ಡ್ರಗ್ ಮಾಫಿಯಾ ತಡೆಗಟ್ಟುವಲ್ಲಿ ರಾಜ್ಯ ಸರ್ಕಾರ ವಿಫಲ: ಆರ್.ಅಶೋಕ್

Government fails to prevent drug mafia: R Ashok

06-08-2018

ಬೆಂಗಳೂರು: ನಗರದಲ್ಲಿ ಮಿತಿ ಮೀರಿ ಹೆಚ್ಚುತ್ತಿರುವ ಡ್ರಗ್ ಮಾಫಿಯಾ ತಡೆಗಟ್ಟುವಲ್ಲಿ ರಾಜ್ಯದ ಸಮ್ಮಿಶ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿರುವ ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಅವರು ಡ್ರಗ್ ಮಾಫಿಯಾದಲ್ಲಿ ಭಾಗಿಯಾಗಿರುವವರ ಮೇಲೆ ಗೂಂಡಾ ಕಾಯ್ದೆ ದಾಖಲಿಸುವಂತೆ ಆಗ್ರಹಿಸಿದರು.

ಹೆಚ್ಚುತ್ತಿರುವ ಡ್ರಗ್ಸ್ ಮಾಫಿಯಾ ಹತ್ತಿಕ್ಕಲು ಕಠಿಣ ಕ್ರಮ ಕೈಗೊಳ್ಳುವಂತೆ ಇಂದು ನಗರ ಪೊಲೀಸ್ ಆಯುಕ್ತ ಸುನೀಲ್ ಕುಮಾರ್‍ ಗೆ ದೂರು ಸಲ್ಲಿಸಿದ ರಾಜ್ಯ ಬಿಜೆಪಿ ನಿಯೋಗದ ನೇತೃತ್ವ ವಹಿಸಿದ್ದ ಆಶೋಕ್ ಅವರು ನಂತರ ಸುದ್ದಿಗಾರರ ಜೊತೆ ಮಾತನಾಡಿ ಡ್ರಗ್ ಮಾಫಿಯಾ ತಡೆಗಟ್ಟುವಲ್ಲಿ ರಾಜ್ಯ ಸರ್ಕಾರವು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.

ನಗರದಲ್ಲಿ ಡ್ರಗ್ ಮಾಫಿಯಾ ಮಿತಿ ಮೀರಿದೆ ಕಳೆದ ಅಧಿವೇಶನದಲ್ಲಿ ಡ್ರಗ್ ಮಾಫಿಯಾದ ಬಗ್ಗೆ ಸಾಕಷ್ಟು ಚರ್ಚೆ ನಡೆದು ಸರ್ಕಾರದ ಗಮನ ಸೆಳೆಯಲಾಗಿತ್ತಾದರೂ ಡ್ರಗ್ ಮಾಫಿಯಾವನ್ನು ತಡೆಗಟ್ಟುವಲ್ಲಿ ಸರ್ಕಾರ ಅಗತ್ಯಕ್ರಮ ಕೈಗೊಂಡಿಲ್ಲ ಎಂದರು.

ಅಧಿವೇಶನದಲ್ಲಿ ನಡೆದ ವಿಸ್ತೃತ ಚರ್ಚೆಗೆ ಉತ್ತರ ನೀಡಿದ ಗೃಹ ಖಾತೆಯನ್ನು ಹೊಂದಿರುವ ಉಪಮುಖ್ಯಮಂತ್ರಿ ಪರಮೇಶ್ವರ ಅವರು ಡ್ರಗ್ ಮಾಫಿಯಾ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಗೃಹ ಸಚಿವರೂ ಭರವಸೆ ನೀಡಿದ್ದರು. ಡ್ರಗ್ ಮಾಫಿಯಾದಲ್ಲಿ ಭಾಗಿಯಾಗಿರುವ ವಿದೇಶಿ ವಿದ್ಯಾರ್ಥಿಗಳನ್ನು ಗಡಿಪಾರು ಮಾಡುವುದಾಗಿ ಹೇಳಿದ್ದರು ಆದರೆ ಇದುವರೆಗೂ ಯಾವ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.

ಗೂಂಡಾ ಕಾಯ್ದೆ: ಡ್ರಗ್ ಮಾಫಿಯಾದಲ್ಲಿ ಭಾಗಿಯಾಗಿರುವ ಒಬ್ಬರ ಮೇಲೂ ಗೂಂಡಾ ಕಾಯ್ದೆ ಹಾಕಿಲ್ಲ. ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಡ್ರಗ್ ನ್ನು ವಿದೇಶಗಳಿಗೆ ಸಾಗಿಸಲು ವೇದಿಕೆಯಾಗಿದೆ.

ಹಲವು ಕಡೆಗಳಲ್ಲಿ ಮನೆ ಮನೆಯಲ್ಲೂ ಡ್ರಗ್ಸ್ ಇಟ್ಟುಕೊಂಡಿದ್ದಾರೆ. ಆದರೆ ಸರ್ಕಾರ ಇದುವರೆಗೂ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ಪೊಲೀಸ್ ಕಮಿಷನರ್ ಗೆ ಕ್ರಮ ಕೈಗೊಳ್ಳುವಂತೆ ಇಂದು ಒತ್ತಾಯ ಮಾಡಿದ್ದೇವೆ ಎಂದು ತಿಳಿಸಿದರು. ಡ್ರಗ್ಸ್ ಮಾಫಿಯಾ ತಡೆಯಲು ಸರಕಾರವನ್ನು ಕಟ್ಟಿಹಾಕಿರುವುದಾದರೂ ಯಾರು ಮಾಫಿಯಾ ತಡೆಯದಿದ್ದರೆ ಯುವಜನಾಂಗದ ಭವಿಷ್ಯಕ್ಕೆ ಆತಂಕ ಉಂಟಾಗಲಿದೆ ಎಂದು ಎಚ್ಚರಿಕೆ ನೀಡಿದರು.

ಒಗ್ಗಟ್ಟಿನ ಕೊರತೆ: ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜೆಡಿಎಸ್ ಕಾಂಗ್ರೆಸ್ ಮೈತ್ರಿ ಮಾಡಿಕೊಳ್ಳದಿರುವುದನ್ನು ನೋಡಿದರೆ ಎರಡೂ ಪಕ್ಷಗಳ ನಡುವೆ ಒಗ್ಗಟ್ಟಿಲ್ಲ ಎನ್ನುವುದು ಸಾಬೀತಾಗಿದೆ. ಸರ್ಕಾರದಲ್ಲೂ ಒಡಕು ಕಾಣಿಸತೊಡಗಿದೆ ಒಗ್ಗಟ್ಟಿನ ಕೊರತೆಯಿಂದಲೇ ಎರಡೂ ಪಕ್ಷಗಳು ಮೈತ್ರಿ ಮಾಡಿಕೊಂಡಿಲ್ಲ ಎಂದರು.

ಎರಡು ಪಕ್ಷಗಳ ನಡುವೆ ನಂಬಿಕೆ ಹೋಗಿದೆ, ಸಿದ್ದರಾಮಯ್ಯ ಅವರು ಹೇಳಿದ್ದು ನಿಜವಾಗಲಿದೆ ಈ ಸರಕಾರ ಲೋಕಸಭೆ ಚುನಾವಣೆಗೂ ಮುನ್ನವೇ ಬೀಳಬಹುದು ಇವರಿಬ್ಬರ ಅಮೈತ್ರಿಯಿಂದ ಬಿಜೆಪಿಗೆ ಲಾಭವಾಗಲಿದೆ ಎಂದು ಹೇಳಿದರು. ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿದ ನಿಯೋಗದಲ್ಲಿ ಶಾಸಕರಾದ ಅಶ್ವಥ್ ನಾರಾಯಣ, ರವಿಸುಬ್ರಮಣ್ಯ, ಮಾಜಿ ಶಾಸಕ ಮುನಿರಾಜು, ವಿಧಾನಪರಿಷತ್ ಸದಸ್ಯೆ ತಾರಾ ಅನುರಾಧಾ, ಪರಿಷತ್ ಸದಸ್ಯೆ ತೇಜಸ್ವಿನಿ, ಯುವ ಮುಖಂಡ ಸಪ್ತಗಿರಿಗೌಡ ಇನ್ನಿತರರಿದ್ದರು.


ಸಂಬಂಧಿತ ಟ್ಯಾಗ್ಗಳು

R.Ashok Drug ನಂಬಿಕೆ ಚುನಾವಣೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ