ರಾಜ್ಯ ಗ್ರಾಮಪಂಚಾಯಿತಿ ನೌಕರರ ಅನಿರ್ಧಿಷ್ಟಾವಧಿ ಹೋರಾಟದ ಎಚ್ಚರಿಕೆ !

Kannada News

31-05-2017

ಬೆಂಗಳೂರು: - ಕಳೆದ ಒಂದು ವರ್ಷದಿಂದ ಬಾಕಿ ಇರುವ ವೇತನ ಮಂಜೂರು ಸೇರಿದಂತೆ ಕನಿಷ್ಟ ವೇತನ ನೀಡಲು ಆಗ್ರಹಿಸಿ ರಾಜ್ಯ ಗ್ರಾಮಪಂಚಾಯಿತಿ. ನೌಕರರ ಸಂಘ ಜೂ. 12ರಿಂದ ಅನಿರ್ಧಿಷ್ಟಾವಧಿ ಹೋರಾಟ ನಡೆಸಲು ನಿರ್ಧರಿಸಿದೆ. ರಾಜ್ಯದಲ್ಲಿ 20 ಸಾವಿರ ಪಂಪ್ ಆಪರೇಟರ್‌ಗಳು, 9 ಸಾವಿರ ಕಸ ಗುಡಿಸುವವರು, 5 ಸಾವಿರ ಜವಾನರು, 7 ಸಾವಿರ ಕರ ವಸೂಲಿಗಾರರು, 6 ಸಾವಿರ ಡಾಟಾ ಆಪರೇಟರ್‌ಗಳು ಒಟ್ಟು 56 ಸಾವಿರ ನೌಕರರು ಗ್ರಾ.ಪಂ.ಯಲ್ಲಿ ಕಳೆದ ಒಂದು ವರ್ಷದಿಂದ ವೇತನವಿಲ್ಲದೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೂಡಲೇ ಸರ್ಕಾರ ಈ ನೌಕರರ ವೇತನ ಬಿಡುಗ‌ಡೆ ಮಾಡಬೇಕು ಎಂದು ಸಂಘದ ಅಧ್ಯಕ್ಷ ಮಾರುತಿ ಮಾನ್ಪಡೆ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು. ಎಲ್ಲಾ ವರ್ಗದ ನೌಕರರ ವೇತನ ಹೆಚ್ಚಳಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. 1948ರಲ್ಲಿ ಕನಿಷ್ಟ ವೇತನ ಪಾವತಿ ಕಾಯ್ದೆ ರೂಪಿಸಿದೆ. ಆದರೆ, ಪಂಚಾಯ್ತಿಗಳು ವೇತನ ನೀಡದೆ ಕಾನೂನು ಉಲ್ಲಂಘಿಸುತ್ತಿದ್ದಾರೆ ಎಂದು ಆರೋಪಿಸಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 3 ಬಾರಿ ಸಭೆ ನಡೆಸಿ ಸ್ಥಳೀಯ ಸಂಸ್ಥೆ ನೌಕರರಿಗೆ ವೇತನ ನೀಡಲು ಶೇ. 75ರಷ್ಟು ಅನುದಾನ ಬಿಡುಗಡೆ ಮಾಡಿದ್ದಾರೆ. ಆದರೆ ವೇತನ ಮಾತ್ರ ಇದುವರೆಗೆ ಬಿಡುಗಡೆಯಾಗಿಲ್ಲ ಎಂದರು. ಗ್ರಾಮೀಣ ಅಭಿವೃದ್ಧಿ ಸಚಿವರು 4 ವರ್ಷಗಳಲ್ಲಿ 10 ಆದೇಶಗಳನ್ನು ಹೊರಡಿಸಿದ್ದಾರೆ. 30435 ಪಂಚಾಯ್ತಿ ನೌಕರರನ್ನು ಅನುಮೋದನೆ ಮಾಡಿದ್ದಾರೆ. ತೆರಿಗೆ ಸಂಗ್ರಹದಲ್ಲಿ ವೇತನಕ್ಕೆ ಹಣ ನೀಡುತ್ತಿಲ್ಲ. ಸರ್ಕಾರದ ಕಾಯ್ದೆ ಆದೇಶಗಳನ್ನು ಜಾರಿ ಮಾಡುತ್ತಿಲ್ಲ ಎಂದು ತಿಳಿಸಿದರು. ಕಳೆದ 30 ವರ್ಷದಿಂದ ದುಡಿದ ನೌಕರರಿಗೆ ನಿವೃತ್ತಿ ವೇತನ ಜಾರಿ ಮಾಡಬೇಕು. 2011ರ ಜನಗಣತಿ ಆಧಾರದಲ್ಲಿ ಪಂಚಾಯ್ತಿಗಳನ್ನು ಮೇಲ್ದರ್ಜೆಗೇರಿಸಬೇಕು. ಸಾವಿರ ಹುದ್ದೆಗಳಿಗೆ ಮಂಜೂರಾತಿ ನೀಡಬೇಕು ಈ ಎಲ್ಲಾ ಬೇಡಿಕೆಗಳ ಕುರಿತಂತೆ ಮುಖ್ಯಮಂತ್ರಿಗಳು ಸಭೆ ಕರೆದು ತೀರ್ಮಾನ ಕೈಗೊಳ್ಳಬೇಕು. ನಿರ್ಲಕ್ಷಿಸಿದರೆ ಜೂ. 12ರಿಂದ ಅನಿರ್ಧಿಷ್ಟಾವಧಿ ಧರಣಿ ಆರಂಭಿಸಲಾಗುವುದು ಎಂದು ಅವರು ಎಚ್ಚರಿಸಿದರು.

 


ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ