ಇನ್ನೂ 3 ದಿನ ಭಾರೀ ಮಳೆ!

Another 3 days heavy rain at cauvery river region!

13-08-2018

ಬೆಂಗಳೂರು: ಕಾವೇರಿ ಜಲಾನಯನ ಪ್ರದೇಶದಲ್ಲಿ ಇನ್ನೂ ಮೂರು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ ಹಿನ್ನಲೆಯಲ್ಲಿ ಜಿಲ್ಲಾಡಳಿತ ಅಚ್ಚುಕಟ್ಟು ಪ್ರದೇಶದ ಜನರಿಗೆ ಎಚ್ಚರಿಕೆಯಿಂದಿರುವಂತೆ ಸೂಚನೆ ನೀಡಿದೆ. ಹಾರಂಗಿ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು, ಸುತ್ತಮುತ್ತಲಿನ ನಿವಾಸಿಗಳನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲು ಅಗತ್ಯ ವ್ಯವಸ್ಥೆ ಕೈಗೊಳ್ಳಲಾಗಿದೆ. ಹಾರಂಗಿ ಅಣೆಕಟ್ಟಿನ ನೀರಿನ ಒಳಹರಿವು 20 ಸಾವಿರ ಕ್ಯೂಸೆಕ್ ನಷ್ಟಿದೆ.

ಕೊಡಗು ಜಿಲ್ಲೆಯಲ್ಲಿ ಮಳೆ ಮುಂದುವರೆದಿದ್ದು, ಭಾಗಮಂಡಲದಲ್ಲಿ ನಿನ್ನೆ ಅತೀ ಹೆಚ್ಚು 106 ಮಿಲಿ ಮೀಟರ್ ಮಳೆಯಾಗಿದೆ. ಜಿಲ್ಲಾಡಳಿತ ಭಾರೀ ಮಳೆಯ ಹಿನ್ನಲೆಯಲ್ಲಿ ಇಂದು ಎಲ್ಲ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿತ್ತು. ತಮಿಳಿನಾಡಿನ ಉದಗಮಂಡಲಂಗೆ ಸಂಪರ್ಕ ಕಲ್ಪಿಸುವ ಮೈಸೂರು-ನಂಜನಗೂಡು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಳೆದ ನಾಲ್ಕು ದಿನಗಳಿಂದ ನೀರಿನ ಹರಿವು ಜಾಸ್ತಿಯಾಗಿದ್ದು, ಪರ್ಯಾಯ ಸಂಚಾರ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಕೆ.ಆರ್.ಎಸ್, ಬಲಮುರಿ, ಶ್ರೀರಂಗಪಟ್ಟಣದ ಸಂಗಮ, ಗಗನ ಚುಕ್ಕಿ, ಭರಚುಕ್ಕಿ ಜಲಪಾತ ಹಾಗೂ ತಲಕಾಡು ಮತ್ತು ಚುಂಚನಕಟ್ಟೆಯಲ್ಲಿ ನೀರಿನ ರಮಣೀಯ ದೃಶ್ಯವನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರ ಸಂಖ್ಯೆ ಈ ನಡುವೆ ಹೆಚ್ಚುತ್ತಿದೆ. ಕಬಿನಿ ಜಲಾಶಯದಿಂದ ನೀರು ಹೊರಬಿಡಲಾಗಿದ್ದು, 80 ಸಾವಿರ ಕ್ಯೂಸೆಕ್ ನಷ್ಟಿದ್ದ ನೀರಿನ ಒಳಹರಿವು ಇಂದು ಬೆಳಗ್ಗೆ 40ಸಾವಿರ ಕ್ಯೂಸೆಕ್‍ಗೆ ಇಳಿದಿದೆ.

ಅದೇ ರೀತಿ ಚಿಕ್ಕಮಗಳೂರಿನಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದು, ಮುಳಯ್ಯನಗಿರಿ ಪ್ರದೇಶದ ಅನೇಕ ಕಡೆ ಭೂಕುಸಿತ ಉಂಟಾಗಿದ್ದು, ಸಂಚಾರಕ್ಕೆ ತೊಂದರೆ ಉಂಟಾಗಿದೆ. ಜಿಲ್ಲೆಯ ಐದು ತಾಲೂಕುಗಳಿಗೆ ಮಳೆಯ ಹಿನ್ನಲೆಯಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.


ಸಂಬಂಧಿತ ಟ್ಯಾಗ್ಗಳು

cauvery rain ಚುಂಚನಕಟ್ಟೆ ಸಂಚಾರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ