ಅಟಲ್ ಜಿ ಜೊತೆ ಕೆಲಸ ಮಾಡಿದ್ದೇ ನನ್ನಂತವರಿಗೆ ಪುಣ್ಯ: ಬಿಎಸ್ವೈ

yeddyurappa condolence to atal bihari vajpayee death

17-08-2018

ಬೆಂಗಳೂರು: ದೇಶ ಕಂಡ ಮಹಾನ್ ಮುತ್ಸದ್ದಿ, ಅಜಾತ ಶತ್ರು, ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರ ನಿಧನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಇಂದು ದೇಶ ಅತ್ಯುತ್ತಮ ಕವಿ, ಬರಹಗಾರ, ಮುತ್ಸದ್ದಿ, ಸಹೃದಯಿ ರಾಜಕಾರಣಿಯನ್ನು ಕಳೆದುಕೊಂಡು ಅನಾಥವಾಗಿದೆ. ಅವರ ಅಗಲಿಕೆ ದೇಶಕ್ಕೆ, ಜನತೆಗೆ ಅದರಲ್ಲೂ ಭಾರತೀಯ ಜನತಾ ಪಕ್ಷದ ಕುಟುಂಬಕ್ಕೆ ತುಂಬಲಾರದ ಹಾನಿ. ನನ್ನಂತವರಿಗೆ ಅವರ ಜೊತೆ ಕೆಲಸ ಮಾಡಿದ್ದೇ ಪುಣ್ಯ ಮತ್ತು ದೊಡ್ಡ ಅನುಭವ. ಅವರ ರಾಜಕೀಯ ನಡೆ ನುಡಿ ಎಲ್ಲರಿಗೂ ಅನುಕರಣೀಯ. ನನಗೆ ನೆನೆಪಿದ್ದಂತೆ 1980ರಲ್ಲಿ ವಾಜಪೇಯಿ ಆಡಿದ ಮಾತುಗಳು " ಅಂಧೇರಾ ಚಟೇಗಾ, ಸೂರಜ್ ನಿಕ್ಲೇಗಾ, ಕಮಲ್ ಕಿಲೇಗಾ" (ಕತ್ತಲೆ ದೂರವಾಗುತ್ತದೆ, ಸೂರ್ಯ ಉದಯಿಸುತ್ತಾನೆ, ಕಮಲ ಅರಳುತ್ತದೆ) ಇಂದಿಗೂ ಕೂಡ ನಮಗೆಲ್ಲಾ ಅನುಕರಣೀಯ ಮತ್ತು ವಾಜಪೇಯಿ ಅವರ ದೂರಷ್ಠಿತನ ಮತ್ತು ಆಶಾಭಾವನೆ ಎತ್ತಿ ತೋರಿಸುತ್ತದೆ. ವಾಜಪೇಯಿಯವರ ಈ ಆಶಾಭಾವನೆಯೇ, ಇಂದು ಸಂಪೂರ್ಣ ಬಹುಮತದೊಂದಿಗೆ ಮೋದಿಯವರು ಪ್ರಧಾನಿಯಾಗಲು ಕಾರಣ. ಅವರನ್ನು ಸ್ವತಂತ್ರ ಭಾರತದ "ಅಜಾತಶತ್ರು" ಎಂದು ಬಣ್ಣಿಸಿದರೆ ಅತಿಶಯೋಕ್ತಿ ಆಗದು ಎಂದು ಸಂತಾಪ ಸಂದೇಶದ ಮೂಲಕ ತಿಳಿಸಿದ್ದಾರೆ.

1924ರ ಡಿಸೆಂಬರ್ 25ರಂದು ಕೃಷ್ಣ ಬಿಹಾರಿ ಹಾಗೂ ಕೃಷ್ಣ ದೇವಿ ದಂಪತಿಗಳಿಗೆ ಜನಿಸಿ 93 ವರ್ಷದ ತುಂಬು ಜೀವನ ನಡೆಸಿದ ಭಾರತ ರತ್ನ, ಪದ್ಮವಿಭೂಷಣ ಅಟಲ್ ಬಿಹಾರಿ ವಾಜಪೇಯಿರವರು, ದೇಶ ಕಂಡ ಅತ್ಯುತ್ತಮ ರಾಜಕಾರಣಿ. 1939ರಿಂದಲೇ ಸ್ವಯಂಸೇವಕರಾಗಿ ಆರ್.ಎಸ್.ಎಸ್‍ನ ಎಲ್ಲಾ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದ ವಾಜಪೇಯಿಯವರು, 1942ರಲ್ಲಿ ಕ್ವಿಟ್ ಇಂಡಿಯ ಚಳವಳಿಯಲ್ಲಿ ಭಾಗವಹಿಸಿದ್ದ ಹಿರಿಯ ಸ್ವಾತಂತ್ರ ಹೋರಾಟಗಾರರು.

1996 ಮೇ (13 ದಿನ) 1998-1999,1999-2004  3 ಬಾರಿ ದೇಶದ ಪ್ರಧಾನಿಯಾಗಿ ಸೇವೆ ಸಲ್ಲಿಸಿದ ಕಳಂಕರಹಿತ ರಾಜಕಾರಣಿ. ಪ್ರಧಾನಿಗಳಾಗಿದ್ದ ಸಂದರ್ಭದಲ್ಲಿ ಪಾಕಿಸ್ತಾನಕ್ಕೆ ಬಸ್ ಸಂಚಾರಕ್ಕೆ ಚಾಲನೆ ನೀಡುವ ಮೂಲಕ ಸ್ನೇಹ ಹಸ್ತ ಚಾಚಿದರು.ಅಣ್ವಸ್ತ್ರ ಪರೀಕ್ಷೆ ನಡೆಸುವ ಮೂಲಕ ದೇಶದ ರಕ್ಷಣೆಗೆ ಒತ್ತು. ದೇಶಾದ್ಯಂತ ಚತುಷ್ಪಥ ಹೆದ್ದಾರಿ ನಿರ್ಮಾಣ. ಕಾರ್ಗಿಲ್ ಯುದ್ಧವನ್ನು ಸಮರ್ಪಕವಾಗಿ ನಿಭಾಯಿಸಿದರು. ಸತತ ನಾಲ್ಕು ದಶಕಗಳ ಕಾಲ ಸಂಸತ್ತನ್ನು ಪ್ರತಿನಿದಿಸಿದ್ದ ವಾಜಪೇಯಿಯವರು, 10 ಬಾರಿ ಲೋಕಸಭಾ (ಉತ್ತರ ಪ್ರದೇಶದ-ಲಖನೌ) ಹಾಗೂ 2 ಬಾರಿ ರಾಜ್ಯಸಭಾ ಸದಸ್ಯರಾಗಿ ಸೇವೆ ಸಲ್ಲಿಸಿದ ಅವರು ಅತ್ಯುತ್ತಮ ಸಂಸದೀಯ ಪಟುವಾಗಿದ್ದರು. ಮೊರಾರ್ಜಿ ದೇಸಾಯಿಯವರ ಸಂಪುಟದಲ್ಲಿ ವಿದೇಶಾಂಗ ಸಚಿವರಾಗಿ ಕಾರ್ಯ ನಿರ್ವಹಿಸಿ, ದೇಶ-ವಿದೇಶಗಳಲ್ಲಿ ಖ್ಯಾತಿಗಳಿಸಿದ್ದರು. ಇವರ ಆತ್ಮಕ್ಕೆ ಶಾಂತಿ,  ಸದ್ಗತಿ ಸಿಗಲಿ. ಕುಟುಂಬದ ಸದಸ್ಯರಿಗೆ ಅಗಲಿಕೆ ದುಃಖ ಭರಿಸುವ ಶಕ್ತಿಯನ್ನು ಭಗವಂತ  ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಂತಾಪ ಸೂಚಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ