ಉತ್ತಮ ಆಡಳಿತ ನೀಡುವಲ್ಲಿ ಪ್ರಧಾನಿ ವಿಫಲ: ದಿನೇಶ್ ಗುಂಡೂರಾವ್

Prime Minister had failed to give good governance: Dinesh Gundurao

16-08-2018

ಬೆಂಗಳೂರು: ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶಕ್ಕೆ ಉತ್ತಮ ಆಡಳಿತ ನೀಡುವಲ್ಲಿ ಸಂಪೂರ್ಣ ವಿಫಲರಾಗಿದ್ದು, ಉದ್ಯೋಗ ಸೃಷ್ಟಿಯಲ್ಲಿ ದೇಶಕ್ಕೆ ಪರಮ ಅನ್ಯಾಯ ಮಾಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಇಂದಿಲ್ಲಿ ವಾಗ್ದಾಳಿ ನಡೆಸಿದ್ದಾರೆ.

ಚುನಾವಣಾ ಸಮಯದಲ್ಲಿ ನೀಡಿರುವ ಭರವಸೆಗಳನ್ನು ಬಹುತೇಕ ಈಡೇರಿಸಿಲ್ಲ. ಲಕ್ಷಾಂತರ ಯುವಕರಿಗೆ ಉದ್ಯೋಗ ನೀಡುವುದಾಗಿ ಹುಸಿ ಭರವಸೆ ನೀಡಿ ಸರಿಯಾದ ಉದ್ಯೋಗ ಒದಗಿಸುವಲ್ಲಿ ವಿಫಲರಾಗಿದ್ದಾರೆ. ಯುವಕರು ಉದ್ಯೋಗ ಕೇಳಿದರೆ, ತಾವು ಕೂಡ ಪಕೋಡ ಮಾರಿ ಮುಂದೆ ಬಂದಿದ್ದೇನೆ. ಇದನ್ನು ನೀವು ಮಾಡಿ ಎಂದು ಹೇಳುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಹೇಳಿದರು.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಿಂದ ಹೆಚ್ಚು ಸ್ಥಾನಗಳನ್ನು ಗೆಲ್ಲಿಸಿ ಕೊಡುವ ಉದ್ದೇಶದಿಂದ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ತಮ್ಮ ಬಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಈಗಿನಿಂದಲೇ ಉತ್ತಮವಾಗಿ ಕಾರ್ಯನಿರ್ವಹಿಸಬೇಕು ಎಂದು ಕರೆ ನೀಡಿದರು.

ನಗರದಲ್ಲಿಂದು ಡಾ.ಗಿರೀಶ್ ಕೆ.ನಾಶಿ ಫೌಂಡೇಷನ್ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದ್ದ  ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ದೇಶದಲ್ಲಿ ಐಕ್ಯತೆ ಉಳಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಕಾರ್ಯೋನ್ಮಖವಾಗಬೇಕು. ಕಾಂಗ್ರೆಸ್‍ಗೆ ತನ್ನದೇ ಆದ ಸುದೀರ್ಘ ಇತಿಹಾಸವಿದೆ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ಕಾಂಗ್ರೆಸ್‍ನ ಮಹನೀಯರು ಶ್ರಮಿಸಿದ್ದಾರೆ.  ಕಾಂಗ್ರೆಸ್‍ಗೆ ಇರುವ  ಬಹುದೊಡ್ಡ ಇತಿಹಾಸ ಬೇರೆ ಯಾವುದೇ ಪಕ್ಷಕ್ಕೆ ಇಲ್ಲ ಎಂದರು.

ಮಾಜಿ ಶಾಸಕ, ಹಿರಿಯ ಮುಖಂಡ ನಂಜಯ್ಯನ ಮಠ ಮಾತನಾಡಿ ಕಾಂಗ್ರೆಸ್ ಪಕ್ಷದ ಇತಿಹಾಸದಲ್ಲೇ ಮೊದಲಬಾರಿಗೆ ಒಬ್ಬ ಯುವ ಮುಖಂಡನಿಗೆ ಪಕ್ಷದ ಸಾರಥ್ಯವನ್ನು ಹೈಕಮಾಂಡ್ ವಹಿಸಿದೆ. ಹಿರಿಯ ಮುಖಂಡರು ತಮ್ಮಲ್ಲಿರುವ ಆಂತರಿಕ ತುಮಲಗಳನ್ನು ಬದಿಗೊತ್ತಿ ಕಾರ್ಯನಿರ್ವಹಿಸಬೇಕು, ದಿವಂಗತ ಮಾಜಿ ಮುಖ್ಯಮಂತ್ರಿ ಗುಂಡೂರಾವ್ ಅವರಲ್ಲಿರುವ ಎಲ್ಲ ಚಾಕಚಕ್ಯತೆಗಳು ದಿನೇಶ್ ಗುಂಡೂರಾವ್ ಅವರಲ್ಲಿದ್ದು, ಪಕ್ಷವನ್ನು ಅವರು ಮುನ್ನೆಡಸಲಿದ್ದಾರೆ ಎಂಬ ಭರವಸೆ ತಮಗಿದೆ ಎಂದು ಹೇಳಿದರು.

ಡಾ. ಗಿರೀಶ್ ಕೆ.ನಾಶಿ ಫೌಂಡೇಷನ್ ಅಧ್ಯಕ್ಷ ಗಿರೀಶ್ ಮಾತನಾಡಿ ದಿನೇಶ್ ಗುಂಡೂರಾವ್ ಹಾಗೂ ಪಕ್ಷದ ಎಲ್ಲ ಹಿರಿಯ ಮುಖಂಡರ ನೇತೃತ್ವದಲ್ಲಿ ಬೆಂಗಳೂರಿನ ಮೂರು ಲೋಕಸಭಾ ಕ್ಷೇತ್ರಗಳನ್ನು ಗೆಲ್ಲುವ ಅವಶ್ಯಕತೆ ಇದೆ ಎಂದು ಹೇಳಿದರು. ಸಮಾರಂಭದಲ್ಲಿ ಬಿಬಿಎಂಪಿ ಆಡಳಿತ ಪಕ್ಷದ ನಾಯಕ ಎಂ.ಶಿವರಾಜು, ಬಿಎಂಟಿಸಿ ಮಾಜಿ ಉಪಾಧ್ಯಕ್ಷ ಆರಾಧ್ಯ, ಬಿಬಿಎಂಪಿ ನಾಮನಿರ್ದೇಶನ ಸದಸ್ಯ ಕೃಷ್ಣಮೂರ್ತಿ  ಸೇರಿದಂತೆ ಮಹಾಲಕ್ಷ್ಮೀ ಲೇಔಟ್ ಕ್ಷೇತ್ರದ ಅನೇಕ ಮುಖಂಡರು ಸಭೆಯಲ್ಲಿ ಉಪಸ್ಥಿತರಿದ್ದರು.

 


ಸಂಬಂಧಿತ ಟ್ಯಾಗ್ಗಳು

dinesh gundu rao KPCC ಆಡಳಿತ ಸಮಾರಂಭ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ