ಏರ್ ಷೋ: ಕೇಂದ್ರ ಸಚಿವ ಸದಾನಂದ ಗೌಡರು ಹೇಳಿದ್ದೇನು?

Air Show: What did Union Minister Sadananda Gowda say?

14-08-2018

ಬೆಂಗಳೂರು: ಕಳೆದ ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ರಾಜಧಾನಿ ಬೆಂಗಳೂರಿನ ಯಲಹಂಕದಲ್ಲಿ ನಡೆಯುತ್ತಿರುವ ಏರೋ ಇಂಡಿಯಾ ವೈಮಾನಿಕ ಪ್ರದರ್ಶನವನ್ನು ಬೇರೆ ಕಡೆ ಸ್ಥಳಾಂತರಿಸಿದರೆ ಬಿಜೆಪಿಗೆ ರಾಜ್ಯದಲ್ಲಿ ಮುಜುಗರದ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಕೇಂದ್ರ ಯೋಜನೆ ಮತ್ತು ಸಾಂಖಿಕ ಸಚಿವ ಡಿ.ವಿ.ಸದಾನಂದಗೌಡ ಹೇಳಿದ್ದಾರೆ.

ಈ ಕುರಿತು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಜತೆ ಮಾತಕತೆ ನಡೆಸಿರುವ ಅವರು, ಅಗತ್ಯಬಿದ್ದರೆ ಸಂಸದರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸುವುದಾಗಿ ತಿಳಿಸಿದ್ದಾರೆ.

ನಿರ್ಮಲಾ ಸೀತಾರಾಮನ್ ಅವರು ರಾಜ್ಯ ಸಭೆಗೆ ಕರ್ನಾಟಕದಿಂದ ಆಯ್ಕೆಯಾಗಿದ್ದು,  ವೈಮಾನಿಕ ಪ್ರದರ್ಶನ ಸ್ಥಳಾಂತರಿಸುವಂತಹ ಯಾವುದೇ ಬೆಳವಣಿಗೆಗಳು ನಡೆದರೆ ರಕ್ಷಣಾ ಸಚಿವರಿಗೆ ರಾಜ್ಯದಲ್ಲಿ ಮುಜುಗರವೂ ಉಂಟಾಗುತ್ತದೆ. ಅಲ್ಲದೇ ತಾವು ಪ್ರತಿನಿಧಿಸುವ ರಾಜ್ಯವನ್ನು ನಿರ್ಲಕ್ಷಿಸಿದಂತಾಗುತ್ತದೆ ಎಂದು ಹೇಳಿರುವುದಾಗಿ ಸದಾನಂದಗೌಡ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ 1996 ರಿಂದ ಎರಡುವರ್ಷಗಳಿಗೊಮ್ಮೆ ನಡೆಯುತ್ತಿರುವ ಏರೋ ಇಂಡಿಯಾ ವೈಮಾನಿಕ ಪ್ರದರ್ಶನವನ್ನು ಬೇರೆಡೆಗೆ ಸ್ಥಳಾಂತರಿಸಲಾಗುವ ಕುರಿತು ಮಾಧ್ಯಮಗಳಲ್ಲಿ ವರದಿಗಳು ಬರುತ್ತಿವೆ. ಆದರೆ, ವೈಮಾನಿಕ ಕ್ಷೇತ್ರದ ಉತ್ಪಾದನೆಯ ಶೇಕಡಾ 50ರಷ್ಟು ಬೆಂಗಳೂರಿನಲ್ಲಿ ಉತ್ಪಾದನೆಯಾಗುತ್ತಿದೆ. ಅಲ್ಲದೇ ವೈಮಾನಿಕ  ಪ್ರದರ್ಶನಕ್ಕೆ ಬೇಕಾದ ಎಲ್ಲಾ ಮೂಲ ಸೌಕರ್ಯಗಳು ಈಗಾಗಲೇ ಲಭ್ಯವಿದ್ದು, ಕರ್ನಾಟಕದ ಪ್ರವಾಸೋಧ್ಯಮ ಬೆಳವಣಿಗೆಗೆ ಪೂರಕವಾಗಲಿದೆ ಈ ಪ್ರದರ್ಶನ ಪೂರಕವಾಗಿದೆ ಎಂಬುದನ್ನು ರಕ್ಷಣಾ ಸಚಿವರಿಗೆ ಮನವರಿಕೆ ಮಾಡಿಕೊಡಲಾಗಿದೆ ಎಂದು ಹೇಳಿದ್ದಾರೆ.

ತಮ್ಮ ಮಾತುಕತೆ ಸಂದರ್ಭದಲ್ಲಿ ನಿರ್ಮಲಾ ಸೀತಾರಾಮನ್ ಅವರು, ವೈಮಾನಿಕ ಪ್ರದರ್ಶನ ಆಯೋಜಿಸಲು ಉತ್ತರ ಪ್ರದೇಶ, ರಾಜಸ್ತಾನ, ಗೋವಾ ಸೇರಿದಂತೆ ಅನೇಕ ರಾಜ್ಯಗಳಿಂದ ಬೇಡಿಕೆ ಬಂದಿದೆ. ಈ ವೈಮಾನಿಕ ಪ್ರದರ್ಶನವನ್ನು ತಮ್ಮಲ್ಲಿ ನಡೆಸುವಂತೆ ಬೇಡಿಕೆ ಸಲ್ಲಿಸಿವೆ. ಆದರೆ ಇದನ್ನು ಬೆಂಗಳೂರಿಂದ ಸ್ಥಳಾಂತರಿಸುವ ಬಗ್ಗೆ ಯಾವುದೇ ಖಚಿತ ನಿರ್ಧಾರವಾಗಿಲ್ಲ ಎಂದು ಹೇಳಿರುವುದಾಗಿ ತಿಳಿಸಿದ್ದಾರೆ.

ಯಾವುದೇ ಕಾರಣಕ್ಕೆ ಈ ವೈಮಾನಿಕ ಪ್ರದರ್ಶನವನ್ನು ಬೇರೆಡೆಗೆ ಸ್ಥಳಾಂತರಿಸುವುದಕ್ಕೆ ಸಾಧ್ಯವಿಲ್ಲ ಎಂದು ನಿರ್ಮಲಾ ಸೀತಾರಾಮನ್ ಅವರ ಗಮನಕ್ಕೆ ತರಲಾಗಿದೆ. ಅಲ್ಲದೇ ಗೊಂದಲಗಳಿಗೆ ತೆರೆ ಎಳೆದು ಇಲ್ಲಿಯೇ ಪ್ರದರ್ಶನ ನಡೆಸುವ ಕುರಿತು ಸೂಕ್ತ ಪ್ರಕಟಣೆ ಹೊರಡಿಸಬೇಕೆಂದು ಸಹ ಒತ್ತಾಯಿಸಿರುವುದಾಗಿ ಸದಾನಂದಗೌಡ ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

D.V.Sadananda Gowda AIR Show ವೈಮಾನಿಕ ಸ್ಥಳಾಂತರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ