ಮುಖ್ಯ ಮಂತ್ರಿಯಾಗುವ ಕನಸು ನನಗಿಲ್ಲ: ಹೆಚ್.ಡಿ.ರೇವಣ್ಣ

I

14-08-2018

ಬೆಂಗಳೂರು: ನನಗೆ ಮುಖ್ಯ ಮಂತ್ರಿಯಾಗುವ ಯಾವ ಕನಸು ಇಲ್ಲ. ಕುಮಾರಸ್ವಾಮಿ ಕೇಂದ್ರ ರಾಜಕಾರಣಕ್ಕೆ ಹೋಗುವುದಿಲ್ಲ. ಆದರೆ ನನಗೆ ಕೊಟ್ಟಿರುವ ಲೋಕೋಪಯೋಗಿ ಇಲಾಖೆಯ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವುದಷ್ಟೇ ನನ್ನ ಮುಂದಿರುವ ಗುರಿ ಎಂದು ಸಚಿವ ಹೆಚ್.ಡಿ.ರೇವಣ್ಣ ಹೇಳಿದ್ದಾರೆ.

ಜೆಡಿಎಸ್ ಕಚೇರಿಯಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ನನಗೆ ಮುಖ್ಯಮಂತ್ರಿ ಆಗಬೇಕು ಎನ್ನುವ ಯಾವ ಕನಸೂ ಇಲ್ಲ. ನನಗೆ ಲೋಕೋಪಯೋಗಿ ಖಾತೆ ನೀಡಿದ್ದಾರೆ. ಅದನ್ನೇ ಸಮರ್ಥವಾಗಿ ನಿರ್ವಹಿಸಿಕೊಂಡು ಹೋಗುತ್ತೇನೆ ಎಂದು ಹೇಳಿದರು.

ಚಂದ್ರಗ್ರಹಣದ ನಂತರ ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ ಆಗಲಿದ್ದು, ಹೆಚ್.ಡಿ.ರೇವಣ್ಣ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಕೋಡಿಮಠದ ಶ್ರೀಗಳು ಭವಿಷ್ಯ ನುಡಿದಿದ್ದರು. ಈ ಬಗ್ಗೆ ಒಂದಷ್ಟು ಚರ್ಚೆಗಳು ಸಹ ನಡೆದಿದ್ದವು. ಕುಮಾರಸ್ವಾಮಿ ದೆಹಲಿಗೆ ರಾಜಕಾರಣಕ್ಕೆ ತೆರಳುತ್ತಾರೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ನೀಡಿದ ಹೇಳಿಕೆಗಳಿಗೆ ಅವರು ಪ್ರತಿಕ್ರಿಯಿಸಿದರು.

ಕುಮಾರಸ್ವಾಮಿ ರಾಜ್ಯ ರಾಜಕಾರಣದಲ್ಲೇ ಇರುತ್ತಾರೆ. ರಾಷ್ಟ್ರ ರಾಜಕಾರಣಕ್ಕೆ ಹೋಗಲ್ಲ. ಕುಮಾರಸ್ವಾಮಿಯವರಿಗೆ ಇಲ್ಲೇ ಬೇಕಾದಷ್ಟು ಕೆಲಸ ಇದೆ. ಬಡವರ ಪರವಾಗಿ ಸಾಕಷ್ಟು ಕೆಲಸ ಮಾಡುವುದಿದೆ. ನನಗೆ ಮುಖ್ಯಮಂತ್ರಿಯಾಗುವ ಕನಸಿಲ್ಲ ಎಂದರು.

ಪ್ರಜ್ವಲ್ ರೇವಣ್ಣಗೆ ಪಕ್ಷದಲ್ಲಿ ಪ್ರಧಾನ ಕಾರ್ಯದರ್ಶಿ ಹುದ್ದೆ ಕೊಡಲಾಗಿದೆ. ಲೋಕಸಭೆಗೆ ಸ್ಪರ್ಧೆ ಮಾಡುವುದನ್ನು ದೇವೇಗೌಡರು ಮತ್ತು ಕುಮಾರಸ್ವಾಮಿ ತೀರ್ಮಾನ ಮಾಡುತ್ತಾರೆ. ಹಾಸನದಲ್ಲಿ ಎ.ಮಂಜು ಸ್ಪರ್ಧೆ ಬಗ್ಗೆ ಮಾತನಾಡಲ್ಲ. ಅದೆಲ್ಲಾ ಕಾಂಗ್ರೆಸ್ ಮುಖಂಡರು ತೀರ್ಮಾನ ಮಾಡುತ್ತಾರೆ ಎಂದರು.

ಸರ್ಕಾರದಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದೆ ಎಂಬ ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿ, ಈಶ್ವರಪ್ಪ ಲೋಕೋಪಯೋಗಿ ಇಲಾಖೆಯಲ್ಲಿ ಎಷ್ಟು ವರ್ಗಾವಣೆ ಮಾಡಿಸಿದ್ದಾರೆ, ಎಷ್ಟು ದುಡ್ಡು ಕೊಟ್ಟಿದ್ದಾರೆ ಅಂತ ಅವರನ್ನು ಕೇಳಿ. ನಮ್ಮ ಇಲಾಖೆಯಲ್ಲೂ ಅವರು ವರ್ಗಾವಣೆ ಮಾಡಿಸಿಲ್ಲವೆ  ಎಂದು ತಿರುಗೇಟು ನೀಡಿದರು.

ಈಶ್ವರಪ್ಪ ಬಗ್ಗೆ ಗೌರವ ಇದೆ. ನಾನಂತೂ ಯಾವುದೇ ವರ್ಗಾವಣೆ ಮಾಡಿಲ್ಲ. ಲೆಟರ್ ಕೊಟ್ಟು ಅವರೇ ವರ್ಗಾವಣೆ ಮಾಡಿಸಿದ್ದಾರೆ. ಹಣ ಪಡೆದಿರುವ ಬಗ್ಗೆ ಅವರ ಬಳಿ ದಾಖಲೆ ಇದ್ದರೆ ಕೊಡಲಿ. ಇಲ್ಲದಿದ್ದರೆ ಬಾಯಿ ಮುಚ್ಚಿಕೊಂಡು ಸುಮ್ಮನಿರಬೇಕು. ಸಮಯ ಬಂದಾಗ ಶಿಫಾರಸ್ಸು ಪತ್ರ ಕೊಟ್ಟ ದಾಖಲೆ ಬಿಡುಗಡೆ ಮಾಡುತ್ತೇನೆ. ಈ ತರ ಮಾತನಾಡಿದರೆ ಅವರ ಗೌರವ ಅವರೇ ಹಾಳು ಮಾಡಿಕೊಳ್ಳುತ್ತಾರೆ ಎಂದು ವಾಗ್ದಾಳಿ ನಡೆಸಿದರು.

ಯಡಿಯೂರಪ್ಪ ಅವರಿಗೆ ಭತ್ತ ನಾಟಿ ಮಾಡುವ ಅಭ್ಯಾಸ ಇಲ್ಲ. ರೈತರು ನಾಟಿ ಮಾಡೋದು ಎಷ್ಟು ಕಷ್ಟ ಅಂತ ಗೊತ್ತಿಲ್ಲ. ನಾಟಿ ಮಾಡುವ ಕಷ್ಟ ನನಗೆ ಗೊತ್ತಿದೆ ಎಂದು ರೇವಣ್ಣ ಹೇಳಿದರು.


ಸಂಬಂಧಿತ ಟ್ಯಾಗ್ಗಳು

H.D.Revanna H.D.Deve Gowda ಈಶ್ವರಪ್ಪ ಯಡಿಯೂರಪ್ಪ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ