ಆಗಸ್ಟ್ 13ರಂದು ರಾಜ್ಯವ್ಯಾಪಿ ಎಸ್ಎಫ್ಐ ಪ್ರತಿಭಟನೆ

Save Government-Schools Strengthen: SFI Statewide Protest

09-08-2018

ಬೆಂಗಳೂರು: ಕಡಿಮೆ ದಾಖಲಾತಿಯ ನೆಪವೊಡ್ಡಿ 14,451 ಸರ್ಕಾರಿ ಕನ್ನಡ ಶಾಲೆಗಳ ವಿಲೀನದ ಹೆಸರಲ್ಲಿ ಮುಚ್ಚಲು ಮುಂದಾಗಿರುವ ಸರಕಾರದ ಕ್ರಮ ಶಿಕ್ಷಣದ ಖಾಸಗೀಕರಣಕ್ಕೆ ರತ್ನಗಂಬಳಿ ಹಾಸಿದಂತಾಗುತ್ತದೆ. ಮತ್ತು ನಾಡ ದ್ರೋಹದ ಕೆಲಸವಾಗುತ್ತದೆ. ಸರಕಾರಿ ಶಾಲೆಗಳನ್ನು ಮುಚ್ಚಬಾರದೆಂದು ಹಾಗೂ ಅವುಗಳನ್ನು ಬಲಪಡಿಸಬೇಕೆಂದು ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ಕರ್ನಾಟಕ ರಾಜ್ಯ ಸಮಿತಿ ಆಗ್ರಹಿಸಿದೆ.

2011ರಲ್ಲಿ ಮುಖ್ಯ ಮಂತ್ರಿಯಾಗಿದ್ದ ಸದಾನಂದ ಗೌಡರು 3174 ಸರಕಾರಿ ಶಾಲೆಗಳನ್ನು ಮುಚ್ಚಲು ಮುಂದಾಗಿದ್ದರು. 2012ರಲ್ಲಿ ಕಡಿಮೆ ದಾಖಲಾತಿ ಇರುವ 12,000ಕ್ಕೂ ಹೆಚ್ಚು ಶಾಲೆಗಳನ್ನು ಮುಚ್ಚುವಂತೆ ಶಿಫಾರಸ್ಸು ನೀಡಿದ್ದ ಪ್ರೋ.ಗೋವಿಂದ ಅವರ ವರದಿಯನ್ನು ಮುಖ್ಯ ಮಂತ್ರಿಯಾಗಿದ್ದ ಜಗದೀಶ್ ಶೆಟ್ಟರ್ ಜಾರಿ ಮಾಡಲು ಮುಂದಾಗಿದ್ದರು. 2015ರಲ್ಲಿ ಮುಖ್ಯ ಮಂತ್ರಿಯಾಗಿದ್ದ ಸಿದ್ದರಾಮಯ್ಯನವರು 2000 ಸರಕಾರಿ ಶಾಲೆಗಳನ್ನು ಮುಚ್ಚಲು ಮುಂದಾಗಿದ್ದರು. ಎಸ್ಎಫ್ಐ ಸಂಘಟನೆ ನಡೆಸಿದ ವ್ಯಾಪಕ ಮತ್ತು ಸಂಘರ್ಷಾತ್ಮಕ ಪ್ರತಿಭಟನೆಯಿಂದ ಸರಕಾರಗಳು ಶಾಲೆ ಮುಚ್ಚುವ ನಿರ್ಧಾರದಿಂದ ಹಿಂದೆ ಸರಿದವು.

ಈಗ ಮುಖ್ಯಮಂತ್ರಿ ಕುಮಾರಸ್ವಾಮಿಯವರು 14,451 ಶಾಲೆಗಳನ್ನು ಕಡಿಮೆ ದಾಖಲಾತಿಯ ನೆಪವೊಡ್ಡಿ ವಿಲೀನದ ಹೆಸರಲ್ಲಿ ಮುಚ್ಚಲು ಮುಂದಾಗಿರುವುದು ಶಿಕ್ಷಣ ವಿರೋಧಿ ಮತ್ತು ನಾಡ ದ್ರೋಹದ ಕೆಲಸವಾಗಿದೆ ಎಂದು ಎಸ್ಎಫ್ಐ ಆರೋಪಿಸುತ್ತಿದೆ.

ರಾಜ್ಯದಲ್ಲಿ ಸರಕಾರಿ ಶಾಲೆಗಳು ಮೂಲ ಸೌಲಭ್ಯಗಳಿಲ್ಲದೆ ನರಳುತ್ತಿವೆ‌. 2515 ಸರಕಾರಿ ಶಾಲೆಗಳಿಗೆ ಸ್ವಂತ ಕಟ್ಟಡವಿಲ್ಲ. 27,039 ಶಾಲೆಗಳು ಅತಿ ದುರಸ್ಥೆಯಲ್ಲಿವೆ. 8389 ಶಾಲೆಗಳಿಗೆ ಕುಡಿಯುವ ನೀರಿನ ಸೌಲಭ್ಯವಿಲ್ಲ, 13,000 ಶಾಲೆಗಳಿಗೆ ಶೌಚಾಲಯ ಇಲ್ಲ, 32,512 ಶಿಕ್ಷಕರ ಕೊರತೆ ಇದೆ. 44% ಶಾಲೆಗಳಿಗೆ ಕ್ರೀಡಾಂಗಣ ಇಲ್ಲ. 33% ಶಾಲೆಗಳಿಗೆ ಕರೆಂಟ್ ಮತ್ತು ಕಂಪೌಂಡ್ ಇಲ್ಲ. ಸೌಲಭ್ಯಗಳ ಕೊರತೆಯಿಂದಾಗಿ ಮಕ್ಕಳ ದಾಖಲಾತಿ ಸಂಖ್ಯೆ ಕುಸಿಯುತ್ತಿದೆ ಎಂದು ಸರಕಾರಕ್ಕೆ ಅರ್ಥವಾಗುತ್ತಿಲ್ಲ. ಸೌಲಭ್ಯಗಳನ್ನು ನೀಡುವ ಬದಲಾಗಿ ಶಾಲೆ ಮುಚ್ಚಲು ಮುಂದಾಗುವ ಮೂಲಕ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಹೆಚ್ಚೆಚ್ಚು ಬೆಳೆಸಲು ಸರಕಾರ ಹುನ್ನಾರ ನಡೆಸಿದಂತೆ ಕಾಣುತ್ತದೆ.

ಸರಕಾರಿ ಶಾಲೆಗಳನ್ನು ಮುಚ್ಚುವ ಬದಲಾಗಿ, ಅವುಗಳನ್ನು ಅಭಿವೃದ್ಧಿ ಪಡಿಸಬೇಕು, ಉಳಿಸಬೇಕು, ಮೂಲ ಸೌಕರ್ಯಗಳನ್ನು ನೀಡಬೇಕು ಎಂದು ಎಸ್ಎಫ್ಐ ಆಗಸ್ಟ್ 13ರಂದು ರಾಜ್ಯದ ಬಿಇಒ ಕಚೇರಿಗಳ ಮುಂದೆ ಹೋರಾಟ ನಡೆಸಿ, ಆಗಸ್ಟ್ 17ರಂದು ಬೆಂಗಳೂರಿನ ಸಾರ್ವಜನಿಕ ಶಿಕ್ಷಣ ಇಲಾಖೆಗೆ ಮುತ್ತಿಗೆ ಹಾಕಲಾಗುವುದು ಎಂದು ಎಸ್ಎಫ್ಐ ರಾಜ್ಯಾಧ್ಯಕ್ಷ ವಿ.ಅಂಬರೀಶ್, ರಾಜ್ಯ ಕಾರ್ಯದರ್ಶಿ ಗುರುರಾಜ್ ದೇಸಾಯಿ ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

SFI government school ದಾಖಲಾತಿ ವಿಲೀನ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ