ಕಾಂಗ್ರೆಸ್ ಇಲ್ಲದೇ ದೇಶಕ್ಕೆ ಭವಿಷ್ಯ ಇಲ್ಲ: ದಿನೇಶ್ ಗುಂಡೂರಾವ್

10-08-2018
ಬೆಂಗಳೂರು: ಕಾಂಗ್ರೆಸ್ ಪಕ್ಷ ಇಲ್ಲದಿದ್ದರೆ ದೇಶಕ್ಕೆ ಭವಿಷ್ಯವಿಲ್ಲ, ದೇಶವನ್ನು ಒಟ್ಟಿಗೆ ಹಿಡಿದು ಇಟ್ಟುಕೊಂಡಿರುವುದೇ ಕಾಂಗ್ರೆಸ್ ಪಕ್ಷ ಹಾಗಾಗಿ ಕಾಂಗ್ರೆಸ್ ಇಲ್ಲದೇ ಇದ್ದರೆ ಅಖಂಡ ಭಾರತದ ಕಲ್ಪನೆಯೇ ದುರ್ಬಲವಾಗಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ನಿನ್ನೆ ಟೌನ್ ಹಾಲ್ ನಲ್ಲಿ ‘ಕ್ವಿಟ್ ಇಂಡಿಯಾ ದಿನಾಚರಣೆ’ಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಾಂಗ್ರೆಸ್ ಬುನಾದಿ ಇಲ್ಲದೇ ಇದ್ದರೆ ಸಂವಿಧಾನ ಬರೆಯಲು ಸಾಧ್ಯವೇ ಇರಲಿಲ್ಲ, ಸ್ವಾತಂತ್ರ್ಯಕ್ಕೂ ಮುನ್ನವೇ ಕಾಂಗ್ರೆಸ್ ಸಂವಿಧಾನದಲ್ಲಿನ ಹಲವು ಅಂಶಗಳನ್ನು ಅಳವಡಿಸಿಕೊಂಡಿತ್ತು. 'ಕ್ವಿಟ್ ಇಂಡಿಯಾ' ಕರೆಯನ್ನು ಜವಾಹರಲಾಲ್ ನೆಹರು ಕೊಟ್ಟರೆ 'ಡು ಆರ್ ಡೈ' ಕರೆಯನ್ನು ಮಹಾತ್ಮ ಗಾಂಧಿ ನೀಡಿದ್ದರು.ಈ ಘೋಷಣೆಗಳೇ ಸ್ವಾತಂತ್ರ್ಯ ಪಡೆಯಲು ಪ್ರಮುಖ ಕಾರಣ ಎಂದರು.
ದೇಶದಲ್ಲಿ ದ್ವೇಷ, ಅಸಹಿಷ್ಣುತೆ ಹೆಚ್ಚುತ್ತಿದ್ದು, ಒಡಕು ಮೂಡಿಸುವ ಕೆಲಸ ಮಾಡಲಾಗುತ್ತಿದ, ಹಾಗಾಗಿ ದ್ವೇಷದ, ಅಸಹಿಷ್ಣುತೆ ಸಿದ್ಧಾಂತದ ವಿರುದ್ಧ ಚಳವಳಿ ಮಾಡಬೇಕಿದೆ. ಪ್ರತ್ಯೇಕತೆ ಕೂಗು ಹೆಚ್ಚಾದರೆ ಪರಿಣಾಮ ಏನಾಗಲಿದೆ ಎನ್ನುವುದು ಗೊತ್ತಿಲ್ಲ, ಪಾಕಿಸ್ತಾನ ಇಸ್ಲಾಮಿಕ್ ದೇಶ ಎಂದು ರಚನೆಯಾಯಿತು, ಅದು ನಂತರ ವಿಭಜನೆಯಾಯಿತು ಆದರೆ ನಮ್ಮದು ಸಿದ್ಧಾಂತ ಆಧಾರದಲ್ಲಿ ರಚನೆಯಾಯಿತು. ಹಾಗಾಗಿ ದೇಶ ವಿಭಜನೆಯಾಗದೇ ಉಳಿಯಿತು. ಮಹಾತ್ಮ ಗಾಂಧಿ ಹಾಗು ಕಾಂಗ್ರೆಸ್ ಹೋರಾಟ ಇರದಿದ್ದರೆ ರಾಜ್ಯಗಳೇ ಇಂದು ಪ್ರತ್ಯೇಕ ದೇಶಗಳಾಗುತ್ತಿದ್ದವು ಎಂದರು.
ದೇಶದಲ್ಲಿ ಸಹಿಷ್ಣುತೆ ಇರಬೇಕು, ಬಿಜೆಪಿಯವರು ಕಾಂಗ್ರೆಸ್ ಮುಕ್ತ ಭಾರತ ಎನ್ನುತ್ತಾರೆ ಇಂತಹ ಸಿದ್ಧಾಂತ ಇರಬೇಕಾ? ಒಂದೇ ಪಕ್ಷ ಇರಬೇಕು ಎನ್ನುವ ಸಿದ್ದಾಂತ ಬೇಕಾ?ಇದು ಮೂಲಭೂತವಾದಿಗಳ ಸಿದ್ಧಾಂತ. ಸರ್ವಾಧಿಕಾರಿ ರೀತಿಯ ಪರಿಸ್ಥಿತಿ ನಿರ್ಮಾಣವಾಗಿದೆ, ಬಿಜಿಪಿ ಮುಕ್ತ ಎಂದು ಕಾಂಗ್ರೆಸ್ ಎಂದೂ ಹೇಳಿಲ್ಲ, ಹೇಳುವುದೂ ಇಲ್ಲ, ಎಲ್ಲ ಪಕ್ಷಗಳು, ಸಿದ್ಧಾಂತಗಳೂ ಇರಬೇಕು ಎನ್ನುವುದು ನಮ್ಮ ನಿಲುವು ಎಂದು ಬಿಜೆಪಿ ನೀತಿಯನ್ನು ಟೀಕಿಸಿದರು.
ಒಂದು ಕಮೆಂಟನ್ನು ಹಾಕಿ