ಸಮ್ಮಿಶ್ರ ಸರ್ಕಾರಕ್ಕೆ ಬಿಜೆಪಿ ಮುಖಂಡ ಡಿ.ಎಸ್.ವೀರಯ್ಯ ಎಚ್ಚರಿಕೆ!

BJP leader DS Veeraiah warns coalition government!

14-08-2018

ಬೆಂಗಳೂರು: ಬಡ್ತಿ ಮೀಸಲಾತಿ ಕಾಯ್ದೆ ಅಂಗೀಕಾರಗೊಂಡು ತಿಂಗಳು ಕಳೆದರೂ ರಾಜ್ಯದಲ್ಲಿರುವ ಸಮ್ಮಿಶ್ರ ಸರ್ಕಾರ ಜಾರಿ ಮಾಡದೆ ದಲಿತ ವಿರೋಧಿ ನೀತಿ ಅನುಸರಿಸುತ್ತಿದ್ದು, ಈ ವಿಷಯವನ್ನೇ ಮುಂದಿಟ್ಟುಕೊಂಡು ಮುಂಬರುವ ಲೋಕಸಭಾ ಚುನಾವಣಾ ಪ್ರಚಾರ ನಡೆಸಲಿದೆ ಎಂದು ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯಾಧ್ಯಕ್ಷ ಡಿ.ಎಸ್.ವೀರಯ್ಯ ಇಂದಿಲ್ಲಿ ಎಚ್ಚರಿಕೆ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ರಾಜ್ಯ ಸರ್ಕಾರ ಬಡ್ತಿ ಮೀಸಲಾತಿಯ ಜ್ಯೇಷ್ಠತೆಗೆ ತಂದ ಸುಗ್ರೀವಾಜ್ಞೆಗೆ ಬಿಜೆಪಿ ಸಂಪೂರ್ಣ ಬೆಂಬಲ ನೀಡಿದ್ದಕ್ಕೆ ಕಾಯ್ದೆ ಅಂಗೀಕಾರವಾಯಿತು. ಜೊತೆ ರಾಷ್ಟ್ರಪತಿ ಕೂಡ ಸುಗ್ರೀವಾಜ್ಞೆಯನ್ನು ಅಂಗೀಕರಿಸಿದ್ದಾರೆ. ಆದರೆ ಬಡ್ತಿ ಮೀಸಲಾತಿ ಕಾಯ್ದೆ ಅಂಗೀಕಾರಗೊಂಡು ತಿಂಗಳು ಕಳೆದರೂ ಸಮ್ಮಿಶ್ರ ಸರ್ಕಾರ ಕಾಯ್ದೆಯನ್ನು ಜಾರಿ ಮಾಡುತ್ತಿಲ್ಲ. ಇದು ಕಾಂಗ್ರೆಸ್ ಹಾಗು ಜೆಡಿಎಸ್ ಪಕ್ಷಗಳ ದಲಿತ ವಿರೋಧಿ ನೀತಿಗೆ ನಿದರ್ಶನವಾಗಿ. ಕೂಡಲೇ ಹಿಂಬಡ್ತಿ ಹೊಂದಿದ ನೌಕರರಿಗೆ ಮುಂಬಡ್ತಿ ನೀಡುವ ಆದೇಶವನ್ನು ಹೊರಡಿಸಬೇಕು ಎಂದು ಆಗ್ರಹಿಸಿದರು.

ರಾಷ್ಟ್ರಪತಿ ಅಂಕಿತ ಹಾಕಿದ ಕಾಯ್ದೆ ಜಾರಿಗೊಳಿಸಲು ಹಿಂದೇಟು ಹಾಕುತ್ತಿರುವ ಮೈತ್ರಿ ಸರ್ಕಾರದ ಧೋರಣೆ ಖಂಡಿಸಿ ರಾಜ್ಯ ಪ್ರವಾಸ ಮಾಡಿ ಜಿಲ್ಲೆಗಳಲ್ಲಿ ಈ ಕುರಿತು ಜಾಗೃತಿ ಮೂಡಿಸುತ್ತೇವೆ, ಸಮ್ಮಿಶ್ರ ಸರ್ಕಾರದ ವಿರುದ್ಧ ಜಿಲ್ಲೆಗಳಲ್ಲಿ ಪ್ರತಿಭಟನೆಯನ್ನೂ ಮಾಡುತ್ತೇವೆ ಎಂದರು.

ದಲಿತ ದೌರ್ಜನ್ಯ ತಡೆ ಕಾಯ್ದೆ ದುರ್ಬಲಗೊಳಿಸಿರುವ ತೀರ್ಪನ್ನು ಸುಪ್ರೀಂ ಕೋರ್ಟ್ ವಿಭಾಗೀಯ ಪೀಠ ನೀಡಿತ್ತು. ಆದರೆ ಮೋದಿ ಸರ್ಕಾರ ಎಚ್ಚೆತ್ತುಕೊಂಡು ಪ್ರಕರಣದ ಗಂಭೀರತೆಯನ್ನು ಅರ್ಥ ಮಾಡಿಕೊಂಡು ಕೇಂದ್ರದಿಂದ ಕಾಯ್ದೆಯನ್ನೇ ರಚಿಸಿ ಯಥಾಸ್ಥಿತಿ ಕಾಯ್ದುಕೊಳ್ಳುವ ಕೆಲಸ ಮಾಡಿತು. ಮೋದಿ ಸರ್ಕಾರ ಪರುಶಿಷ್ಟ ಜಾತಿ ಮತ್ತು ಪಂಗಡದ ಪರ ಇದೆ ಎನ್ನುವುದಕ್ಕೆ ಇದು ನಿದರ್ಶನ. ದಲಿತರ ಹಿತ ಕಾಯದ ಜೆಡಿಎಸ್ ಕಾಂಗ್ರೆಸ್ ಕೇವಲ ಮತ ಬ್ಯಾಂಕ್ ಮಾಡಿಕೊಂಡಿದ್ದಾರೆ. ದಲಿತರು ಇನ್ನೂ ಸೂರಿಲ್ಲದೇ ಜೀವನ ನಡೆಸಲು ಕಾಂಗ್ರೆಸ್ ಆಡಳಿತ ಕಾರಣ, ಅವರಿಂದ ದಲಿತರಿಗೆ ರಕ್ಷಣೆ, ಭದ್ರತೆ ಸಿಗಲ್ಲ ಎಂದರು.

ನಿಮ್ಮದೂ ಒಂದು ರಾಷ್ಟ್ರೀಯ ಪಕ್ಷ ಸುಪ್ರೀಂ ಕೋರ್ಟ್ ತೀರ್ಪು ನೀಡಿದಾಗ ನೀವು ಏಕೆ ಕೋರ್ಟ್‍ಗೆ ಹೋಗಲಿಲ್ಲ ಎಂದು ರಾಹುಲ್ ಗಾಂಧಿಯನ್ನು ಪ್ರಶ್ನಿಸಿದ ಡಿ.ಎಸ್.ವೀರಯ್ಯ ಮೋದಿ ಬರೀ ಹದಿನೈದು ದಿನದಲ್ಲೇ ಕ್ರಮ ಕೈಗೊಂಡರು ಇದು ಬಿಜೆಪಿಗೆ ದಲಿತರ ಪರ ಇರುವ ಬದ್ಧತೆ ತೋರಿಸಲಿದೆ ಎಂದರು.

ಜಾತಿ ಸಮೀಕ್ಷೆ ವೈಜ್ಞಾನಿಕ ಮಟ್ಟದಲ್ಲಿ ಆಗಿಲ್ಲ, ಕೇವಲ ರಾಜಕೀಯ ಪ್ರೇರಿತ ಸಮೀಕ್ಷೆಯಾಗಿದೆ, ಅವೈಜ್ಞಾನಿಕ ಅಂಕಿ ಅಂಶಗಳು ಇವೆ, ಸಮೀಕ್ಷೆ ಮಾಡುವವರು ಹಳ್ಳಿಗಳಿಗೆ ಹೋಗಿಲ್ಲ, ಸರ್ವೆ ಮಾಡಿಲ್ಲ, ಹೊಸದಾಗಿ 500 ಜಾತಿ ಹೆಚ್ಚಾಗಿ ಬಂದಿವೆ ಎಂಬುದನ್ನು ಸ್ಪಷ್ಟಪಡಿಸಿಬೇಕು ಎಂದು ಹೇಳಿದರು.

ಕಾಂಗ್ರೆಸ್‍ನವರು ಜಾತಿಯ ವಿಷ ಬೀಜ ಬಿತ್ತ ಹೊರಟಿದ್ದಾರೆ. ಸರಿಯಾದ ರೀತಿಯ ವೈಜ್ಞಾನಿಕ ಸಮೀಕ್ಷೆ ಮಾಡಿ ವರದಿ ಬಿಡುಗಡೆ ಮಾಡಿದರೆ ಅಭ್ಯಂತರವಿಲ್ಲ. ಆದರೆ ಗಾಣಿಗ ಲಿಂಗಾಯತ, ಮಡಿವಾಳ ಲಿಂಗಾಯತ ಅಂತ ಮಾಡಿ ಏನು ಮಾಡಲು ಹೊರಟಿದ್ದೀರಿ, ಒಕ್ಕಲಿಗರು ಕಡಿಮೆ, ಕುರುಬರು ಜಾಸ್ತಿ ಎಂತ ಮಾಡಲು ಹೊರಟಿದ್ದೀರಾ? ಯಾರು ಎಷ್ಟು ಸಂಖ್ಯೆಯಲ್ಲಾದರೂ ಇರಲಿ ವಾಸ್ತವಾಂಶದ ವೈಜ್ಞಾನಿಕ ವರದಿ ಮಂಡಿಸಿ ಎಂದರು.


ಸಂಬಂಧಿತ ಟ್ಯಾಗ್ಗಳು

sc/st d s veeraiah ಲಿಂಗಾಯತ ಗಾಣಿಗ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ