ಎಂ.ಎ. ಮಾಡಿ, ಉನ್ನತ ಶಿಕ್ಷಣ ಸಚಿವರಿಗೆ ರಾಯರೆಡ್ಡಿ ಸಲಹೆ

Ex-minister rayareddy suggestion to minister GT Devegowda

14-08-2018

ಬೆಂಗಳೂರು: ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡರಿಗೆ ಮಾಜಿ ಉನ್ನತ ಶಿಕ್ಷಣ ಸಚಿವ ಬಸವರಾಜ್ ರಾಯರೆಡ್ಡಿ ಮುಕ್ತ ವಿಶ್ವವಿದ್ಯಾಲಯದಲ್ಲಿ ರಾಜಕೀಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆಯುವಂತೆ ಸಲಹೆ ನೀಡಿದ್ದಾರೆ. ‘ಓದಿಲ್ಲ ಅನ್ನೋ ಕೀಳರಿಮೆ ಬೇಡ. ಎಂ.ಎ.ನಲ್ಲಿ ರಾಜಕೀಯ ಶಾಸ್ತ್ರ ತೆಗೆದುಕೊಳ್ಳಿ, ಹಾಗಂತ ನಾನು ಜಿ.ಟಿ.ದೇವೇಗೌಡರಿಗೆ ಸಲಹೆ ಮಾಡುತ್ತೇನೆ’ ಎಂದು ಬಸವರಾಜ ರಾಯರೆಡ್ಡಿ ಹೇಳಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಮಾಜಿ ಸಚಿವ ಬಸವರಾಜ್ ರಾಯರೆಡ್ಡಿ, ‘ನಾನು ಈ ಹಿಂದೆ ಉನ್ನತ ಶಿಕ್ಷಣ ಸಚಿವನಾಗಿದ್ದಾಗ ಹಲವಾರು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದ್ದೆ. ಅನೇಕ ಕಾರಣಗಳಿಂದ ಅಭಿವೃದ್ಧಿ ಕಾರ್ಯಕ್ರಮಗಳು ವಿಳಂಬ ಆಗಿದ್ದವು. ಈಗ  ಹೊಸ ವಿಧಾನಸಭೆ ಅಸ್ತಿತ್ವಕ್ಕೆ ಬಂದಿದೆ. ತ್ವರಿತವಾಗಿ ಈ ವಿಚಾರಗಳನ್ನು ಗಂಭೀರವಾಗಿ ತೆಗೆದುಕೊಂಡು ಮುಖ್ಯಮಂತ್ರಿಗಳು ಪರಿಹರಿಸಬೇಕು ಎಂದು ಆಗ್ರಹಿಸಿದರು.

ಕರ್ನಾಟಕದಲ್ಲಿ ಇರುವ ಹದಿನೇಳು ವಿಶ್ವವಿದ್ಯಾಲಯಗಳಿಗೆ ಒಂದು ಸಮಗ್ರ ಕಾಯಿದೆ ತರಲು ಹೊರಟಿದ್ದೆವು. ಅದಕ್ಕಾಗಿ ಮೂರೂ ಪಕ್ಷಗಳ ಸದಸ್ಯರನ್ನು ಒಳಗೊಂಡ ಸಮಿತಿ ರಚಿಸಲಾಗಿತ್ತು. ಸಮಿತಿ ಮಾಡಿದ ಶಿಫಾರಸುಗಳನ್ನು ರಾಜ್ಯಪಾಲರಿಗೆ ಕಳಿಸಿಕೊಡಲಾಗಿದೆ. ಆದರೆ, ಇಲ್ಲಿವರೆಗೂ ಕಾಯ್ದೆ ಕಾರ್ಯರೂಪಕ್ಕೆ ಬಂದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕೂಡಲೇ ರಾಜ್ಯಪಾಲರ ಅಂಗೀಕಾರ ಪಡೆದು ಈ ಕಾಯ್ದೆ ಜಾರಿಗೆ ತರಬೇಕು. ಡಾ.ಬಾಬಾ ಸಾಹೇಬ್ ಸ್ಕೂಲ್‌ ಆಫ್ ಎಕನಾಮಿಕ್ಸ್ ಕಾಲೇಜಿಗೆ ಶಾಶ್ವತ ನಿರ್ದೇಶಕರು, ಹಾಗೂ ಪ್ರಾಧ್ಯಾಪಕರನ್ನು ನೇಮಿಸಬೇಕು. ರಾಯಚೂರು ವಿವಿ, ಬೆಂಗಳೂರಿನ ಮಹಾರಾಣಿ ಕಾಲೇಜ್ ನ ಕ್ಲಸ್ಟರ್ ವಿವಿ, ಹಾಗೂ ಮಂಡ್ಯ ವಿವಿಗಳ ಪ್ರಾರಂಭ ಮಾಡಲು ರಾಜ್ಯಪಾಲರ ಅನುಮೋದನೆ ಪಡೆಯಬೇಕು ಎಂದು ಒತ್ತಾಯಿಸಿದರು.

ಮೈಸೂರಿನ ಗಂಗೂಬಾಯಿ ಹಾನಗಲ್ ಸಂಗೀತ ವಿವಿಗೆ ಸ್ವಂತ ಕಟ್ಟಡ ಕಾಮಗಾರಿ ಪ್ರಾರಂಭಿಸಲು ಮನವಿ ಮಾಡಿದರು. ಸಿದ್ದರಾಮಯ್ಯ ಕಾಲದಲ್ಲಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್‌ ಟಾಪ್ ವಿತರಿಸಲು ಟೆಂಡರ್ ಕರೆಯಲಾಗಿತ್ತು. ನಾನಾ ಕಾರಣದಿಂದ ಈ ಪ್ರಕ್ರಿಯೆ ನಿಂತು ಹೋಗಿತ್ತು. ಅದಷ್ಟು ಬೇಗ ಮತ್ತೆ ಟೆಂಡರ್ ಪ್ರಕ್ರಿಯೆ ಪ್ರಾರಂಭಿಸಿ ವಿದ್ಯಾರ್ಥಿಗಳಿಗೆ ಲ್ಯಾಪ್‌ ಟಾಪ್ ನೀಡಬೇಕು. ಈ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಪತ್ರ ಬರೆದು ಮನವಿ ಮಾಡುತ್ತೇನೆ ಎಂದು ಮಾಜಿ ಸಚಿವ ಬಸವರಾಜ್ ರಾಯರೆಡ್ಡಿ ತಿಳಿಸಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ