ರಾಜ್ಯದಲ್ಲಿ ಮಳೆ ಕೊರತೆ: ಸಚಿವ ಶಿವಶಂಕರ ರೆಡ್ಡಿ

Lack of Rainfall in state: minister shivashankar reddy

08-08-2018

ಬೆಂಗಳೂರು: ರಾಜ್ಯದ ವಾಡಿಕೆ ಮಳೆ 1156 ಮಿ.ಮೀ.ಆದರೆ, ಈ ವರ್ಷದ ಆಗಸ್ಟ್ 6ರವರೆಗೆ 522 ಮಿ.ಮೀ ಮಳೆಯಾಗಿದೆ. ಅಂದರೆ, ಶೇಕಡ 3ರಷ್ಟು ಮಳೆ ಕೊರತೆಯಾಗಿದೆ ಎಂದು ಕೃಷಿ ಸಚಿವ ಶಿವಶಂಕರ ರೆಡ್ಡಿ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಕೃಷಿ ಸಚಿವ ಶಿವಶಂಕರ ರೆಡ್ಡಿ, ರಾಜ್ಯದಲ್ಲಿ ಜುಲೈ ತಿಂಗಳಿನಲ್ಲಿ ಶೇ.10 ರಷ್ಟು ಮಳೆ ಕೊರತೆಯಾಗಿದೆ. ರಾಯಚೂರು, ಕೊಪ್ಪಳ, ವಿಜಯಪುರ, ಚಿಕ್ಕಬಳ್ಳಾಪುರ, ಬಾಗಲಕೋಟೆ, ಚಿತ್ರದುರ್ಗ, ದಾವಣಗೆರೆ, ಗದಗ, ಬಳ್ಳಾರಿ,  ರಾಮನಗರ, ಬೆಂಗಳೂರು ನಗರ ಮತ್ತು ಗ್ರಾಮಾಂತರ, ಮಂಡ್ಯ, ಬೆಳಗಾವಿ, ಧಾರವಾಡ ಜಿಲ್ಲೆಗಳಲ್ಲಿ ಸಾಮಾನ್ಯ ಮಳೆಗಿಂತ ಕಡಿಮೆ ಮಳೆಯಾಗಿದೆ, ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ಹೆಚ್ಚಳವಾಗಿದೆ ಎಂದು ಹೇಳಿದರು.

ರಾಜ್ಯದಲ್ಲಿ ರಸಗೊಬ್ಬರ ಕೊರತೆ ಇಲ್ಲ. ರಸಗೊಬ್ವರ ಬೇಡಿಕೆ ಪೂರೈಸಿದ ಬಳಿಕ 5.32 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನಿದೆ ಎಂದು ಸಚಿವ ರೆಡ್ಡಿ ವಿವರಿಸಿದರು.

2018ರ ಮುಂಗಾರು ಹಂಗಾಮಿನಲ್ಲಿ ಕೆಲ ಜಿಲ್ಲೆಗಳಲ್ಲಿ ಮಳೆ ಕೊರತೆ ಹಿನ್ನೆಲೆಯಲ್ಲಿ, 2.16ಲಕ್ಷ ಹೆಕ್ಟೇರ್ ವಿಸ್ತೀರ್ಣದಲ್ಲಿ ಬೆಳೆದ ಬೆಳೆ ನಷ್ಟ ಆಗಿದೆ. ಕೊಪ್ಪಳ, ಬಳ್ಳಾರಿ ಜಿಲ್ಲೆಗಳಲ್ಲಿ ಜೋಳ, ಸಜ್ಜೆ, ಹತ್ತಿ, ಅಲಸಂದೆ ಬೆಳೆಗಳು ನಷ್ಟವಾಗಿವೆ. ಹೆಚ್ಚು ಮಳೆ ಬಿದ್ದ 8ಜಿಲ್ಲೆಗಳಲ್ಲಿ ಭತ್ತ, ಉದ್ದು, ಹೆಸರು, ಕಬ್ಬು, ನೆಲಗಡಲೆ, ಹತ್ತಿ ಬೆಳೆಗಳ ನಷ್ಟ ಆಗಿದೆ. 6309 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟ ಆಗಿದೆ ಎಂದರು.

ಸಿರಿಧಾನ್ಯಗಳನ್ನು ರಾಜ್ಯದಲ್ಲಿ ಯಥೇಚ್ಛವಾಗಿ ಬೆಳೆಯಲಾಗುತ್ತಿದೆ. ಹೀಗಾಗಿ, ಮುಂದಿನ ಜನವರಿಯಲ್ಲಿ ಸಿರಿಧಾನ್ಯ ಮೇಳ ನಡೆಸಲು ತೀರ್ಮಾನ ಮಾಡಲಾಗಿದೆ ಎಂದು ಕೃಷಿ ಸಚಿವ ಶಿವಶಂಕರ ರೆಡ್ಡಿ ತಿಳಿಸಿದರು. ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿ ಸಂತೆಗಳ ಹಾಗೆ ಮಾರುಕಟ್ಟೆಗಳ ಸ್ಥಾಪನೆ ಮಾಡಲಾಗುವುದು. ಗ್ರಾಮೀಣ ಕೃಷಿಕರಿಗೆ ಇದರಿಂದ ಅನುಕೂಲವಾಗಲಿದ. ಸಂತೆಗಳಿಗೆ ಮಾರುಕಟ್ಟೆ ರೂಪ ಕೊಟ್ಟು ಪುನಶ್ಚೇತನಗೊಳಿಸಲಾಗುವುದು ಎಂದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ