ಮಾಣಿಕ್ ಷಾ ಪೆರೇಡ್ ಮೈದಾನ ಸುತ್ತಮುತ್ತ ಬಿಗಿ ಭದ್ರತೆ

13-08-2018
ಬೆಂಗಳೂರು: ಮಾಣಿಕ್ ಷಾ ಪೆರೇಡ್ ಮೈದಾನದಲ್ಲಿ ಬುಧವಾರ ನಡೆಯಲಿರುವ ಸ್ವಾತಂತ್ರ್ಯ ದಿನಾಚರಣೆಗೆ ನಗರ ಪೊಲೀಸರು ಬಿಗಿ ಬಂದೋಬಸ್ತ್ ವ್ಯವಸ್ಥೆ ಕೈಗೊಂಡಿರುವ ಜೊತೆಗೆ ಮೈದಾನದ ಸುತ್ತಮುತ್ತಲಿನ ಪ್ರದೇಶಗಳ ರಸ್ತೆಗಳಲ್ಲಿ ವಾಹನ ನಿಲುಗಡೆ ನಿಷೇಧಿಸಿ ಸಂಚಾರ ವ್ಯವಸ್ಥೆಯನ್ನು ಬದಲಾವಣೆ ಮಾಡಿದ್ದಾರೆ.
ಬುಧವಾರ ಬೆಳಿಗ್ಗೆ 8.30 ರಿಂದ 10.30ರವರೆಗೆ ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದ್ದು ಕಾಮರಾಜ್ ರಸ್ತೆ ಮತ್ತು ಕಾವೇರಿ ಆರ್ಟ್ಸ್ ಜಂಕ್ಷನ್ನಿಂದ ಕಬ್ಬನ್ ರಸ್ತೆವರೆಗೆ, ಸೆಂಟ್ರಲ್ ಸ್ಟ್ರೀಟ್, ಅನಿಲ್ ಕುಂಬ್ಳೆ ವೃತ್ತದಿಂದ ಶಿವಾಜಿನಗರ ಬಸ್ ನಿಲ್ದಾಣದವರೆಗೆ, ಕಬ್ಬನ್ ರಸ್ತೆ ಸಿಟಿಒ ವೃತ್ತದಿಂದ ಕೆ.ಆರ್.ರಸ್ತೆ ಕಬ್ಬನ್ ರಸ್ತೆ ಜಂಕ್ಷನ್ವರೆಗೆ, ಎಂ.ಜಿ. ರಸ್ತೆ ಅನಿಲ್ ಕುಂಬ್ಳೆ ವೃತ್ತದಿಂದ ಕ್ವೀನ್ಸ್ ವೃತ್ತದವರೆಗೆ ವಾಹನ ನಿಲುಗಡೆ ನಿಷೇಧಿಸಲಾಗಿದೆ.
ಇನ್ಫೆಂಟ್ರಿ ರಸ್ತೆಯಿಂದ ಮಣಿಪಾಲ್ ಸೆಂಟರ್ ಕಡೆಗೆ ಸಂಚರಿಸುವ ವಾಹನಗಳು ಸಫೀನಾ ಪ್ಲಾಜಾ ಬಳಿ ಎಡತಿರುವು ಪಡೆದು ಮೈನ್ ಗಾರ್ಡ್ ರಸ್ತೆ ಆಲಿಸ್ ಸರ್ಕಲ್, ಡಿಸ್ಪೆನ್ಸರಿ ರಸ್ತೆ ಮೂಲಕ ಕಾಮರಾಜ್ ರಸ್ತೆ, ಡಿಕಸ್ಸನ್ ರಸ್ತೆ ಜಂಕ್ಷನ್ ಬಳಿ ಬಲತಿರುವು ಪಡೆದು ಕಾಮರಾಜ್ ರಸ್ತೆ ಜಂಕ್ಷನ್ನಲ್ಲಿ ಎಡತಿರುವು ಪಡೆದು ಮಣಿಪಾಲ್ ಸೆಂಟರ್ ಕಡೆಗೆ ಸಾಗಬಹುದಾಗಿದೆ.
ಕಬ್ಬನ್ ರಸ್ತೆಯಲ್ಲಿ ಮಣಿಪಾಲ್ ಸೆಂಟರ್ ಜಂಕ್ಷನ್ನಿಂದ ಬಿ.ಆರ್.ಬಿ. ಜಂಕ್ಷನ್ ಕಡೆಗೆ ಬರುವ ವಾಹನಗಳು, ಕಾಮರಾಜ್ ರಸ್ತೆ ಮತ್ತು ಕಬ್ಬನ್ ರಸ್ತೆ ಜಂಕ್ಷನ್ನಲ್ಲಿ ಎಡ ತಿರುವು ಪಡೆದು ಕಾವೇರಿ ಆರ್ಟ್ಸ್ ಅಂಡ್ ಕ್ರಾಫ್ಟ್ ಜಂಕ್ಷನ್ನಲ್ಲಿ ಬಲತಿರುವು ಪಡೆದು, ಎಂ.ಜಿ. ರಸ್ತೆ ಮೂಲಕ ಅನಿಲ್ ಕುಂಬ್ಳೆ ವೃತ್ತದ ಮೂಲಕ ಮುಂದೆ ಸಾಗಬಹುದಾಗಿದೆ.
ಅನಿಲ್ ಕುಂಬ್ಳೆ ವೃತ್ತದಿಂದ ಕಬ್ಬನ್ ರಸ್ತೆ ಕಡೆಗೆ ಬರುವ ವಾಹನಗಳು ನೇರವಾಗಿ ಸೆಂಟ್ರಲ್ ರಸ್ತೆಯಲ್ಲಿ ಸಾಗಿ ಬಲತಿರುವು ಪಡೆದು ಸಫೀನಾ ಪ್ಲಾಜಾ ಬಳಿ ಎಡತಿರುವು ಪಡೆದು ಡಿಕನ್ಸನ್ ರಸ್ತೆ ಜಂಕ್ಷನ್ನಲ್ಲಿ ಬಲತಿರುವು ಪಡೆದು ಕಬ್ಬನ್ ರಸ್ತೆ ಮೂಲಕ ಮಣಿಪಾಲ್ ಸೆಂಟರ್ಗೆ ಸಾಗಬಹುದಾಗಿದೆ.
ಪ್ರವೇಶ ಯಾರಿಗೆ: ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಹಳದಿ ಪಾಸ್ ಹೊಂದಿರುವವರು ಕಬ್ಬನ್ ರಸ್ತೆಯಲ್ಲಿ ಸಂಚರಿಸಿ, ಮಾಣಿಕ್ ಷಾ ಪೆರೇಡ್ ಮೈದಾನಕ್ಕೆ ಪ್ರವೇಶ ದ್ವಾರ 1ರ ಮೂಲಕ ಪ್ರವೇಶಿಸಬೇಕು ಹಾಗೂ ಮೈದಾನದ ಪಶ್ಚಿಮ ಭಾಗದಲ್ಲಿ ವಾಹನ ನಿಲುಗಡೆ ಮಾಡಬೇಕು.
ಬಿಳಿ ಕಾರ್ ಪಾಸ್ಗಳನ್ನು ಹೊಂದಿರುವ ಗಣ್ಯರು, ಸಚಿವರು, ಸರ್ಕಾರದ ಕಾರ್ಯದರ್ಶಿಗಳು, ರಕ್ಷಣಾ ಅಧಿಕಾರಿಗಳು, ಹಿರಿಯ ಪೊಲೀಸ್ ಅಧಿಕಾರಿಗಳು, ಕಬ್ಬನ್ ರಸ್ತೆಯಲ್ಲಿ ಸಂಚರಿಸಿ ಮೈದಾನದ ಪ್ರವೇಶ ದ್ವಾರ 2ರ ಮೂಲಕ ಒಳಪ್ರವೇಶಿಸಬೇಕು. ಪಶ್ಚಿಮ ಭಾಗದ ನಿಲುಗಡೆ ಪ್ರದೇಶದಲ್ಲಿ ವಾಹನ ನಿಲುಗಡೆ ಮಾಡಬೇಕು. ಪಿಂಕ್ ಪಾಸ್ಗಳನ್ನು ಹೊಂದಿರುವವರು ತಮ್ಮ ವಾಹನಗಳನ್ನು ಮೈನ್ ಗಾರ್ಡ್ ಕ್ರಾಸ್ ರಸ್ತೆ, ಸಫೀನಾ ಪ್ಲಾಜಾ ಮುಂಭಾಗ, ಕಾಮರಾಜ ರಸ್ತೆ ಆರ್.ವಿ.ಪಬ್ಲಿಕ್ ಶಾಲೆ ಮುಂಭಾಗ ಮತ್ತು ಆರ್.ಎಸ್.ಎಸ್. ಗೇಟ್ ಮುಂಭಾಗ ವಾಹನಗಳನ್ನು ನಿಲುಗಡೆ ಮಾಡಿ ಪ್ರವೇಶ ದ್ವಾರ 3ರ ಮೂಲಕ ಪ್ರವೇಶಿಸಬಹುದು.
ಹಸಿರು ಬಣ್ಣದ ಪಾಸ್ ಹೊಂದಿರುವವರು ಶಿವಾಜಿ ನಗರ ಬಸ್ ನಿಲ್ದಾಣದ 1ನೇ ಮಹಡಿಯಲ್ಲಿ ವಾಹನಗಳನ್ನು ನಿಲುಗಡೆ ಮಾಡಿ ಪ್ರವೇಶ ದ್ವಾರ 4 ಮತ್ತು 5ರ ಮೂಲಕ ಕಾಲ್ನಡಿಗೆಯಲ್ಲಿ ಒಳಪ್ರವೇಶಿಸಬೇಕು.
ವಾಹನ ನಿಲುಗಡೆ ಎಲ್ಲಿ: ಮಾಧ್ಯಮದವರ ವಾಹನಗಳು, ಡಿಸಿಪಿ ಮತ್ತು ಮೇಲ್ಪಟ್ಟ ಅಧಿಕಾರಿಗಳು, ಇತರೆ ಇಲಾಖೆಗಳ ಮೇಲಧಿಕಾರಿಗಳು, ಪ್ರವೇಶ ದ್ವಾರ 3ರ ಮೂಲಕ ಒಳಪ್ರವೇಶಿಸಿ ಪೂರ್ವ ಭಾಗದಲ್ಲಿ ವಾಹನ ನಿಲುಗಡೆ ಮಾಡಬೇಕು. ಆಂಬುಲೆನ್ಸ್, ಅಗ್ನಿಶಾಮಕ, ನೀರಿನ ಟ್ಯಾಂಕರ್, ಕೆ.ಎಸ್.ಆರ್.ಪಿ, ಸಿ.ಆರ್.ಟಿ, ಬಿಬಿಎಂಪಿ, ಇತರ ವಾಹನಗಳು, ಪ್ರವೇಶ ದ್ವಾರ 1ರ ಮೂಲಕ ಪ್ರವೇಶಿಸಿ ದಕ್ಷಿಣದ ಕಡೆಗೆ ವಾಹನ ನಿಲುಗಡೆ ಮಾಡಬಹುದಾಗಿದೆ.
ದ್ವಿಚಕ್ರ ವಾಹನ ಸವಾರರು, ಕಾಮರಾಜ್ ರಸ್ತೆ, ಆರ್.ವಿ. ಪಬ್ಲಿಕ್ ಶಾಲೆ, ಸಫೀನಾ ಪ್ಲಾಜಾ, ಮೈನ್ ಗಾರ್ಡ್ ಕ್ರಾಸ್ನಲ್ಲಿ ವಾಹನ ನಿಲುಗಡೆ ಮಾಡಿ ಪ್ರವೇಶ ದ್ವಾರ 4 ಮತ್ತು 5ರ ಮೂಲಕ ಮೈದಾನದ ಒಳಪ್ರವೇಶ ಮಾಡಬಹುದಾಗಿದೆ. ಅನಿಲ್ ಕುಂಬ್ಳೆ ವೃತ್ತದಿಂದ ಮೆಟ್ರೋವರೆಗೆ ಕಾರ್ಯಕ್ರಮದಲ್ಲಿ ಭಾಗವಹಿಸುವ ಶಾಲಾ ಮಕ್ಕಳನ್ನು ಕರೆತರುವ ಬಿಎಂಟಿಸಿ ಬಸ್ಗಳ ನಿಲುಗಡೆ ಅವಕಾಶ ನೀಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ಅವರು ತಿಳಿಸಿದ್ದಾರೆ.
ಒಂದು ಕಮೆಂಟನ್ನು ಹಾಕಿ