ರೈತರ ಸಾಲಮನ್ನಾ ಬಗ್ಗೆ ವಿವರಣೆ ನೀಡಿದ ಸಹಕಾರ ಸಚಿವ

co-operative ministers detailed about loan waiver

13-08-2018

ಬೆಂಗಳೂರು: ಸಹಕಾರ ಸಂಸ್ಥೆಗಳ ಮೂಲಕ ರೈತರು ಪಡೆದಿದ್ದ 9,448 ಕೋಟಿ ಅಲ್ಪಾವಧಿ ಬೆಳೆ ಸಾಲವನ್ನು ಮನ್ನಾ ಮಾಡಲಾಗಿದ್ದು, ಏಕಕಾಲಕ್ಕೆ ಋಣಮುಕ್ತ ಪತ್ರ ನೀಡುವ ಕುರಿತು ಸಮಾಲೋಚನಾ ಪ್ರಕ್ರಿಯೆಗಳು ನಡೆಯುತ್ತಿವೆ ಎಂದು ಸಹಕಾರ ಸಚಿವ ಬಂಡೆಪ್ಪ ಕಾಶಂಪೂರ್ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2018ರ ಜುಲೈ 10ರವರೆಗೆ ಹೊಂದಿರುವ ಒಂದು ಲಕ್ಷದವರೆಗಿನ ಕೃಷಿ ಸಾಲವನ್ನು ಮನ್ನಾ ಮಾಡಲಾಗಿದೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು, ಲ್ಯಾಂಪ್ಸ್, ಡಿಸಿಸಿ ಬ್ಯಾಂಕುಗಳು, ಪಿಕಾರ್ಡ್ ಬ್ಯಾಂಕುಗಳು ವಿತರಿಸಿರುವ ಅಲ್ಪಾವಧಿ ಬೆಳೆ ಸಾಲವನ್ನು ಒಂದು ಲಕ್ಷದವರೆಗೆ ಮನ್ನಾ ಮಾಡಲಾಗಿದೆ ಎಂದರು.

ಒಂದು ರೈತ ಕುಟುಂಬಕ್ಕೆ ಒಂದು ಲಕ್ಷ ಮಾತ್ರ ಸಾಲ ಮನ್ನಾವಾಗಲಿದೆ. ಸಾಲ ಪಡೆದ ರೈತರು ಮೃತಪಟ್ಟಿದ್ದರೆ. ಅವರ ವಾರಸುದಾರರಿಗೆ ಸಾಲ ಮನ್ನಾ ಸೌಲಭ್ಯ ತಲುಪಲಿದೆ. ಸಾಲ ಮರುಪಾವತಿ ಮಾಡುವ ಗಡುವು ಮುಗಿಯುವ ದಿನಾಂಕಕ್ಕೆ ಬ್ಯಾಂಕುಗಳಿಗೆ ರೈತ ಪಡೆದ ಸಾಲವನ್ನು ಪಾವತಿಸಲಾಗುವುದು. ಒಂದು ವೇಳೆ ಸಾಲ ಸಂಪೂರ್ಣ ಮರುಪಾವತಿಯಾಗಿದ್ದಾರೆ ರೈತ ಪಡೆದ ಸಾಲವನ್ನು ಆತನ ಉಳಿತಾಯ ಖಾತೆಗೆ ಜಮಾ ಮಾಡಲಾಗುತ್ತದೆ ಎಂದರು.

ಸಾಲ ಮನ್ನಾದ ಅನುದಾನವನ್ನು ನೇರ ನಗದು ವರ್ಗಾವಣೆ(ಡಿಬಿಟಿ) ರೈತರ ಉಳಿತಾಯ ಖಾತೆಗೆ ಜಮೆ ಮಾಡಲಾಗುತ್ತದೆ. 20ಸಾವಿರಕ್ಕಿಂತ ಹೆಚ್ಚು ಸರ್ಕಾರಿ ವೇತನ ಮತ್ತು ಪಿಂಚಣಿ ಪಡೆಯುವ ರೈತರಿಗೆ ಈ ಸೌಲಭ್ಯ ಅನ್ವಯವಾಗುವುದಿಲ್ಲ. ಕಳೆದ ಮೂರು ವರ್ಷದಲ್ಲಿ ಯಾವುದಾದರು ಒಂದು ವರ್ಷ ಆದಾಯ ತೆರಿಗೆ ಪಾವತಿಸಿದ್ದರೂ ಸಾಲಮನ್ನಾ ಅನ್ವಯವಾಗುವುದಿಲ್ಲ. ಡಿಸಿಸಿ ಬ್ಯಾಂಕುಗಳಲ್ಲಿ ನಿಶ್ಚಿತ ಠೇವಣಿ ಇದ್ದರೆ ಅದನ್ನು ಸಾಲದ ಮೊತ್ತದಲ್ಲಿ ಕಳೆಯಲಾಗುವುದು. ಈ ಮೊದಲು ಸಾಲ ಮರುಪಾವತಿಸದೆ ಸುಸ್ತಿಬಡ್ಡಿ ಬಿದ್ದಿದ್ದರೆ ಆ ಬಡ್ಡಿಯನ್ನು ರೈತರೇ ಭರಿಸಬೇಕು ಎಂದು ಸಚಿವರು ಹೇಳಿದರು.

ರಾಜ್ಯದಲ್ಲಿರುವ 22ಲಕ್ಷ ರೈತರ ಪೈಕಿ 20.38 ರೈತರಿಗೆ ಸಾಲ ಮನ್ನಾ ಸೌಲಭ್ಯ ಸಿಗುತ್ತದೆ. ಒಂದು ಲಕ್ಷಕ್ಕಿಂತ ಮೇಲ್ಪಟ್ಟು ಸಾಲ ಪಡೆದಿರುವ ಬಾಕಿ ಎರಡು ಲಕ್ಷ ರೈತರ ಸಾಲ ಮನ್ನಾ ಆಗುತ್ತಿಲ್ಲ. ಸಹಕಾರಿ ಸಂಸ್ಥೆಗಳಲ್ಲಿ 10,700 ಕೋಟಿ ರೂ. ಸಾಲ ನೀಡಲಾಗಿದ್ದು, 9,448.61 ಕೋಟಿ ರೂ. ಸಾಲ ಮನ್ನಾ ಮಾಡಲಾಗಿದೆ. ಬಾಕಿ 1500 ಕೋಟಿ ಉಳಿದಿದೆ ಎಂದು ವಿವರಿಸಿದರು.

ಸಾಲಮನ್ನಾ ಸೌಲಭ್ಯ ಜಿಲ್ಲಾವಾರು ಹಂಚಿಕೆಯಾಗಿರುವ ಕುರಿತು ವಿವರಣೆ ನೀಡಿದ ಸಚಿವರು, ಬೆಳಗಾವಿ ಜಿಲ್ಲೆಯ 3.11ಲಕ್ಷ ರೈತರಿಗೆ 115.25ಕೋಟಿ, ಬೀದರ್ ಜಿಲ್ಲೆಯ 11.09 ಲಕ್ಷ ರೈತರಿಗೆ 508 ಕೋಟಿ, ಶಿವಮೊಗ್ಗದ 40ಸಾವಿರ ರೈತರಿಗೆ 1154.75ಕೋಟಿ, ಮಂಡ್ಯ ಜಿಲ್ಲೆಯ 11.03ಲಕ್ಷ ರೈತರಿಗೆ 533.50ಕೋಟಿ, ಯಾದಗಿರಿ ಜಿಲ್ಲೆಯ 41 ಸಾವಿರ ರೈತರಿಗೆ 97 ಕೋಟಿ ರೂ., ಚಿಕ್ಕಬಳ್ಳಾಪುರ ಜಿಲ್ಲೆಯ 11 ಸಾವಿರ ರೈತರಿಗೆ 85.68 ಕೋಟಿ. ಚಿಕ್ಕಮಗಳೂರು ಜಿಲ್ಲೆಯ 24 ಸಾವಿರ ರೈತರಿಗೆ 217 ಕೋಟಿ, ಚಿತ್ರದುರ್ಗ ಜಿಲ್ಲೆಯ 35ಸಾವಿರ ರೈತರಿಗೆ 165.68 ಕೋಟಿ, ರಾಯಚೂರು ಜಿಲ್ಲೆಯ 6ಸಾವಿರ ರೈತರಿಗೆ 188 ಕೋಟಿ, ಉಡುಪಿ ಜಿಲ್ಲೆಯ 22 ಸಾವಿರ ರೈತರಿಗೆ 164 ಕೋಟಿ, ಉತ್ತರ ಕನ್ನಡ ಜಿಲ್ಲೆಯ 77ಸಾವಿರ ರೈತರಿಗೆ 492 ಕೋಟಿ. ಹಾಸನ ಜಿಲ್ಲೆಯ 1.20ಲಕ್ಷ ರೈತರಿಗೆ 501.19ಕೋಟಿ,

ಹಾವೇರಿ ಜಿಲ್ಲೆಯ 19 ಸಾವಿರ ರೈತರಿಗೆ 19.66ಕೋಟಿ, ಕಬಲುರ್ಗಿ ಜಿಲ್ಲೆಯ 83 ಸಾವಿರ ರೈತರಿಗೆ 241 ಕೋಟಿ, ಕೊಪ್ಪಳ ಜಿಲ್ಲೆಯ 22ಸಾವಿರ ರೈತರಿಗೆ 77 ಕೋಟಿ, ಕೋಲಾರ ಜಿಲ್ಲೆಯ 9,645ರೈತರಿಗೆ 86 ಕೋಟಿ.  ಕೊಡಗು ಜಿಲ್ಲೆಯ 3.82ಲಕ್ಷ ರೈತರಿಗೆ 325 ಕೋಟಿ, ಗದಗ ಜಿಲ್ಲೆಯ 18ಸಾವಿರ ರೈತರಿಗೆ 67 ಕೋಟಿ, ತುಮಕೂರು ಜಿಲ್ಲೆಯ 1.21ಲಕ್ಷ ರೈತರಿಗೆ 43ಸಾವಿರ ಕೋಟಿ. ದಾವಣಗೆರೆ ಜಿಲ್ಲೆಯ 80ಸಾವಿರ ರೈತರಿಗೆ 217 ಕೋಟಿ, ದಕ್ಷಿಣ ಕನ್ನಡ ಜಿಲ್ಲೆಯ 71ಸಾವಿರ ರೈತರಿಗೆ 562ಕೋಟಿ, ಧಾರವಾಡ ಜಿಲ್ಲೆಯ 17ಸಾವಿರ ರೈತರಿಗೆ 66 ಕೋಟಿ, ಬಾಗಲಕೋಟೆ ಜಿಲ್ಲೆಯ 2ಲಕ್ಷ ರೈತರಿಗೆ 1176 ಕೋಟಿ, ಬಳ್ಳಾರಿ ಜಿಲ್ಲೆಯ 67ಸಾವಿರ ರೈತರಿಗೆ 403 ಕೋಟಿ. ವಿಜಯಪುರ ಜಿಲ್ಲೆಯ 1.71ಲಕ್ಷ ರೈತರಿಗೆ 760 ಕೋಟಿ, ಮೈಸೂರು ಜಿಲ್ಲೆಯ 64ಸಾವಿರ ರೈತರಿಗೆ 421 ಕೋಟಿ, ಬೆಂಗಳೂರು ನಗರ ಜಿಲ್ಲೆಯ 7ಸಾವಿರ ರೈತರಿಗೆ 36 ಕೋಟಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ 16 ಸಾವಿರ ರೈತರಿಗೆ 75 ಕೋಟಿ, ರಾಮನಗರ ಜಿಲ್ಲೆಯ 36ಸಾವಿರ ರೈತರಿಗೆ 166ಕೋಟಿ ರೂ. ಸಾಲ ಮನ್ನವಾಗಿದೆ ಎಂದು ವಿವರ ನೀಡಿದರು.

ಕೃಷಿ ಸಾಲಕ್ಕೆ ನಬಾರ್ಡ್ ನೆರವು: ರಾಜ್ಯದಲ್ಲಿ 78 ಲಕ್ಷ ರೈತರಿದ್ದಾರೆ. ಅವರಲ್ಲಿ ಸಹಕಾರ ಸಂಸ್ಥೆಗಳಿಂದ 22ಲಕ್ಷ ಮಂದಿಗೆ, ರಾಷ್ಟ್ರೀಕೃತ ಬ್ಯಾಂಕುಗಳಿಂದ 28 ಲಕ್ಷ ಮಂದಿಗೆ ಸಾಲ ನೀಡಲಾಗುತ್ತಿದೆ. ಉಳಿದ 28ಲಕ್ಷ ರೈತರಿಗೆ ಸಾಲ ಸಿಗುತ್ತಿಲ್ಲ. ಹಾಗಾಗಿ ನಬಾರ್ಡ್ ನಿಂದ ಆರ್ಥಿಕ ನೆರವನ್ನು ಕೋರಿದ್ದೇವೆ. ಈವರೆಗೂ ಶೇ.40ರಷ್ಟು ಆರ್ಥಿಕ ನೆರವು ಪಡೆಯಲಾಗುತ್ತಿದೆ. ಅದನ್ನು ಶೇ.75ಕ್ಕೆ ಹೆಚ್ಚಿಸುವಂತೆ ಬೇಡಿಕೆ ಇಟ್ಟಿದ್ದೇವೆ. ಶೇ.60ರಷ್ಟು ನೆರವು ದೊರೆಯುವ ನಿರೀಕ್ಷೆ ಇದೆ ಎಂದು ಬಂಡೆಪ್ಪ ಕಾಶೆಂಪೂರ್ ತಿಳಿಸಿದರು.

ಅದರಿಂದ ಬರುವ ಹೆಚ್ಚುವರಿ ಹಣವನ್ನು ಇನ್ನು ಸುಮಾರು 10ರಿಂದ 15ಸಾವಿರ ರೈತರಿಗೆ ಹೊಸದಾಗಿ ಸಾಲ ನೀಡಲು ಬಳಕೆ ಮಾಡುವುದಾಗಿ ಹೇಳಿದರು. ಹಿಂದಿನ ಸಿದ್ದರಾಮಯ್ಯ ಸರ್ಕಾರ 8165 ಕೋಟಿ ಸಾಲ ಮನ್ನಾ ಮಾಡಿತ್ತು. ನಮ್ಮ ಸರ್ಕಾರ 9448 ಕೋಟಿ ಸಾಲ ಮನ್ನಾ ಮಾಡಿದೆ. ಇಷ್ಟು ಸಾಲ ತೀರುವಳಿ ಪತ್ರವನ್ನು ಏಕಕಾಲಕ್ಕೆ ನೀಡಬೇಕು ಎಂಬ ಅಭಿಪ್ರಾಯವಿದ್ದು, ಅದನ್ನು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರ ಜೊತೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.


ಸಂಬಂಧಿತ ಟ್ಯಾಗ್ಗಳು

Bandeppa Kashempur loan waiver ತೀರುವಳಿ ಕೃಷಿ ಸಾಲ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಓಳ್ಳೇಯ ಮಾಹಿತಿ ನೀಡಿದ್ದಿರ ಧನ್ಯವಾದಗಳು
  • ಮಂಜುನಾಥ್. ಕೆ.ಆರ್
  • ಅಧ್ಯಕ್ಷರು. ಶ್ಶಾಗಲೆ . ಫ್ರಾ.ಕೃ.ಪ.ಸ.ಸಂಘ.ನಿ.ಶ್ಶಾಗಲೆ. ದಾವಣಗೆರೆ. ತಾ/,
Good news
  • Veerendra
  • Driving