ಯಶಸ್ವಿ ಅಣ್ವಸ್ತ್ರ ಪರೀಕ್ಷೆ ನಡೆಸಿದ ಧೀರ-ವಾಜಪೇಯಿ

pokhran test and Atal bihari vajpayee

16-08-2018

ಬೆಂಗಳೂರು: ವಿಶ್ವದ ಎಲ್ಲಾ ರಾಷ್ಟ್ರಗಳ ಕಣ್ತಪ್ಪಿಸಿ ನಡೆಸಿದ ಅಣ್ವಸ್ತ್ರ ಪರೀಕ್ಷೆಗೆ ನೀಡಿದ್ದ ರಹಸ್ಯ ಕೋಡ್‌ ವರ್ಡ್ ‘ಸ್ಮೈಲಿಂಗ್ ಬುದ್ಧ.’ ನಭೋಮಂಡಲದಲ್ಲಿ ಅಮೆರಿಕ, ಚೀನಾ, ರಷ್ಯ, ಫ್ರಾನ್ಸ್ ಮತ್ತಿತರ ದೇಶಗಳ ಕಣ್ಗಾವಲಿಗೂ ಸಿಗದೆ ನಡೆಸಲಾದ ಪೋಖ್ರಾನ್ ಅಣ್ವಸ್ತ್ರ ಪರೀಕ್ಷೆ ಸಾಧಾರಣವಾದುದಲ್ಲ.

ಅಣ್ವಸ್ತ್ರ ಪರೀಕ್ಷೆ ಸುಲಭದ ಕೆಲಸವಾಗಿರಲಿಲ್ಲ. ಇಡೀ ವಿಶ್ವದ ಹತ್ತಾರು ದೇಶಗಳು ಕಣ್ಣಿಗೆ ಎಣ್ಣೆ ಹಾಕಿಕೊಂಡು ಕಾಯುತ್ತಿದ್ದವು. ಅದರಲ್ಲೂ ಅಮೆರಿಕವು ಉಪಗ್ರಹದ ಮೂಲಕ ಯಾವುದೇ ದೇಶದ ಒಂದೊಂದು ಇಂಚು ಭೂಮಿಯನ್ನೂ ಪರಿವೀಕ್ಷಿಸುವ ಸಾಮರ್ಥ್ಯ ಹೊಂದಿದ್ದರಿಂದ ಎಷ್ಟು ಎಚ್ಚರ ವಹಿಸಿದರೂ ಸಾಲದೆಂಬ ಪರಿಸ್ಥಿತಿ ಇತ್ತು! ಇಂತಹ ಸಂದರ್ಭದಲ್ಲಿ ವಾಜಪೇಯಿ ಅಧಿಕಾರಕ್ಕೆ ಬಂದ ಕೂಡಲೇ ಕೈಗೊಂಡ ಕೆಲಸ ಅಣ್ವಸ್ತ್ರ ಪರೀಕ್ಷೆ.

ಆದರೆ, ಪರಮಾಣು ಪರೀಕ್ಷಾ ಕೇಂದ್ರದ ಮೇಲೆ ಅಮೆರಿಕ ತನ್ನ ಕಳ್ಳದೃಷ್ಟಿಯನ್ನು ಇಟ್ಟೇ ಇತ್ತು. 1995ರಲ್ಲಿ ಪ್ರಧಾನಿಯಾಗಿದ್ದ ಪಿ.ವಿ.ನರಸಿಂಹರಾವ್ ಇಂಥದ್ದೇ ಪ್ರಯೋಗ ನಡೆಸಲು ಹೋಗಿ ವಿಫಲರಾದದ್ದು ಇದೇ ಕಾರಣದಿಂದ. ಪೂರ್ವ ಸಿದ್ಧತೆಯ ಹಂತದಲ್ಲಿರುವಾಗಲೇ ಅಮೆರಿಕಕ್ಕೆ ಸಂಪೂರ್ಣ ಸುಳಿವು ಸಿಕ್ಕಿಬಿಟ್ಟಿತು. ಅಮೆರಿಕದ ಅಧ್ಯಕ್ಷ ಬಿಲ್ ಕ್ಲಿಂಟನ್ ಅಬ್ಬರಕ್ಕೆ ಹೆದರಿ ಆಗ ನರಸಿಂಹರಾವ್ ಅನಿವಾರ್ಯವಾಗಿ ಸುಮ್ಮನಾದರು. ಇದಾದ ಕೇವಲ ಮೂರೇ ವರ್ಷದಲ್ಲಿ ವಾಜಪೇಯಿ ಪ್ರಧಾನಿಯಾದ್ದರಿಂದ ಅಮೆರಿಕ ಇನ್ನಷ್ಟು ಜಾಗೃತವಾಗೇ ಇತ್ತು. ಉಪಗ್ರಹದ ಮೂಲಕ ರಾಜಸ್ಥಾನದ ಪೋಖ್ರಾನ್‌ನ ಪರಮಾಣು ಪರೀಕ್ಷಾ ಕೇಂದ್ರದ ಮೇಲೆ ಕಣ್ಣಿಟ್ಟು ಕಾಯುತ್ತಿತ್ತು. ಅದು ಚಾಪೆಯ ಕೆಳಗೆ ನುಸುಳುವ ಕೆಲಸ ಮಾಡಿದರೆ, ವಾಜಪೇಯಿ ರಂಗೋಲಿಯ ಕೆಳಗೆ ನುಸುಳಬಲ್ಲರು ಎಂಬ ಕಲ್ಪನೆ ಅಮೆರಿಕಕ್ಕೆ ಇರಲಿಲ್ಲವೆಂದೇ ಕಾಣುತ್ತದೆ. ವಾಜಪೇಯಿ 1998ರ ಫೆಬ್ರವರಿ 18ಕ್ಕೆ ಪ್ರಧಾನಿಯಾದರು. ಮಾರ್ಚ್‌ನಲ್ಲೇ ಈ ಮಹತ್ಕಾರ್ಯಕ್ಕೆ ಕೈಹಾಕಿದರು. ಕೆಲವೇ ಪ್ರಮುಖ ವಿಜ್ಞಾನಿಗಳನ್ನು ಕರೆದು ಆದಷ್ಟು ಶೀಘ್ರವಾಗಿ ಪರಮಾಣು ಸ್ಫೋಟ ಪರೀಕ್ಷೆಗೆ ಅತ್ಯಂತ ಗುಪ್ತವಾಗಿ ಸಿದ್ಧತೆ ನಡೆಸುವಂತೆ ಸೂಚಿಸಿದರು. ಈ ಕಾರ್ಯ ಅದೆಷ್ಟು ಗುಪ್ತವಾಗಿ ನಡೆಯಿತೆಂದರೆ, ನಿಜಕ್ಕೂ ಭಾರತದ ಇತಿಹಾಸದಲ್ಲಿ ರೋಮಾಂಚಕ ಅಧ್ಯಾಯವೆಂದೇ ಹೇಳಬೇಕು. ಮುಂಜಾಗ್ರತೆ ವಹಿಸಿ 1998ರ ಮೇ 11 ಮತ್ತು 13ರಂದು ಯಶಸ್ವಿಯಾಗಿ ಐದು ಸ್ಫೋಟಗಳನ್ನು ನಡೆಸಲಾಯಿತು.

13ರಂದು ಮಧ್ಯಾಹ್ನ ನವದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ‘ಆಪರೇಷನ್ ಶಕ್ತಿ’ ಹೆಸರಿನಲ್ಲಿ ಐದು ಸ್ಫೋಟಗಳನ್ನು ನಡೆಸಿರುವುದಾಗಿ ಪ್ರಧಾನಿ ವಾಜಪೇಯಿ ಘೋಷಿಸಿದಾಗ ಇಡೀ ವಿಶ್ವವೇ ತಬ್ಬಿಬ್ಬಾಯಿತು. ಅಮೆರಿಕ ಮೈ ಚಿವುಟಿಕೊಂಡಿತು. ತಾನು ಎಲ್ಲಿ ಯಾಮಾರಿದೆ ಎಂಬುದನ್ನು ತಿಳಿಯಲು ತನ್ನೆಲ್ಲ ಗುಪ್ತಚರ ವ್ಯವಸ್ಥೆಯನ್ನೂ ಜಾಲಾಡಿತು. ವಾಜಪೇಯಿ ನೇತೃತ್ವದ ಭಾರತದ ದಿಟ್ಟತನ ಮತ್ತು ಚಾಣಾಕ್ಷತೆಯಿಂದಾಗಿ ವಿಶ್ವದ ದೊಡ್ಡಣ್ಣನೆಂದೇ ಮೆರೆಯುವ ಅಮೆರಿಕಕ್ಕೆ ದಿಕ್ಕೇ ತೋಚದ ಪರಿಸ್ಥಿತಿ ಉಂಟಾಯಿತು.


ಸಂಬಂಧಿತ ಟ್ಯಾಗ್ಗಳು

pokhran Atal bihari vajpayee ದೊಡ್ಡಣ್ಣ ಚಾಣಾಕ್ಷ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ