ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಭದ್ರತೆ ಮತ್ತು ಹೈ ಅಲರ್ಟ್!

police high protection on independence day

13-08-2018

ಬೆಂಗಳೂರು: ದೇಶದಲ್ಲಿ ಸ್ವಾತಂತ್ರ್ಯೊವದ ವೇಳೆ ವಿಧ್ವಂಸಕ ಕೃತ್ಯಗಳನ್ನು ಎಸಗುವ ಬೆದರಿಕೆಯ ಮಾಹಿತಿಯನ್ನು ಕೇಂದ್ರ ಗುಪ್ತಚರ ನೀಡಿರುವ ಹಿನ್ನಲೆಯಲ್ಲಿ ರಾಜ್ಯದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ರಾಜ್ಯದ ಪ್ರಮುಖ ಅನೆಕಟ್ಟುಗಳು, ಜಲಾಶಯಗಳು, ವಿಧಾನಸೌಧ, ಹೈಕೋರ್ಟ್,ರಾಜಭವನ ಪ್ರಮುಖ ರೈಲು ನಿಲ್ದಾಣಗಳು ಬಸ್‍ನಿಲ್ದಾಣಗಳು ಸೇರಿ ಸೂಕ್ಷ್ಮ ಅತಿ ಸೂಕ್ಷ್ಮ ಪ್ರದೇಶಗಲ್ಲಿ ಪೊಲೀಸ್ ಭದ್ರತೆಯನ್ನು ಹೆಚ್ಚಿಸಿ ಹೈ ಅಲರ್ಟ್ ಘೋಷಿಸಲಾಗಿದೆ.

ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಭಾಗವಹಿಸುವ ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಪೆರೇಡ್ ಮೈದಾನದಲ್ಲಿ ನಡೆಯುವ ಸ್ವಾತಂತ್ರ್ಯ ದಿನಾಚರಣೆಗೆ ಅಭೂತ ಪೂರ್ವ ಭದ್ರತೆಯನ್ನು ಕೈಗೊಳ್ಳಲಾಗಿದೆ. ಸ್ವಾತಂತ್ರ್ಯ ದಿನಾಚರಣೆ ಸಿದ್ಧತೆಗಳನ್ನು ಬಹುತೇಕ ಪೂರ್ಣಗೊಳಿಸಲಾಗಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಬೆಳಿಗ್ಗೆ 9 ಗಂಟೆಗೆ ಧ್ವಜಾರೋಹಣ ನೆರವೇರಿಸಲಿದ್ದು, ಧ್ವಜಾರೋಹಣದ ವೇಳೆ ಪುಷ್ಪ ವೃಷ್ಟಿಗಾಗಿ ವಾಯುಪಡೆಯ ಹೆಲಿಕಾಪ್ಟರ್ ಸಜ್ಜುಗೊಳಿಸಲಾಗಿದೆ.

ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಮೈದಾನದ ಭದ್ರತೆಗೆ ನಗರದ ಎಲ್ಲಾ ವಿಭಾಗಗಳಿಂದ 9 ಡಿಸಿಪಿ, 16 ಎಸಿಪಿ, 46 ಪಿಐ, 102 ಪಿಎಸ್‍ಐ, 77 ಎಎಸ್‍ಐ, 540 ಮುಖ್ಯಪೇದೆಗಳು, 75 ಮಹಿಳಾ ಸಿಬ್ಬಂದಿ, 114 ಸಾದಾ ಉಡುಪಿನ ಅಧಿಕಾರಿ ಮತ್ತು ಸಿಬ್ಬಂದಿ, ಕ್ಯಾಮರಾ ನಿರ್ವಹಣೆಗಾಗಿ 56 ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.

ಸಂಚಾರಿ ನಿರ್ವಹಣೆಗಾಗಿ 2 ಡಿಸಿಪಿ, 7 ಎಸಿಪಿ, 24 ಪೊಲೀಸ್ ಸಬ್ ಇನ್ಸ್ಪೆಪೆಕ್ಟರ್, 38 ಆರಕ್ಷಕ ನಿರೀಕ್ಷಕರು, 61 ಎಎಸ್‍ಐ, 263 ಮುಖ್ಯಪೇದೆ ಹಾಗೂ ಪೇದೆಗಳು ಸೇರಿದಂತೆ, 1,500 ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.

ಗೋವಾ ಪೊಲೀಸ್ ಭಾಗಿ: 9 ಕೆಎಸ್‍ಆರ್‍ಪಿ, 5 ಪಿಎಆರ್ ತುಕಡಿ, 3 ಅಗ್ನಿಶಾಮಕ ವಾಹನ, 2 ಆಂಬ್ಯುಲೆನ್ಸ್, 2 ಕ್ಷಿಪ್ರ ಕಾರ್ಯಾಚರಣೆ ಪಡೆ, 1 ಬಿ ಸ್ಮಾರ್ಟ್, 1 ಆರ್.ಐ.ವಿ, 1 ಗರುಡಾ ಫೋರ್ಸ್ ಅನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಮೈದಾನಕ್ಕೆ ಸಿಗರೇಟ್, ಬೆಂಕಿ ಪೊಟ್ಟಣ, ಕರಪತ್ರ, ಬಣ್ಣದ ದ್ರಾವಣ, ವಿಡಿಯೊ ಮತ್ತು ಸ್ಟಿಲ್ ಕ್ಯಾಮರಾ, ನೀರಿನ ಬಾಟಲ್, ಶಸ್ತ್ರಾಸ್ತ್ರಗಳು, ಕಪ್ಪು ಕರವಸ್ತ್ರ, ಹರಿತವಾದ ವಸ್ತುಗಳು, ಮದ್ಯದ ಬಾಟಲಿಗಳು, ಬಾವುಟ, ಪಟಾಕಿ ಸ್ಫೋಟಕಗಳನ್ನು ನಿಷೇಧಿಸಲಾಗಿದೆ 50 ಸಿಸಿ ಕ್ಯಾಮರಾಗಳು, ನಾಲ್ಕು ಪ್ಯಾಗೇಜ್ ಸ್ಕ್ಯಾನರ್ ಮತ್ತು ವ್ಯವಸ್ಥಿತ ಸಂಚಾರ ನಿಯಂತ್ರಣ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ ಎಂದು ಪೊಲೀಸ್ ಆಯುಕ್ತ ಸುನಿಲ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪಥ ಸಂಚಲನದಲ್ಲಿ ಗೋವಾ ಪೊಲೀಸ್, ಸ್ಕೌಟ್ಸ್, ಗೈಡ್ಸ್, ಎನ್.ಸಿ.ಸಿ. ಸೇವಾದಳ, ವಿವಿಧ ಶಾಲೆ ಮಕ್ಕಳನ್ನೊಳಗೊಂಡಂತೆ, ಬ್ಯಾಂಡ್‍ನ 34 ತುಕಡಿಗಳಲ್ಲಿ 1,130 ಜನ ಭಾಗವಹಿಸಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ 2 ಸಾವಿರ ಮಕ್ಕಳು ಪಾಲ್ಗೊಳ್ಳಲಿದ್ದಾರೆ. ನಂತರ ಸಾಂಸ್ಕೃತಿಕ ಕಾರ್ಯಕ್ರಮದ ವಿಜೇತರಿಗೆ ಮುಖ್ಯಮಂತ್ರಿಗಳು ಬಹುಮಾನ ವಿತರಿಸಲಿದ್ದಾರೆ.

ನಾಡಗೀತೆ, ರೈತಗೀತೆ, ಯೋಗ, ದೇಶಭಕ್ತ ಮೈಲಾರ ಮಹದೇವ, ಜೈಹಿಂದ್ ಜೈಭಾರತ್, ಜಿಮ್ನ್ಯಾಸ್ಟಿಕ್, 39 ಸದಸ್ಯರಿಂದ ಮೋಟಾರ್ ಸೈಕಲ್ ಪ್ರದರ್ಶನ ನಡೆಯಲಿದೆ.

ಆಸನಗಳ ವ್ಯವಸ್ಥೆ: ಜಿ 2 ಪ್ರವೇಶ ದ್ವಾರದಲ್ಲಿ ಅತಿ ಗಣ್ಯ ವ್ಯಕ್ತಿಗಳಿಗಾಗಿ 1,200 ಆಸನಗಳು, ಜಿ 1 ಪ್ರವೇಶ ದ್ವಾರದಲ್ಲಿ ಗಣ್ಯ ವ್ಯಕ್ತಿಗಳು, ಸ್ವಾತಂತ್ರ್ಯ ಹೋರಾಟಗಾರರು, ರಕ್ಷಣಾ ಇಲಾಖೆಯ ಅಧಿಕಾರಿಗಳು, ಮಾಧ್ಯಮದವರಿಗಾಗಿ 750 ಆಸನಗಳನ್ನು ವ್ಯವಸ್ಥೆ ಮಾಡಲಾಗಿದೆ. ಜಿ 3 ಪ್ರವೇಶ ದ್ವಾರದಲ್ಲಿ ಎಲ್ಲಾ ಇಲಾಖೆಯ ಅಧಿಕಾರಿಗಳು, ನಿವೃತ್ತ ಸೇನಾಧಿಕಾರಿಗಳು, ಬಿಎಸ್‍ಎಫ್ ಅಧಿಕಾರಿಗಳಿಗಾಗಿ 2,500 ಆಸನಗಳು, ಜಿ 4 ಪ್ರವೇಶ ದ್ವಾರದಲ್ಲಿ ಸಾರ್ವಜನಿಕರಿಗಾಗಿ 7 ಸಾವಿರ ಆಸನಗಳನ್ನು ಕಾಯ್ದಿರಿಸಲಾಗಿದೆ. ಹೆಚ್ಚು ಸಂಖ್ಯೆಯ ಸಾರ್ವಜನಿಕರು ಕಾರ್ಯಕ್ರಮ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ.

ಸ್ವಾತಂತ್ರ್ಯೋತ್ಸವದ ಅಂಗವಾಗಿ ಆಕಸ್ಮಿಕ ವಿಪತ್ತು ಸಂಭವಿಸಿದರೆ, ತಕ್ಷಣ ಪ್ರತಿಕ್ರಿಯಿಸಲು ಅಗತ್ಯ ಸಂಖ್ಯೆಯ ಆಂಬ್ಯುಲೆನ್ಸ್‍ಗಳನ್ನು , ವೈದ್ಯಕೀಯ ಹಾಗೂ ವೈದ್ಯಕೀಯೇತರ ಸಿಬ್ಬಂದಿಯನ್ನು ವ್ಯವಸ್ಥೆಗೊಳಿಸಲಾಗಿದೆ. ಇನ್ನುಳಿದಂತೆ ಚಿಕಿತ್ಸೆಗಾಗಿ ನಗರದ ಹಲವು ಆಸ್ಪತ್ರೆಗಳಲ್ಲಿ ಸಾಕಷ್ಟು ಸಂಖ್ಯೆಯ ಹಾಸಿಗೆಗಳನ್ನು ಕಾಯ್ದಿರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಬಿ.ಎಂ.ವಿಜಯ್ ಶಂಕರ್ ತಿಳಿಸಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ