ಹಿರಿಯ ಕವಿ ಡಾ.ಸುಮತೀಂದ್ರ ನಾಡಿಗ ವಿಧಿವಶ

Noted writer Sumatheendra Nadig passes away

07-08-2018

ಬೆಂಗಳೂರು: ನವ್ಯ ಕವಿ, ಖ್ಯಾತ ವಿಮರ್ಶಕ ಹಾಗೂ ಕವಿ ಡಾ.ಸುಮತೀಂದ್ರ ನಾಡಿಗ ಅವರು ಇಂದು ವಿಧಿವಶರಾಗಿದ್ದಾರೆ. ಅವರಿಗೆ 83 ವರ್ಷ ವಯಸ್ಸಾಗಿತ್ತು. ಉಸಿರಾಟದ ತೊಂದರೆಯಿಂದ ನಗರದ ಬನ್ನೇರುಘಟ್ಟದ ಫೋರ್ಟಿಸ್ ಆಸ್ಪತ್ರೆಗೆ ದಾಖಲಾಗಿದ್ದ ಅವರು ನಿಧನರಾದರು. ಹೃದಯ, ಕಿಡ್ನಿ ಹಾಗೂ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಮೂರು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಇಂದು ಮೃತಪಟ್ಟರು.

ನ್ಯಾಷನಲ್ ಬುಕ್ ಟ್ರಸ್ಟ್ ಆಫ್ ಇಂಡಿಯಾದ ಮಾಜಿ ಅಧ್ಯಕ್ಷರು ಆಗಿರುವ ನಾಡಿಗ ಅವರು ಪತ್ನಿ ಮಾಲತಿ, ಇಬ್ಬರು ಪುತ್ರಿಯರಾದ ಸ್ವಪ್ನ, ರಶ್ಮಿ ಮತ್ತು ಪುತ್ರ ಅಪೂರ್ವ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಕನ್ನಡದ ಪ್ರಮುಖ ಕವಿ ಹಾಗೂ ಸಾಹಿತಿ ಆಗಿದ್ದ ಸುಮತೀಂದ್ರ ನಾಡಿಗ ಅವರು 1935 ಮೇ 4 ರಂದು ಚಿಕ್ಕಮಗಳೂರು ಜಿಲ್ಲೆಯ ಕಳಸದಲ್ಲಿ ಜನಿಸಿದ್ದರು. ತಂದೆ ರಾಘವೇಂದ್ರ, ತಾಯಿ ಸುಬ್ಬಮ್ಮ. ವೃತ್ತಿಯಲ್ಲಿ ಪ್ರಾಧ್ಯಾಪಕರಾಗಿದ್ದ ಇವರು ಪ್ರವೃತ್ತಿಯಲ್ಲಿ ಕವಿ, ವಿಮರ್ಶಕ, ಕಾದಂಬರಿಕಾರ, ಲೇಖಕರಾಗಿ ಅಪಾರ ಸೇವೆ ಸಲ್ಲಿಸಿದ್ದಾರೆ. ಮೈಸೂರು ವಿಶ್ವವಿದ್ಯಾಲಯ ಮತ್ತು ಅಮೆರಿಕದ ಫಿಲಿಡೆಲ್ಫಿಯಾ ವಿಶ್ವವಿದ್ಯಾಲಯಗಳಿಂದ ಇಂಗ್ಲಿಷ್‍ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು.

1985ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ.ಪದವಿ ಪಡೆದಿದ್ದರು. ಗೋವಾದಲ್ಲಿ ಕೆಲಕಾಲ ಅಧ್ಯಾಪಕರಾಗಿ, ಸಂಪಾದಕರಾಗಿ, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದ ನಾಡಿಗರು, ಡಾ.ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರ ಕವನಗಳ ಕುರಿತು ಮಂಡಿಸಿದ ಪ್ರೌಢ ಪ್ರಬಂಧಕ್ಕೆ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಾಗಿತ್ತು.

ಅಧ್ಯಾಪಕನ ವೃತ್ತಿಯಲ್ಲಿದ್ದುಕೊಂಡೇ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದ ಸುಮತೀಂದ್ರ ನಾಡಿಗ ಅವರು ಕಾವ್ಯ, ಸಣ್ಣಕತೆ, ವಿಮರ್ಶೆ, ಅನುವಾದ ಮುಂತಾದ ಪ್ರಕಾರಗಳಲ್ಲಿಯೂ ಅಪಾರ ಸೇವೆ ಸಲ್ಲಿಸಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲ ಸಾಹಿತ್ಯ ಪುರಸ್ಕಾರ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ದಿನಕರ ಪ್ರತಿಷ್ಠಾನ ಪ್ರಶಸ್ತಿ, ವಿ.ಎಂ.ಇನಾಂದಾರ್ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ, ಪುರಸ್ಕಾರಗಳಿಗೆ ಸುಮತೀಂದ್ರ ನಾಡಿಗ ಭಾಜನರಾಗಿದ್ದರು.

ಸುಮತೀಂದ್ರ ನಾಡಿಗ್ ನಿಧನಕ್ಕೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಕನ್ನಡ ಸಂಸ್ಕೃತಿ ಸಚಿವೆ ಉಮಾಶ್ರೀ, ವಿಧಾನಸಭೆ ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಮತ್ತಿತರರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ