ರಾಮನಗರದಲ್ಲಿ ಶಂಕಿತ ಉಗ್ರನೊಬ್ಬನ ಬಂಧನ!

suspected terrorist arrested at ramanagara!

06-08-2018

ಬೆಂಗಳೂರು: ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಕ್ಷೇತ್ರ ರಾಮನಗರದಲ್ಲಿ ತಲೆಮರೆಸಿಕೊಂಡಿದ್ದ ಶಂಕಿತ ಉಗ್ರನೊಬ್ಬನನ್ನು ರಾಷ್ಟ್ರೀಯ ತನಿಖಾ ದಳ(ಎನ್.ಐ.ಎ)ದ ಅಧಿಕಾರಿಗಳು ಬಂಧಿಸಿದ್ದಾರೆ. ರಾಮನಗರದಲ್ಲಿ ಬಟ್ಟೆ ವ್ಯಾಪಾರ ಮಾಡುತ್ತಿದ್ದ ಬಂಧಿತ ಮುನೀರ್ (25) ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ರಾಮನಗರದಲ್ಲಿ ಕಳೆದ ಮೂರು ತಿಂಗಳಿಂದ ವಾಸಿಸುತ್ತಿದ್ದು, ಉಗ್ರ ಚಟುವಟಿಕೆಗಳಲ್ಲಿ ತೊಡಗಿರುವುದು ತಿಳಿದುಬಂದಿದೆ.

ಎನ್‍ಐಎ ಅಧಿಕಾರಿಗಳು ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿ, ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ಮುನೀರ್ ನನ್ನು ಬಂಧಿಸಿದ್ದು, ಆತನ ಬಳಿ ಲ್ಯಾಪ್‍ ಟಾಪ್, ಜಿಲೆಟಿನ್ ಪುಡಿ, ರಾಜ್ಯದ ಪ್ರವಾಸಿತಾಣಗಳ ಭೂಪಟ, ಭಾರತೀಯ ಭೂಪಟ, ಬೆಂಗಳೂರಿನ ಮಾಹಿತಿ ಒಳಗೊಂಡ ಪುಸ್ತಕ, ದೇಗುಲಗಳು, ಮಸೀದಿಗಳ ಚಿತ್ರಗಳು, ಇನ್ನಿತರ ದಾಖಲಾತಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಶಂಕಿತನನ್ನು ರಹಸ್ಯ ಸ್ಥಳದಲ್ಲಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದು, ಈ ಬಗ್ಗೆ ಯಾವುದೇ ಮಾಹಿತಿ ನೀಡಲು ರಾಮನಗರ ಪೊಲೀಸರು ನಿರಾಕರಿಸಿದ್ದಾರೆ.

ಶಂಕಿತ ಉಗ್ರನಿಗೆ ಮನೆ ಬಾಡಿಗೆ ನೀಡಿದ್ದ ಮಾಲೀಕ ರಫೀಕ್ ಖಾನ್ ಮಾಧ್ಯಮದ  ಜೊತೆ ಮಾತನಾಡಿ, ಮುನೀರ್ ಗೆ 50 ಸಾವಿರ ಮುಂಗಡ ಹಾಗೂ 5 ಸಾವಿರ ಬಾಡಿಗೆಗೆ ಮನೆ ನೀಡಲಾಗಿತ್ತು. ಮೂರು ಬಾರಿ ಮುಂಗಡ ಹಣವನ್ನ ಕಂತಿನ ರೂಪದಲ್ಲಿ ನೀಡಿದ್ದನು. ಅಗ್ರಿಮೆಂಟ್ ಗಾಗಿ ಆಧಾರ್ ಕಾರ್ಡ್ ಪಡೆದುಕೊಂಡಿದ್ದೆವು, ಮೂರ್ನಾಲ್ಕು ದಿನದಲ್ಲಿ ಮನೆಯ ಹೊಸ ಅಗ್ರಿಮೆಂಟ್ ಮಾಡಿಕೊಳ್ಳುವುದಿತ್ತು. ಆತ ರೈಲ್ವೆ ಟಿಕೇಟ್ ಖರೀದಿ ಮಾಡಲು ಆಧಾರ್ ಕಾರ್ಡ್ ವಾಪಸ್ ಪಡೆದಿದ್ದನು ಎಂದು ತಿಳಿಸಿದ್ದಾರೆ.

ಸೈಕಲ್‍ನಲ್ಲಿ ಬೇರೆಡೆ ಹೋಗಿ ಬಟ್ಟೆ ವ್ಯಾಪಾರ ಮಾಡುತ್ತಿದ್ದನು. ಸ್ವಲ್ಪವೂ ಅನುಮಾನ ಬರದಂತೆ ನಡೆದುಕೊಳ್ಳುತ್ತಿದ್ದನು. ಆತ ಬಟ್ಟೆ ವ್ಯಾಪಾರಕ್ಕೆ ಹೋಗುತ್ತಿದ್ದ ವೇಳೆ ಆತನ ಪತ್ನಿ, ಮಕ್ಕಳು ಮನೆಯಲ್ಲಿಯೇ ಇರುತ್ತಿದ್ದರು. ಎಲ್ಲರ ಜೊತೆ ಅನ್ಯೋನ್ಯವಾಗಿದ್ದರು ಅಲ್ಲದೇ, ಯಾರೇ ಸಿಕ್ಕರೂ ನಮಸ್ಕಾರ ಮಾಡುತ್ತಿದ್ದನು. ಈತ ತಾನು ದೆಹಲಿಯವನು ಎಂದು ಹೇಳಿದ್ದು, ನಮಾಜ್ ಮಾಡುತ್ತಿದ್ದನು ಎಂದು ಹೇಳಿದ್ದಾರೆ.


ಸಂಬಂಧಿತ ಟ್ಯಾಗ್ಗಳು

suspect Terrorist ರೈಲ್ವೆ ಟಿಕೇಟ್ ಸಹಕಾರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ