ಸ್ವಾಮಿ ವಿವೇಕಾನಂದರ ಬಗ್ಗೆ ಪ್ರೋ.ಭಗವಾನ್ ವಿವಾದಾತ್ಮಕ ಹೇಳಿಕೆ

K.S.Bhagwan controversial statement about swami vivekananda

06-08-2018

ಮೈಸೂರು: 'ಸ್ವಾಮಿ ವಿವೇಕಾನಂದರು ಹಾಗೂ ಬಸವಣ್ಣನವರನ್ನು ಪಿತೂರಿ ಮಾಡಿ ಕೊಲ್ಲಲಾಗಿದೆ' ಎಂದು ಪ್ರಗತಿಪರ ಚಿಂತಕ, ಹಿರಿಯ ಸಾಹಿತಿ ಪ್ರೊ.ಕೆ.ಎಸ್.ಭಗವಾನ್ ಮತ್ತೊಂದು ವಿವಾದಾತ್ಮಕ ಹೇಳಿ ನೀಡಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ‘ಸ್ವಾಮಿ ವಿವೇಕಾನಂದರು ಬೌದ್ಧ ಧರ್ಮದ ವಿಚಾರ ಧಾರೆಗಳ ಕುರಿತು ಮಾತನಾಡಲಾರಂಭಿಸಿದ್ದರು. ಆ ಬಳಿಕವೇ ಅವರನ್ನು ಕತ್ತು ಹಿಸುಕಿ ಕೊಂದಿರುವ ಅನುಮಾನವಿದೆ. ಯುವಕರಾಗಿದ್ದ ಸ್ವಾಮಿ ವಿವೇಕಾನಂದರು ಏಕಾಏಕಿ ಸಹಜ ಸಾವನ್ನಪ್ಪಲು ಸಾಧ್ಯವೇ ಇಲ್ಲ. ಅವರನ್ನು ಕೊಲ್ಲಲಾಗಿದೆ’ ಎಂದು ಹೇಳಿದ್ದಾರೆ.

ಆದೇ ರೀತಿ ‘ಬಸವಣ್ಣನವರನ್ನೂ ಕೊಲೆ ಮಾಡಲಾಗಿದೆ. ಬಸವಣ್ಣನವರ ವಚನ ಚಳವಳಿಯನ್ನು ಸಹಿಸದವರು ಅವರನ್ನು ಕೊಂದಿದ್ದಾರೆ. ಬಸವಣ್ಣನವರು ಕೂಡಲ ಸಂಗಮದ ಕಲ್ಯಾಣದಲ್ಲಿ ಐಕ್ಯರಾದರೆಂಬುದು ಶುದ್ಧ ಸುಳ್ಳು. ಜಾತಿ ವ್ಯವಸ್ಥೆ ವಿರುದ್ಧ ಚಳುವಳಿ ಹುಟ್ಟು ಹಾಕಿದವರು ಬಸವಣ್ಣನವರು. ಅಂತಹ ಬಸವಣ್ಣ ಏಕೆ ಐಕ್ಯರಾಗಿ ಸಾಯುತ್ತಾರೆ ಹೇಳಿ..? ಎಂದು ಪ್ರಶ್ನಿಸಿದ್ದಾರೆ. ಕೈಲಾಸ, ಸ್ವರ್ಗ ಎಂಬುದು ಏನೂ ಇಲ್ಲ ಎಂದು ಪ್ರತಿಪಾದಿಸಿದ್ದಾರೆ ಭಗವಾನ್.

ಇದೇ ವೇಳೆ ಮಹಿಷ ದಸರಾವನ್ನು ರಾಜ್ಯ ಸರ್ಕಾರವೇ ಆಚರಿಸಬೇಕು ಎಂದು ಭಗವಾನ್ ಅವರು ಆಗ್ರಹಿಸಿದ್ದಾರೆ. ಚಾಮುಂಡಿ ದಸರಾದಂತೆಯೇ ಮಹಿಷ ದಸರಾವನ್ನು ರಾಜ್ಯ ಸರ್ಕಾರವೇ ಆಚರಿಸಬೇಕು. ಕಳೆದ ನಾಲ್ಕು ವರ್ಷಗಳಿಂದ ಮಹಿಷ ದಸರಾ ಪ್ರತಿಷ್ಠಾನ ಸಮಿತಿ ಸ್ವಂತ ಖರ್ಚಿನಿಂದ ಆಚರಿಸಿಕೊಂಡು ಬಂದಿದೆ. ಈ ಬಾರಿ ರಾಜ್ಯ ಸರ್ಕಾರವೇ ಮಹಿಷ ದಸರಾ ಆಚರಿಸಬೇಕು. ದಸರಾ ಜಂಬೂ ಸವಾರಿ ರೀತಿ ಆನೆಯ ಮೇಲೆ ಮಹಿಷನ ಪ್ರತಿಮೆಯನ್ನು ಕೂರಿಸಿ ಮೆರವಣಿಗೆ ಮಾಡಬೇಕು. ಬರುವ ಅಕ್ಟೋಬರ್ 7ರಂದು ನಡೆಯುವ ಮಹಿಷ ದಸರಾವನ್ನು ರಾಜ್ಯ ಸರ್ಕಾರವೇ ಆಚರಿಸಬೇಕು. ಆ ಮೂಲಕ ದ್ರಾವಿಡ ಸಂಸ್ಕೃತಿಯನ್ನು ಸರ್ಕಾರ ಪ್ರೋತ್ಸಾಹಿಸಬೇಕು ಎಂದು ಒತ್ತಾಯಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

K.S.Bhagawan Swami Vivekananda ಚಾಮುಂಡಿ ಬಸವಣ್ಣ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ