ಮಹದಾಯಿ ತೀರ್ಪು: ರಾಜ್ಯಕ್ಕೆ 13.5 ಟಿಎಂಸಿ ನೀರು ಹಂಚಿಕೆ

mahadayi verdict: 13.5TMC water for karnataka

14-08-2018

ನವದೆಹಲಿ: ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳ ನಡುವೆ ತೀವ್ರ ವಿವಾದಕ್ಕೆ ಕಾರಣವಾಗಿದ್ದ ಮಹದಾಯಿ ಯೋಜನೆ ಕುರಿತು ನ್ಯಾಯಾಧೀಕರಣ ಇಂದು ಮಹತ್ವದ ತೀರ್ಪು ನೀಡಿದ್ದು, ಕರ್ನಾಟಕದ ಪಾಲಿಗೆ 13.5 ಟಿಎಂಸಿ ನೀರು ಹಂಚಿಕೆ ಮಾಡಿ ಆದೇಶ ಹೊರಡಿಸಿದೆ. ಈ ತೀರ್ಪಿನಿಂದಾಗಿ ಉತ್ತರ ಕರ್ನಾಟಕ ಭಾಗದ ಏಳೆಂಟು ಜಿಲ್ಲೆಗಳ ಜನತೆ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ಕುಡಿಯುವ ನೀರಿಗಾಗಿ 7.5 ಟಿಎಂಸಿ ನೀರಿಗಾಗಿ ಕರ್ನಾಟಕದ ಬೇಡಿಕೆಯನ್ನು ತಿರಸ್ಕರಿಸಿದೆ. ಆದರೆ ನ್ಯಾಯಾಧೀಕರಣ 5.5 ಟಿಎಂಸಿ ನೀರು ಒದಗಿಸಿದೆ. ಮಹದಾಯಿಯಿಂದ ಮಲಪ್ರಭೆಗೆ 4 ಟಿಎಂಸಿ ನೀರು ಹರಿಸಲು ಒಪ್ಪಿಗೆ ನೀಡಿರುವ ನ್ಯಾಯಮಂಡಳಿ, 5.5 ಟಿಎಂಸಿ ನೀರು ಬಳಸಿಕೊಳ್ಳಲು ತಿಳಿಸಿದೆ. ಒಟ್ಟು 36.55 ಟಿಎಂಸಿ ನೀರು ಬಿಡುಗಡೆ ಮಾಡಬೇಕೆಂದು ನ್ಯಾಯಮಂಡಳಿಯ ಮುಂದೆ ಕರ್ನಾಟಕ ವಾದ ಮಂಡಿಸಿತ್ತು.

ಬಂಡೂರಿ ಯೋಜನೆಗೆ 2.18 ಟಿಎಂಸಿ ನೀರು, ಕಳಸಾ ಯೋಜನೆಗೆ 1.72 ಟಿಎಂಸಿ ನೀರು, ಜಲ ವಿದ್ಯುತ್ ಯೋಜನೆಗೆ ಒಟ್ಟು 8.02 ಟಿಎಂಸಿ ನೀರು, ಕಳಸಾ ಯೋಜನೆಗೆ 1.72 ಟಿಎಂಸಿ ಹಂಚಿಕೆ ಮಾಡಿದೆ.

ಮಹದಾಯಿ ವಿವಾದದಲ್ಲಿ ರೈತರು ವ್ಯವಸಾಯ ಮತ್ತು ಕುಡಿಯುವ ನೀರಿನ ಬಗ್ಗೆ ಹಲವಾರು ವರ್ಷಗಳಿಂದ ಹೋರಾಟಗಳನ್ನು ಮಾಡುತ್ತಲೇ ಬಂದಿದ್ದರು. ಈ ವಿವಾದ ಹಲವು ವರ್ಷಗಳ ಹಿಂದೆ ನ್ಯಾಯಾಧಿಕರಣದ ವ್ಯಾಪ್ತಿಗೆ ಬಂದಿತ್ತು.

ನ್ಯಾಯಾಧೀಕರಣದ ತೀರ್ಪಿನ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ಮಹದಾಯಿ ವಿವಾದ ನ್ಯಾಯಾಧಿಕರಣವು ಮಹದಾಯಿ ನೀರು ಹಂಚಿಕೆಯ ಕುರಿತು ಶಿಫಾರಸನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದು, ಅದರಲ್ಲಿರುವ ಅಂಶಗಳನ್ನು ಕೂಲಂಕಷವಾಗಿ ಅಧ್ಯಯನ ಮಾಡಿ ನಂತರ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.

ಈಗಾಗಲೇ ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು ಹಾಗೂ ಕಾನೂನು ತಜ್ಞರೊಂದಿಗೆ ಈ ವಿಷಯ ಚರ್ಚಿಸಿದ್ದು, ನ್ಯಾಯಾಧಿಕರಣದ ತೀರ್ಪು 12 ಸಂಪುಟಗಳಷ್ಟಿದ್ದು, ಅದನ್ನು ಕೂಲಂಕಷವಾಗಿ ಅಧ್ಯಯನ ನಡೆಸಿದ ನಂತರ ಎಲ್ಲರೊಂದಿಗೆ ಸಮಾಲೋಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಮಾಜಿ ಶಾಸಕ ಹಾಗೂ ಮಹದಾಯಿ ಹೋರಾಟಗಾರ ಎನ್.ಎಚ್.ಕೋನರೆಡ್ಡಿ, ಈ ತೀರ್ಪು ಅಸಮಾಧಾನ ತಂದಿದೆ. ನಾವು 36.55ಟಿಎಂಸಿ ನೀರು ಕೇಳಿದ್ದೆವು. ಆದರೆ ನಮ್ಮ ಬೇಡಿಕೆ ಈಡೇರಿಲ್ಲ. ತೀರ್ಪಿನ ಕುರಿತು ಮುಖ್ಯಮಂತ್ರಿ ಹಾಗೂ ನೀರಾವರಿ ತಜ್ಞರೊಂದಿಗೆ ಚರ್ಚಿಸಿ ಮುಂದಿನ ಕಾರ್ಯತಂತ್ರದ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಹೇಳಿದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪ್ರತಿಕ್ರಿಯಿಸಿ, ಇದೊಂದು ಐತಿಹಾಸಿಕ ತೀರ್ಪು. ನೀರನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಂಡು ಕೂಡಲೇ ಕಾಮಗಾರಿ ಆರಂಭಿಸಬೇಕು ಎಂದು ಒತ್ತಾಯಿಸಿದ್ದಾರೆ. ಹೋರಾಟಗಾರ ವೀರೇಶ ಸೊರಬದಮಠ, ಹೋರಾಟಕ್ಕೆ ಸ್ವಲ್ಪ ಮಟ್ಟಿಗೆ ಯಶಸ್ಸು ಲಭಿಸಿದೆ. ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಪ್ರತಿಕ್ರಿಯಿಸಿದರು.

 


ಸಂಬಂಧಿತ ಟ್ಯಾಗ್ಗಳು

Mahadayi Court ಕೇಂದ್ರ ಸರ್ಕಾರ ಜಲಸಂಪನ್ಮೂಲ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ