‘ರಾಜ್ಯದ 13 ಜಿಲ್ಲೆಗಳಲ್ಲಿ ಮಳೆ ಕೊರತೆ’07-08-2018

ಬೆಂಗಳೂರು: ರಾಜ್ಯದ ಹಲವೆಡೆ ಉತ್ತಮ ಮಳೆಯಾಗಿದ್ದು, 13 ಜಿಲ್ಲೆಗಳಲ್ಲಿ ಮಳೆಯ ಕೊರತೆ ಕಾಣಿಸಿಕೊಂಡು ಬರ ಪರಿಸ್ಥಿತಿ ಉಂಟಾಗುವ ಸಂಭವ ಎದುರಾಗಿದೆ.

ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಮಳೆ, ಬೆಳೆ ಕುರಿತು ಪ್ರಗತಿ ಪರಿಶೀಲನೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 13 ಜಿಲ್ಲೆಗಳ ಪೈಕಿ 10 ಜಿಲ್ಲೆಗಳು ಉತ್ತರ ಒಳನಾಡಿಗೆ ಸೇರುತ್ತವೆ. ಕಲಬುರಗಿ, ಕೊಪ್ಪಳ, ಬಳ್ಳಾರಿ, ವಿಜಯಪುರ, ಬಾಗಲಕೋಟೆ, ಚಿಕ್ಕಬಳ್ಳಾಪುರ, ಕೋಲಾರ, ಯಾದಗಿರಿ, ಬೆಂಗಳೂರು ನಗರ, ದಾವಣಗೆರೆ, ರಾಯಚೂರು, ಗದಗ ಜಿಲ್ಲೆಗಳಲ್ಲಿ ಇನ್ನು ಮೂರು ತಿಂಗಳಲ್ಲಿ ಮಳೆ ಆಗದಿದ್ದರೆ ಪರಿಸ್ಥಿತಿ ಗಂಭೀರವಾಗಲಿದೆ ಎಂದರು.

ಮಳೆ ಕೊರತೆ ಇರುವ ಪ್ರದೇಶಗಳಲ್ಲಿ ಅಗತ್ಯ ಕುಡಿಯುವ ನೀರಿನ ಪೂರೈಕೆ, ಮೇವಿನ ಸಂಗ್ರಹ ಸೇರಿದಂತೆ ಸಮರೋಪಾದಿ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆ. ಆದ್ದರಿಂದ ಸಂಬಂಧಿಸಿದ ಜಿಲ್ಲಾಧಿಕಾರಿಗಳಿಗೆ ಸೂಕ್ತ ಕ್ರಮಕ್ಕೆ ಸೂಚಿಸಲಾಗಿದೆ ಎಂದು ಹೇಳಿದರು.

ನೈರುತ್ಯ ಮುಂಗಾರಿನಲ್ಲಿ ಶೇ.3ರಷ್ಟು ಮಳೆಯ ಕೊರತೆ ಕಾಣಿಸಿಕೊಂಡಿದ್ದು, ಈ ಹಿನ್ನೆಲೆಯಲ್ಲಿ  ಪರ್ಯಾಯ ಬೆಳೆ ಯೋಜನೆಯನ್ನು ಸರ್ಕಾರ ಸಿದ್ಧ ಮಾಡಿದೆ. ಕಡಿಮೆ ನೀರು ಬೇಡುವ ರಾಗಿ ಇತ್ಯಾದಿ ಬೆಳೆ ಯೋಜನೆಯನ್ನು ಸರ್ಕಾರ ಸಿದ್ಧಗೊಳಿಸಿದೆ. ಅಗತ್ಯ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಸಂಗ್ರಹ ಮಾಡಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಮಳೆ ಬಾರದಿದ್ದರೆ ಅಂದಾಜು 8 ಲಕ್ಷ ಹೆಕ್ಟೇರ್ ಪ್ರದೇಶದ ರಾಗಿ, ಹತ್ತಿ, ಶೇಂಗಾ, ಜೋಳ ಇತ್ಯಾದಿ ಬೆಳೆಗಳು ಕೈಗೆ ನಾಶ ಆಗುತ್ತವೆ ಎಂದು ಸಚಿವರು ಆತಂಕ ವ್ಯಕ್ತಪಡಿಸಿದರು,

ಬಗರ್ ಹುಕುಂ ಭೂಮಿಯನ್ನು ಹಂಚಿಕೆ ಮಾಡುವಾಗ ಅಕ್ರಮಗಳು ನಡೆದಿದ್ದರೆ ಆ ಬಗ್ಗೆ ತನಿಖೆ ನಡೆಸಲಾಗುವುದು ಎಂಬ ಹಿಂದಿನ ಕಂದಾಯ ಸಚಿವರ ಹೇಳಿಕೆ ತಮ್ಮ ಗಮನಕ್ಕೆ ಬಂದಿಲ್ಲ. ಆ ರೀತಿ ಅವರು ಮಾತನಾಡಿದ್ದರೆ ತನಿಖೆ ನಡೆಸಲು ಬದ್ಧ ಎಂದರು. ಕೆಲವು ನಿರ್ಧಿಷ್ಟ ಪ್ರಕರಣಗಳಲ್ಲಿ ಈಗಾಗಲೇ ತನಿಖೆಗೆ ಆದೇಶಿಸಿದ್ದೇನೆ. ಒಟ್ಟಾರೆ ಮಾಹಿತಿ ಪಡೆದು ಬಗರ್ ಹುಕುಂ ಅಕ್ರಮದ ಬಗ್ಗೆ ತನಿಖೆ ನಡೆಸುವ ಭರವಸೆಯನ್ನು ಅವರು ನೀಡಿದರು.

ಇದಲ್ಲದೇ ಸುಮಾರು 184 ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, ಅಲ್ಲೆಲ್ಲಾ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಕುಡಿಯುವ ನೀರಿಗೆ ಪರ್ಯಾಯ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳ ಬಳಿ ಹಣದ ಕೊರತೆಯಿಲ್ಲ. ಪ್ರತಿಯೊಬ್ಬ ಜಿಲ್ಲಾಧಿಕಾರಿಗಳ ಬಳಿ ಕನಿಷ್ಠ ಐದು ಕೋಟಿ ರೂ. ಇದೆ. ಒಟ್ಟು 217 ಕೋಟಿ ರೂ. ಇದೆ. ಅಗತ್ಯವಿದ್ದರೆ ಖಾಸಗಿ ಬೋರ್‍ವೆಲ್‍ಗಳನ್ನು ವಶಕ್ಕೆ ಪಡೆಯಲು ಸೂಚಿಸಲಾಗಿದೆ ಎಂದು ಹೇಳಿದರು.

ನರೇಗಾ ಯೋಜನೆಯಲ್ಲಿ ವರ್ಷದಲ್ಲಿ 150 ದಿನ ಕೆಲಸ ಕೊಡುವ ಕಾರ್ಯಕ್ರಮವನ್ನು ಸಿದ್ಧಮಾಡಿಟ್ಟುಕೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದ ಸಚಿವರು, ಪ್ರತಿವಾರ ಜಿಲ್ಲಾಧಿಕಾರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸುವ ಮೂಲಕ ಪರಿಸ್ಥಿತಿ ಅಧ್ಯಯನ ಮಾಡುವಂತೆ ಅಭಿವೃದ್ಧಿ ಆಯುಕ್ತರಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ರಾಜ್ಯದಲ್ಲಿ ಸುಮಾರು 54 ವರ್ಷಗಳ ನಂತರ ಭೂ ದಾಖಲೆಗಳ ಪುನರ್ ಸಮೀಕ್ಷೆಗೆ ಸರ್ಕಾರ ನಿರ್ಧರಿಸಿದೆ. ಮೊದಲ ಹಂತದಲ್ಲಿ ಬೆಳಗಾವಿ, ರಾಮನಗರ, ಉತ್ತರಕನ್ನಡ, ತುಮಕೂರು ಹಾಗೂ ಹಾಸನ ಜಿಲ್ಲೆಗಳಲ್ಲಿ ಸರ್ವೆ ನಡೆಸಲಾಗುತ್ತದೆ. ಕ್ರಮೇಣ ಎಲ್ಲಾ ಜಿಲ್ಲೆಗಳಿಗೆ ವಿಸ್ತರಣೆ ಮಾಡಲಾಗುತ್ತದೆ. ಇದರಿಂದ ಭೂಮಿಯ ನೈಜ ಮಾಲಿಕತ್ವ ಗೊತ್ತಾಗುತ್ತದೆ.

ಇದಲ್ಲದೇ ನಗರಗಳ ಆಸ್ತಿ ಮಾಲೀಕತ್ವವನ್ನು ಅಪ್ಡೇಟ್ ಮಾಡುವ ಕಾರ್ಯಕ್ಕೂ ಸರ್ಕಾರ ಮುಂದಾಗಿದೆ. ಶಿವಮೊಗ್ಗ ನಗರದಲ್ಲಿ ಈಗಾಗಲೇ ಇದು ಮುಗಿದಿದೆ. ಇದರಿಂದ ಸರ್ಕಾರ ಆಸ್ತಿ ಅತಿಕ್ರಮಣ ಆಗುವುದನ್ನು ಪತ್ತೆ ಹಚ್ಚಬಹುದಾಗಿದೆ. ಇತರೆ ನಗರ ಪ್ರದೇಶಗಳಲ್ಲಿಯೂ ಇದನ್ನು ಜಾರಿ ಮಾಡುವುದಾಗಿ ಸಚಿವರು ಹೇಳಿದರು.


ಸಂಬಂಧಿತ ಟ್ಯಾಗ್ಗಳು

R.V.Deshpande Revenue Minister ಶೇಂಗಾ ಜೋಳ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ