂಗಳೂರನ್ನು ಆವರಿಸಿದ್ದ ಹಸಿರು ವಲಯ ಮಾಯವಾಗಿ ಕಾಂಕ್ರೀಟ್‍ ವಲಯ ಆವರಿಸಿಕೊಂಡಿತ್ತು. ಈಗಲೂ ಕೂಡ ದಾಖಲೆಗಳಲ್ಲಿ ಹಸಿರು ವಲಯ, ಹಳದಿ ವಲಯ ಎಂಬ ವಿಶೇಷಗಳಿವೆ. ಆದರೆ, ಈ ಎಲ್ಲಾ ವಲಯಗಳು ಇದೀಗ ಕಾಂಕ್ರೀಟ್ ವಲಯಗಳಾಗಿ ಪರಿಣಮಿಸಿವೆ. ಸುಮಾರು 840 ಚದರ ಕಿ.ಮೀ ವ್ಯಾಪ್ತಿಯ ಈ ಮಹಾನಗರಕ್ಕೆ ನೀರು ಕೊಡುವುದು ಎಂತಹ ಆಡಳಿತ ವ್ಯವಸ್ಥೆಗೂ ಸವಾಲೇ ಸರಿ. ಅದರಲ್ಲೂ ಸುತ್ತ ಮುತ್ತ ಯಾವುದೇ ದೊಡ್ಡ ನದಿ ಮೂಲವಿಲ್ಲದ ಬೆಂಗಳೂರಿನಂತಹ ನಗರಕ್ಕೆ ನೀರು ಕೊಡುವುದಂತೂ ಒಂದು ಪವಾಡ.


ಬೆಂಗಳೂರು ಜಲಮಂಡಳಿ, ಇಂತಹ ಪವಾಡವನ್ನು ಮಾಡುತ್ತಿದೆಯಾದರೂ ಅದು ಅಷ್ಟಕ್ಕಷ್ಟೇ ಆಗಿದೆ. ಹೀಗಾಗಿ, ಬೆಂಗಳೂರಿನ ಬಹುತೇಕ ಜನರ ನೀರಿನ ಬೇಡಿಕೆ ನೀಗಿಸುತ್ತಿರುವುದು ಖಾಸಗಿ ಟ್ಯಾಂಕರ್‍ಗಳು.


ಬೆಂಗಳೂರು ಜಲಮಂಡಳಿ ಮಾಹಿತಿ ಪ್ರಕಾರ ನಗರದಲ್ಲಿ ಸುಮಾರು 381 ಅಧಿಕೃತ ಖಾಸಗಿ ನೀರು ಸರಬರಾಜು ಕಂಪನಿಗಳಿವೆ. ಪ್ರತಿಯೊಂದು ಕಂಪನಿಯಲ್ಲಿ ಕನಿಷ್ಟ ನಾಲ್ಕರಿಂದ 15 ಟ್ಯಾಂಕರ್‍ಗಳವರೆಗೂ ಇರುತ್ತವೆ. ಪ್ರತಿ ಟ್ಯಾಂಕರ್, ಕನಿಷ್ಟ 4 ಸಾವಿರ ಲೀಟರ್‍ ನೀರು ಸಂಗ್ರಹಣೆ ಸಾಮರ್ಥ್ಯ ಹೊಂದಿರುತ್ತದೆ. ಪ್ರತಿ ಟ್ಯಾಂಕರ್‍ ನೀರಿನ ಬೆಲೆ ಕನಿಷ್ಟ 500 ರೂಪಾಯಿಗಳಿಂದ 1200 ರೂಪಾಯಿವರೆಗೆ ನಿಗದಿಯಾಗಿದೆ ಆದರೆ, ಇದು ಬೇಡಿಕೆ ಆಧರಿಸಿ ನಿಗದಿ ಮಾಡಲಾಗುವ ಬೆಲೆ ಅಷ್ಟೇ. ಇನ್ನು, ಜಲಮಂಡಳಿಗೆ ಮಾಹಿತಿ ಇಲ್ಲದಂತೆ 200ಕ್ಕೂ ಹೆಚ್ಚು ಮಂದಿ ಖಾಸಗಿಯವರು ಟ್ಯಾಂಕರುಗಳ ಮೂಲಕ ನೀರು ಸರಬರಾಜು ಮಾಡಿ ಹಣ ಮಾಡುವುದರಲ್ಲಿ ನಿರತರಾಗಿದ್ದಾರೆ..


ಬೆಂಗಳೂರಿನ ಕೇಂದ್ರ ಭಾಗದಲ್ಲಿನ ಕೆಲವು ಪ್ರದೇಶಗಳನ್ನು ಹೊರತುಪಡಿಸಿದರೆ, ಹೊರವಲಯದ ಬಹುತೇಕ ಪ್ರದೇಶಗಳಿಗೆ ಟ್ಯಾಂಕರ್ ನೀರೇ ಆಧಾರ. ಮನೆಗಳಲ್ಲಿ ಸಂಪ್ ಹೊಂದಿರುವವರು ಟ್ಯಾಂಕರ್‍ ಮೂಲಕ ನೀರು ತುಂಬಿಸಿಕೊಳ್ಳುತ್ತಾರೆ. ಸಂಪ್ ಸೌಲಭ್ಯ ಇಲ್ಲದವರೂ ಕೂಡ ಟ್ಯಾಂಕರ್ ನಿಂದಲೇ ನೀರು ಪಡೆಯುತ್ತಾರೆ. ಆದರೆ ಇದು, ಬಿಂದಿಗೆಗಳ ಲೆಕ್ಕಾಚಾರದಲ್ಲಿ ನಡೆಯುತ್ತದೆ. ಪ್ರತಿ ಬಿಂದಿಗೆ ನೀರಿಗೆ 2 ರೂಪಾಯಿಯಿಂದ 20 ರೂಪಾಯಿಯವರೆಗೂ ಇರುತ್ತದೆ. ಇದೂ ಕೂಡ ಬೇಡಿಕೆ ಆಧರಿಸಿ ನಿರ್ಧಾರವಾಗುವ ಬೆಲೆ. ಬೆಂಗಳೂರಿನಬಹುತೇಕ ಪ್ರದೇಶಗಳು ಟ್ಯಾಂಕರ್‍ ನೀರನ್ನೇ ಅವಲಂಬಿಸಿವೆ. ಹೀಗಾಗಿ ಇದು ಬೆಂಗಳೂರಿನಲ್ಲಿ ಬೃಹತ್‍ ಜಾಲವಾಗಿ ಹಬ್ಬಿಕೊಂಡಿದೆ. ಅಷ್ಟೇ ಅಲ್ಲ, ಇದು ರಿಯಲ್‍ ಎಸ್ಟೇಟ್‍ ಮಾಫಿಯ, ಕಸ ಮಾಫಿಯ, ಜಾಹೀರಾತು ಮಾಫಿಯ ಕಾಂಟ್ರಾಕ್ಟರ್ಸ್‌ ಮಾಫಿಯಾ ರೀತಿಯಲ್ಲೇ ಟ್ಯಾಂಕರ್ ಮಾಫಿಯ ಆಗಿ ಪರಿವರ್ತನೆಯಾಗಿದೆ. ಅದೇನಪ್ಪಾ ಟ್ಯಾಂಕರ್‍ ಮಾಫಿಯಾ ಅಂತೀರಾ, ಈ ಬೃಹತ್ ಟ್ಯಾಂಕರ್ ನೀರಿನ ವಹಿವಾಟಿನಲ್ಲಿರುವ ಬಹುತೇಕ ಮಂದಿ, ರಾಜಕಾರಣಿಗಳು ಮತ್ತು ಸಮಾಜ ಸೇವಕರ ಹೆಸರಿನಲ್ಲಿ ಕಾಣಿಸುವ ಮರಿ ಪುಡಾರಿಗಳು. ಜನಪ್ರತಿನಿಧಿಗಳೇ ಇವರ ಆಶ್ರಯದಾತರು!


ಬೆಂಗಳೂರಿನ ಕೆಲವು ಶಾಸಕರು ಮತ್ತು ಬಿಬಿಎಂಪಿ ಸದಸ್ಯರು ಈ ಟ್ಯಾಂಕರ್‍ ನೀರು ಸಾಗಣೆ ಜಾಲದಲ್ಲಿ ನಿರತರಾಗಿದ್ದಾರೆ. ಇವರ ಜೊತೆಗೆ, ಜಲಮಂಡಳಿಯ ಕೆಲವು ಸಿಬ್ಬಂದಿ ಹಾಗೂ ವಾಲ್ವ್‌ಮನ್‍ ಅಂದರೆ, ನೀರಿನ ಕವಾಟ ತಿರುಗಿಸಿ ಗಲ್ಲಿ ಗಲ್ಲಿಗಳಿಗೆ ಕಾವೇರಿ ನೀರು ಬಿಡಲು ನೇಮಕವಾಗಿರುವವರು, ಟ್ಯಾಂಕರ್ ನೀರು ಸಾಗಣೆ ಜಾಲದಲ್ಲಿದ್ದಾರೆ ಎಂದು ಸ್ವಯಂ ಸೇವಾ ಸಂಸ್ಥೆಯೊಂದು ಮಾಡಿರುವ ಅಧ್ಯಯನ ವರದಿಯಲ್ಲಿ ಬಹಿರಂಗಗೊಂಡಿದೆ.


ನಮ್ಮ ಬೆಂಗಳೂರು ಪ್ರತಿಷ್ಠಾನ, ಸಿವಿಕ್‍ ಬೆಂಗಳೂರು, ಜನಾಗ್ರಹ ಸೇರಿದಂತೆ, ಹಲವು ಸಂಘಟನೆಗಳು, ಟ್ಯಾಂಕರ್‍ ಮಾಫಿಯಾ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿವೆ. ಈ ಟ್ಯಾಂಕರ್ ಮಾಫಿಯ ನಿಯಂತ್ರಣಕ್ಕೆ ಜರೂರಾಗಿ ಕ್ರಮಕೈಗೊಳ್ಳಬೇಕಾಗಿದೆ ಎಂದು ಪ್ರತಿಪಾದಿಸಿವೆ. ಇದಕ್ಕೆ ಕಾರಣವಿಷ್ಟೇ, ಇಡೀ ವಾಟರ್ ಟ್ಯಾಂಕರ್‍ ಜಾಲ ಒಂದು ವರ್ತುಲದಂತೆ ಕಾರ್ಯ ನಿರ್ವಹಿಸುತ್ತದೆ. ಜನಪ್ರತಿನಿಧಿಗಳು, ಸ್ಥಳೀಯ ಅಧಿಕಾರಿಗಳು, ಮರಿರೌಡಿಗಳು ಹೀಗೆ ಒಬ್ಬೊಬ್ಬರೂ ಇದರಲ್ಲಿ ಒಂದಿಷ್ಟು ಪಾಲು ಸಲ್ಲಿಸುತ್ತಾರೆ. ಹೀಗಾಗಿ ಈ ಟ್ಯಾಂಕರ್‍ಗಳ ನೀರಿನ ದರ ನಿಗದಿ ಹಾಗೂ ವಿತರಣೆ ವೈಖರಿಯನ್ನು ಯಾರೂ ಪ್ರಶ್ನಿಸುವಂತಿಲ್ಲ.


ಸಾಮಾನ್ಯ ದಿನಗಳಲ್ಲಿ, ಈ ಟ್ಯಾಂಕರ್‌ ಗಳ ಮಾಲೀಕರು ಜಲಮಂಡಳಿಯ ಸ್ಥಳೀಯ ಅಧಿಕಾರಿಗಳ ನೆರವಿನೊಂದಿಗೆ, ವಾಲ್ವ್‌ಮನ್‍ಗಳನ್ನು ಬಳಸಿಕೊಂಡು ಕಾವೇರಿ ನೀರು ಬರದಂತೆ ಮಾಡಿಸುತ್ತಾರೆ. ಸದ್ಯಕ್ಕೆ ಬೆಂಗಳೂರಿನಲ್ಲಿ ದಿನ ಬಿಟ್ಟು ದಿನ ನೀರು ಬಿಡಲಾಗುತ್ತಿದೆ, ಇಂತಹುದರಲ್ಲಿ ಒಂದು ದಿನ ನೀರು ನಿಲುಗಡೆ ಮಾಡಿದರೂ ಪರಿಸ್ಥಿತಿ ಅಯೋಮಯವಾಗಿಬಿಡುತ್ತದೆ. ಹೀಗಾಗಿ, ನೀರಿನ ಕೊರತೆ ಉಂಟಾದ ಜನತೆ ಅನಿವಾರ್ಯವಾಗಿ ಟ್ಯಾಂಕರ್‍ಗಳ ಮೊರೆ ಹೋಗುತ್ತಾರೆ. ಆಗ ಈ ಟ್ಯಾಂಕರ್‍ ನಿರ್ವಹಣೆದಾರರು ಸಮಯಕ್ಕೆ ತಕ್ಕ ದರ ನಿಗದಿ ಮಾಡುತ್ತಾರೆ. ಈ ರೀತಿ ದರ ನಿಗದಿ ಮಾಡುವಲ್ಲಿ ಕೂಡ ಒಂದು ತಂತ್ರಗಾರಿಕೆಯಿದೆ, ಒಗ್ಗಟ್ಟಿದೆ. ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಟ್ಯಾಂಕರ್‍ ನೀರು ಸರಬರಾಜುದಾರರು ಅಲಿಖಿತ ಒಪ್ಪಂದ ಮಾಡಿಕೊಂಡಿರುತ್ತಾರೆ. ಅದೇನಂದರೆ, ಪ್ರತಿ ಟ್ಯಾಂಕರ್‍ಗೆ ಒಂದೊಂದು ಪ್ರದೇಶ ನಿಗದಿಯಾಗಿದೆ. ಯಾವುದೇ ಕಾರಣಕ್ಕೂ ಈ ವಲಯಕ್ಕೆ ಮತ್ತೊಂದು ವಲಯದ ಟ್ಯಾಂಕರ್ ಪ್ರವೇಶಿಸುವುದಿಲ್ಲ, ನೀರಿನ ದರದ ವಿಷಯ ಮಾತಾಡುವುದಿಲ್ಲ.


ಹೀಗಾಗಿ ಅವರು ನಿಗದಿ ಮಾಡಿದ್ದೇ ದರ, ವಿತರಿಸಿದ್ದಷ್ಟೇ ನೀರು. ಯಾರಾದರೂ ಪ್ರಶ್ನೆ ಮಾಡಿದರೆ, ಮುಂದಿನ ಬಾರಿ ಅವರು ಎಷ್ಟೇ ಗೋಗರೆದರೂ ಟ್ಯಾಂಕರ್ ಬರುವುದಿಲ್ಲ. ಹೀಗಾಗಿ ಯಾರೂ ಕೂಡಾ ಇವರೊಂದಿಗೆ ವಿವಾದ ಮಾಡಿಕೊಳ್ಳುವುದಿಲ್ಲ. ಬದಲಿಗೆ ಚೌಕಾಸಿಗಿಳಿಯುತ್ತಾರೆ ಅಷ್ಟೇ. ಇನ್ನೂ ವಿಶೇಷವೆಂದರೆ ಟ್ಯಾಂಕರ್‍ ಮಾಲೀಕರು ಮತ್ತು ಚಾಲಕರೂ ಕೂಡ ಅನಗತ್ಯವಾಗಿ ಯಾರೊಂದಿಗೂ ಜಗಳಕ್ಕಿಳಿಯುವುದಿಲ್ಲ, ಚೌಕಾಸಿಗೆ ಬಗ್ಗುತ್ತಾರೆ, ಜೊತೆಗೆ ಮಾಮೂಲಿ ಗ್ರಾಹಕರಿಗೆ ಎಂತಹದೆ ಸಮಯ ಬಂದರೂ ಒಂದೇ ರೀತಿ ದರ ವಿಧಿಸುತ್ತಾರೆ. ಏಕೆಂದರೆ ಜಗಳ ಮಾಡಿಕೊಂಡು ವಿವಾದಗಳಾದರೆ ತಮ್ಮ ವ್ಯವಹಾರಕ್ಕೆ ಹೊಡೆತ ಎಂಬುದು ಅವರಿಗೆ ಸ್ಪಷ್ಟವಾಗಿದೆ.


ಇನ್ನು ಪ್ರತಿದಿನ ಪ್ರತಿ ಟ್ಯಾಂಕರ್, ಪ್ರದೇಶದ ಬೇಡಿಕೆ ಆಧರಿಸಿ, 14 ರಿಂದ 16 ಬಾರಿ ಸಂಚರಿಸುತ್ತದೆ. ಜನಸಾಮಾನ್ಯರಿಗೆ ಹಗಲಿನ ವೇಳೆ ನೀರು ಪೂರೈಸಿದರೆ ಹೋಟೆಲ್‍ ಮೊದಲಾದವಕ್ಕೆ ರಾತ್ರಿ ವೇಳೆ ನೀರು ಪೂರೈಸುತ್ತಾರೆ.ಇದೇ ಲೆಕ್ಕಾಚಾರದಲ್ಲಿ, ಪ್ರತಿದಿನ ಒಂದು ಟ್ಯಾಂಕರ್‍ ಎಷ್ಟು ಹಣ ಸಂಪಾದಿಸುತ್ತದೆ. ವ್ಯವಹಾರ ಮಾಡುವವರ ಬಳಿ ಎಷ್ಟು ಟ್ಯಾಂಕರ್‍ಗಳಿವೆ ಎಂಬ ಲೆಕ್ಕಾಚಾರ ಮಾಡಿ, ಪ್ರತಿ ವಾರಕ್ಕೆ ಇಂತಿಷ್ಟು ಎಂಬಂತೆ ವಂತಿಗೆ ನಿಗದಿಯಾಗುತ್ತದೆ. ಚಾಚೂ ತಪ್ಪದೇ ಅದು ಸ್ಥಳೀಯ ಪೊಲೀಸ್, ಜಲಮಂಡಳಿ, ಬಿಬಿಎಂಪಿ, ಬೆಸ್ಕಾಂ, ಆರ್‍ಟಿಐ ಕಾರ್ಯಕರ್ತರ ಸೋಗಿನಲ್ಲಿರುವ ಕೆಲವು ಸುಲಿಗೆದಾರರು ಮತ್ತು ಮರಿ ರೌಡಿಗಳಿಗೆ ಸಂದಾಯವಾಗುತ್ತದೆ.


ಇನ್ನು, ಚುನಾವಣಾ ರಾಜಕಾರಣದಲ್ಲಿರುವವರು, ಕೆಲವೊಂದು ಪ್ರದೇಶದ ನಿರ್ದಿಷ್ಟ ಸಮುದಾಯಗಳನ್ನು ಮತ ಬ್ಯಾಂಕ್‌ಗಳಾಗಿ ಪರಿವರ್ತಿಸಿಕೊಂಡಿದ್ದಾರೆ. ಅಲ್ಲಿಗೆ ಮಾತ್ರ ನಿಗದಿಯಂತೆ ಟ್ಯಾಂಕರ್‌ಗಳು ಹೋಗುತ್ತವೆ. ಆ ಪ್ರತಿನಿಧಿ ಹೆಸರಲ್ಲಿ ಉಚಿತವಾಗಿ ನೀರು ಸರಬರಾಜು ಮಾಡುತ್ತಾರೆ. ಇದಕ್ಕಾಗಿ ವೇಳಾಪಟ್ಟಿ ಕೂಡ ಮಾಡಿಕೊಂಡಿರುತ್ತಾರೆ. ಎಂದಿಗೂ ಈ ವೇಳಾಪಟ್ಟಿ ಬದಲಾಗುವುದಿಲ್ಲ, ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಾರೆ. ಹೀಗಾಗಿ ಇಡೀ ವ್ಯವಹಾರ ಅಬಾಧಿತವಾಗಿ ನಡೆಯುತ್ತದೆ, ಇದಕ್ಕಾಗಿಯೇ ಈ ದಂಧೆಯನ್ನು ಟ್ಯಾಂಕರ್ ಮಾಫಿಯಾ ಅನ್ನುವುದು. ಇನ್ನು ನಗರ ಹೊರವಲಯದಲ್ಲಿ, ಅಪಾರ ಹತ್ತಾರು ಅಪಾರ್ಟ್‍ಮೆಂಟ್‍ಗಳಿವೆ. ವಿವಿಧ ಬಡಾವಣೆಗಳಿವೆ, ಇಲ್ಲಿಗೆ ಕಾವೇರಿ ನೀರು ಕನಸಿನ ಮಾತು. ಸ್ಥಳೀಯ ಆಡಳಿತ ಪೂರೈಸುವ ನೀರು ಯಾವುದಕ್ಕೂ ಸಾಲುವುದಿಲ್ಲ. ಬೋರ್‍ವೆಲ್‍ ಹಾಕಿಸಿಕೊಂಡವರಿಗೆ ಯಾವುದೇ ಸಮಸ್ಯೆಯಿಲ್ಲ. ಬೋರ್‍ವೆಲ್‍ ಇಲ್ಲದ ಬಹುತೇಕರು ಟ್ಯಾಂಕರ್‍ ನೀರನ್ನೇ ಅವಲಂಬಿಸಿದ್ದಾರೆ. ಹೀಗಾಗಿ ಬೆಂಗಳೂರು ಹೊರವಲಯದಲ್ಲಿ ಇದೊಂದು ದೊಡ್ಡ ಉದ್ಯಮವಾಗಿ ಬೆಳೆದಿದೆ. ಕೇಂದ್ರ ಬೆಂಗಳೂರಿನಲ್ಲಿ ಈ ಜಾಲ ಯಾವ ರೀತಿ ಕೆಲಸ ಮಾಡುತ್ತದೆಯೋ, ಅದೇ ರೀತಿ ಇಲ್ಲಿಯೂ ಕಾರ್ಯ ನಿರ್ವಹಿಸುತ್ತದೆ. ವಿಶೇಷವೆಂದರೆ, ಕೇಂದ್ರ ಭಾಗದ ಟ್ಯಾಂಕರ್ ಮಾಲೀಕರನ್ನು ಹೊರತುಪಡಿಸಿದರೆ, ಈ ಪ್ರದೇಶದಲ್ಲಿನ ವಹಿವಾಟುದಾರರಿಗೆ, ಟ್ಯಾಂಕರ್‍ ಚಾಲಕರ ಮತ್ತು ಸಹಾಯಕರ ಸಂಬಳ ಹಾಗೂ ಟ್ಯಾಂಕರ್‍ ಸಂಚಾರದ ಡೀಸೆಲ್ ವೆಚ್ಚ ಬಿಟ್ಟರೆ, ಬೇರೆ ಖರ್ಚಿಲ್ಲ. ಬರುವುದೆಲ್ಲವೂ ಲಾಭವೇ. ಅದರಲ್ಲಿ ಇಂತಿಷ್ಟು ಪ್ರಮಾಣ ವಿವಿಧ ವಲಯದ ಜನರಿಗೆ ವಂತಿಗೆ ರೂಪದಲ್ಲಿ ಮುಟ್ಟಿಸಿದರೆ ಸಾಕು, ಇವರನ್ನು ಯಾರೂ ಕೇಳುವುದಿಲ್ಲ.


ಬೆಂಗಳೂರು ಮಹಾನಗರಕ್ಕೆ 110 ಹಳ್ಳಿಗಳು ಸೇರ್ಪಡೆಯಾಗಿದೆ. ನಗರಕ್ಕೆ ಸೇರ್ಪಡೆಯಾಗುವ ಮುನ್ನ ಇವೆಲ್ಲವೂ ಕೃಷಿ ಆಧಾರಿತ ಪ್ರದೇಶಗಳು. ಹೀಗಾಗಿ ಇಲ್ಲಿನ ಬೋರ್‍ವೆಲ್‍ಗಳೆಲ್ಲಾ ಕೃಷಿ ಬಳಕೆ ಪಂಪ್‍ ಸೆಟ್‍ಗಳು, ಹೀಗಾಗಿ ಇವರಿಗೆ ವಿದ್ಯುತ್‍ ಉಚಿತ. ಈ ಜನ ಕೃಷಿಯನ್ನು ಬಿಟ್ಟು ವರ್ಷಗಳೇ ಕಳೆದರೂ ಇವರ ಪಂಪ್‍ಸೆಟ್‍ಗಳು ಮಾತ್ರ ಇನ್ನೂ ಮೀಟರ್ ಹಾಕದ, ಶುಲ್ಕವೇ ಇಲ್ಲದ ಕೃಷಿ ಪಂಪ್‍ಸೆಟ್‍ಗಳೇ. ಇನ್ನು ಇಂತಹ ವಹಿವಾಟಿನಲ್ಲಿರುವವರು ಯಾವುದೇ ನೋಂದಣಿ ಮಾಡಿಕೊಳ್ಳುವಂತಿಲ್ಲ. ತೆರಿಗೆಯನ್ನೂ ಪಾವತಿಸುವಂತಿಲ್ಲ. ಬೋರ್‍ ವೆಲ್ ಇದೆ ಎಂದು ಜಲಮಂಡಳಿಯಲ್ಲಿ ನೊಂದಾಯಿಸಿದರೆ ಮಾಸಿಕ 100 ರೂಪಾಯಿ ಶುಲ್ಕಕಟ್ಟ ಬೇಕು, ನೋಂದಾಯಿಸದೆ ಹೋದರೆ ಅದೂ ಕೂಡ ಇಲ್ಲ. ಹೀಗಾಗಿ ಯಥೇಚ್ಚವಾಗಿ ಅಂತರ್ಜಲ ಬಳಕೆ ಮಾಡಿ ಹಣ ಮಾಡಿದರೂ ಇದನ್ನು ನಿಯಂತ್ರಿಸುವ ವ್ಯವಸ್ಥೆಯೇ ಇಲ್ಲವಾಗಿದೆ.


ಇದೆಲ್ಲವೂ ಒಂದು ಕಡೆಯಾದರೆ, ಮತ್ತೊಂದು ಕಡೆ ಟ್ಯಾಂಕರ್‍ ನೀರಿನ ಹೆಸರಲ್ಲಿ ಬೆಂಗಳೂರಿನ ಜನತೆ ವಿಷಯುಕ್ತ ಜಲ ಬಳಸುತ್ತಿದ್ದಾರೆ. ಜನಾಗ್ರಹ, ಸಿವಿಕ್ ಬೆಂಗಳೂರು ಸೇರಿದಂತೆ, ಹಲವು ಸಂಸ್ಥೆಗಳು ನಡೆಸಿರುವ ಸಮೀಕ್ಷೆ ಪ್ರಕಾರ, ಬೆಂಗಳೂರಿನ ಅತ್ಯಂತ ಕಲುಷಿತ ಕೆರೆ ಎಂದೇ ಪರಿಗಣಿಸಿರುವ ಬೆಳ್ಳಂದೂರು ಕೆರೆ ದಂಡೆಯಲ್ಲಿ 18 ಬೋರ್‌ವೆಲ್‌ಗಳು, ವರ್ತೂರು ಕೆರೆ ದಂಡೆಯಲ್ಲಿ 16, ಯಡಿಯೂರಿನಲ್ಲಿ 6, ಎಲೆಮಲ್ಲಪ್ಪಶೆಟ್ಟಿ ಕೆರೆಗೆ ಹೊಂದಿಕೊಂಡಂತೆ 35 ಬೋರ್‌ವೆಲ್‌ಗಳು, ರಾಜರಾಜೇಶ್ವರಿನಗರದ ಕೆರೆ ಸಮೀಪ 9, ಅಗರಕೆರೆ ಸಮೀಪ 4, ವೃಷಭಾವತಿ ನಾಲೆಯುದ್ದಕ್ಕೂ 60ಕ್ಕೂ ಹೆಚ್ಚು ಬೋರ್‌ವೆಲ್‌ಗಳಿವೆ. ಇವೆಲ್ಲಾ ಬೋರ್‌ವೆಲ್‌ಗಳ ನೀರನ್ನು ಟ್ಯಾಂಕರುಗಳ ಮೂಲಕ ಜನರಿಗೆ ಸರಬರಾಜು ಮಾಡಲಾಗುತ್ತದೆ.  ಈ ಬೋರ್‌ವೆಲ್‌ಗಳ ನೀರಿನಲ್ಲಿ, ಅಪಾರ ಪ್ರಮಾಣದ ಇಂಗಾಲ ಸೇರ್ಪಡೆಯಾಗಿದೆ ಎನ್ನುವುದು ಹಲವುಬಾರಿ ಸಾಬೀತಾಗಿದ್ದರೂ ಯಾರೂ ತಲೆಕೆಡಿಸಿಕೊಂಡಿಲ್ಲ. ಯಾವುದೇ ಕಾರಣಕ್ಕೂ, ಈ ನೀರನ್ನೂ ಸಂಸ್ಕರಿಸದೇ ಬಳಸುವಂತಿಲ್ಲ ಎಂಬ ಎಚ್ಚರಿಕೆ ನೀಡಲಾಗಿದೆ. ಆದರೆ, ಟ್ಯಾಂಕರ್‍ ದಂಧೆ ನಡೆಸುವವರು ಇದೆಲ್ಲಾ ಕಟ್ಟಿಕೊಂಡು ನಮಗೇನಾಗಬೇಕು ಎಂದು ನಿರ್ಲಕ್ಷ್ಯ ಮಾಡುವ ಟ್ಯಾಂಕರ್‌ ಮಾಲೀಕರು, ಈ ಬೋರ್‍ವೆಲ್‌ಗಳ ನೀರನ್ನು ನೇರವಾಗಿ ಟ್ಯಾಂಕರ್‍ ಮೂಲಕ ಪೂರೈಸುತ್ತಿದ್ದಾರೆ. ಇವುಗಳ ಗುಣಮಟ್ಟವನ್ನು ಯಾರೂ ಪರೀಕ್ಷಿಸುವುದಿಲ್ಲ, ಯಾರೂ ಕೇಳುವುದೂ ಇಲ್ಲ. ಒಂದು ವೇಳೆ ಪ್ರಶ್ನೆ ಮಾಡಿದರೆ ನಿಮಗೆ ಈ ನೀರೂ ಸಿಗುವುದಿಲ್ಲ. ಇದೆಲ್ಲವನ್ನೂ ನಿಯಂತ್ರಿಸಬೇಕಾದ ಅಧಿಕಾರಿಗಳಿಗೆ ಮಾಮೂಲಿ ಸಂದಾಯವಾಗುತ್ತದೆ. ಇದೇ ವೇಳೆ, ಜನಪ್ರತಿನಿಧಿಗಳು ಹೇಳುವವರಿಗೆ ಉಚಿತವಾಗಿ ನೀರು ಪೂರೈಕೆಯಾಗುತ್ತದೆ. ಆ ಮೂಲಕ, ಅವರ ಮತ ಬ್ಯಾಂಕ್‍ ಗಟ್ಟಿಯಾಗುತ್ತದೆ. ಹೀಗಾಗಿ, ವಾಟರ್ ಟ್ಯಾಂಕರ್ ದಂಧೆಕೋರರನ್ನು ಕೇಳುವವರೇ ಇಲ್ಲದಂತಾಗಿದೆ.


ಇನ್ನೂ ಪ್ರತಿನಿತ್ಯ ಬೆಂಗಳೂರಿಗೆ ಸುಮಾರು 140 ಕೋಟಿ ಲೀಟರ್ ಕಾವೇರಿ ನೀರು ಪೂರೈಕೆ ಮಾಡಲಾಗುತ್ತಿದೆ. ಹೀಗಾಗಿ, ಈ ಬೇಸಿಗೆಯಲ್ಲಂತೂ ಬೆಂಗಳೂರಿನ ವಾಟರ್ ಟ್ಯಾಂಕರ್‍ ವಹಿವಾಟುದಾರರಿಗೆ ಸುಗ್ಗಿಯಾಗಿದ್ದಂತೂ ನಿಜ.

Links :
ಸಂಬಂಧಿತ ಟ್ಯಾಗ್ಗಳು

ಸಂಬಂಧಿತ ಟ್ಯಾಗ್ಗಳನ್ನು ಲಭ್ಯವಿಲ್ಲಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ