ಮತ್ತೊಬ್ಬ ಶಂಕಿತ ಉಗ್ರನ ಬಂಧನ!

suspected terrorist Arrested at bangalore cantonment

08-08-2018

ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆಯ ವೇಳೆ ವಿಧ್ವಂಸಕ ಕೃತ್ಯಗಳನ್ನು ನಡೆಸಲಿದ್ದಾರೆ ಎನ್ನುವ ಆತಂಕಕಾರಿ ಮಾಹಿತಿ ಕೇಂದ್ರ ಗುಪ್ತಚರ ಇಲಾಖೆ ನೀಡಿರುವ ಹಿನ್ನೆಲೆಯಲ್ಲಿ, ಕಾರ್ಯಾಚರಣೆ ತೀವ್ರಗೊಳಿಸಿರುವ ರಾಷ್ಟ್ರೀಯ ತನಿಖಾ ದಳ(ಎನ್‍ಐಎ)ದ ಅಧಿಕಾರಿಗಳು ನಗರದಲ್ಲಿ ಶಂಕಿತ ಉಗ್ರನನ್ನು ಬಂಧಿಸಿದ್ದಾರೆ.

ಕಳೆದ ಎರಡು ದಿನಗಳ ಹಿಂದೆಯಷ್ಟೇ ರಾಮನಗರದಲ್ಲಿ ಜೆಎಂಬಿ ಸಂಘಟನೆಯ ಸದಸ್ಯ ಮುನೀರ್ ಶೇಖ್ ಬಂಧಿಸಿ ವಿಚಾರಣೆಗೊಳಪಡಿಸಿದ್ದ ಅಧಿಕಾರಿಗಳು, ಶಿವಾಜಿನಗರದ ಕಂಟೋನ್ಮೆಂಟ್ ಬಳಿ ಮತ್ತೋರ್ವ ಶಂಕಿತ ಉಗ್ರನನ್ನು ಬಂಧಿಸಿದ್ದು ಆತಂಕ ಸೃಷ್ಠಿಯಾಗಿದೆ.

ಕಂಟೋನ್ಮೆಂಟ್ ರೈಲು ನಿಲ್ದಾಣದ ಬಳಿ ಖಚಿತ ಮಾಹಿತಿ ಮೇಳೆ ಕಾರ್ಯಾಚರಣೆ ನಡೆಸಿದಾಗ ಅಧಿಕಾರಿಗಳು ಆಟೊ ನಿಲ್ದಾಣದ ಬಳಿ ಬೇರೆಡೆ ಹೋಗಲು ಬರುತ್ತಿದ್ದ ಶಂಕಿತ ಉಗ್ರ ಅಸಾದ್‍ ಉಲ್ಲಾನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಶಂಕಿತ ಉಗ್ರನಾಗಿರುವುದು ಕಂಡುಬಂದಿದೆ. ಕೂಡಲೇ ಆತನನ್ನು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸಿದಾಗ ಪಶ್ಚಿಮ ಬಂಗಾಳ ಮೂಲದ ಜೆಎಂಬಿ ಸಂಘಟನೆ ನಾಯಕನಾಗಿದ್ದ ಮುನೀರ್‍ ನ ಬಲಗೈ ಬಂಟನಾಗಿ ಕೆಲಸ ಮಾಡುತ್ತಿದ್ದ ಎನ್ನುವುದನ್ನು ಬಾಯ್ಬಿಟ್ಟಿದ್ದಾನೆ.

ಡೈರಿಪತ್ತೆ: ಬಂಧಿತನಿಂದ ಮೂರು ಮೊಬೈಲ್, ವಿವಿಧ ಬ್ಯಾಂಕ್ ಖಾತೆಗಳಿಗೆ ಹಣ ಜಮೆ ಮಾಡಿರುವ ರಶೀದಿ, ಸುಧಾರಿತ ಬಾಂಬ್ ತಯಾರಿಸುವ ಕುರಿತಂತೆ ಬಂಗಾಳಿ ಭಾಷೆಯಲ್ಲಿ ಬರೆದಿರುವ ಡೈರಿಯನ್ನು ವಶಪಡಿಸಿಕೊಂಡಿರುವ ಎನ್‍ಐಎ ಅಧಿಕಾರಿಗಳು ತನಿಖೆಯನ್ನು ತೀವ್ರಗೊಳಿದ್ದಾರೆ.

ಬಂಗಾಳಿಯಲ್ಲಿ ಬರೆದಿರುವ ಡೈರಿಯಲ್ಲಿ ದೇಶದ ಹಲವೆಡೆ ಉಗ್ರ ಚಟುವಟಿಕೆಗಳನ್ನು ನಡೆಸುತ್ತಿರುವುದು ವಿಧ್ವಂಸಕ ಕೃತ್ಯಗಳನ್ನು ನಡೆಸಲು ಸಂಚು ರೂಪಿಸುತ್ತಿರುವುದು ಕಂಡುಬಂದಿದ್ದು ಆರೋಪಿಯನ್ನು ರಹಸ್ಯ ಸ್ಥಳದಲ್ಲಿ ತೀವ್ರ ವಿಚಾರಣೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ನಡುವೆ ರಾಮನಗರದಲ್ಲಿ ಬಂಧಿಸಿದ್ದ ಜೆಎಂಬಿ ಸಂಘಟನೆಯ ಸದಸ್ಯ ಮುನೀರ್‍ ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಮತ್ತೆ ವಶಕ್ಕೆ ತೆಗೆದುಕೊಂಡಿರುವ ಎನ್‍ಐಎ ಅಧಿಕಾರಿಗಳು ಆತನ ಬಳಿ ದೊರೆತ ಮೊಬೈಲ್‍ನಲ್ಲಿರುವ ಸಂಖ್ಯೆಗಳು ಉಗ್ರರ ಜೊತೆ ಹೊಂದಿರುವ ನಂಟಿನ ಕುರಿತು  ವಿಚಾರಣೆಗೊಳಪಡಿಸಿ ಮಾಹಿತಿ ಕಲೆಹಾಕತೊಡಗಿದ್ದಾರೆ.

ವಿಚಾರಣೆ ತೀವ್ರ: ಆರೋಪಿಯು ಕರ್ನಾಟಕದಲ್ಲಿ ಜೆಎಂಬಿ ಸಂಘಟನೆಯನ್ನು ಸಂಘಟಿಸಿ ಉಗ್ರಗಾಮಿ ಕೃತ್ಯಗಳನ್ನು ನಡೆಸಲು ಸಂಚು ರೂಪಿಸುತ್ತಿರುವುದನ್ನು ವಿಚಾರಣೆಯಲ್ಲಿ ಬಾಯ್ಬಿಟ್ಟಿದ್ದು, ಆತ ನೀಡಿರುವ ಮಾಹಿತಿ ಆಧರಿಸಿ ರಾಜ್ಯದಲ್ಲಿ ಅಡಗಿರುವ ಉಗ್ರರ ಪತ್ತೆಗೆ ಕಾರ್ಯಾಚರಣೆಯನ್ನು ಅಧಿಕಾರಿಗಳು ತೀವ್ರಗೊಳಿಸಿದ್ದಾರೆ. ಕಂಟೋನ್ಮೆಂಟ್ ಬಳಿ ಶಂಕಿತ ಉಗ್ರನನ್ನು ಬಂಧಿಸಿರುವ ಬಗ್ಗೆ ಯಾವುದೇ ಮಾಹಿತಿ ನೀಡಲು ನಗರ ಪೊಲೀಸ್ ಅಧಿಕಾರಿಗಳು ನಿರಾಕರಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Suspected terrorist Arrested ಬಂಗಾಳಿ ಉಗ್ರಗಾಮಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ