ಆನ್‍ಲೈನ್‍ನಲ್ಲಿ ಔಷಧಿ ಖರೀದಿಗೆ ಅವಕಾಶ ಕಲ್ಪಿಸಿದರೆ ನಾವು ಬೀದಿಪಾಲಾಗಬೇಕಾಗುತ್ತದೆ !

Kannada News

30-05-2017

ಬೆಂಗಳೂರು:- ಆನ್‍ಲೈನ್‍ನಲ್ಲಿ ಔಷಧಿ ಮಾರಾಟಕ್ಕೆ ಅವಕಾಶ ಕೊಟ್ಟಿರುವ ಕೇಂದ್ರ ಸರ್ಕಾರದ ಕ್ರಮ ವಿರೋಧಿಸಿ ರಾಜ್ಯದ 25ಸಾವಿರಕ್ಕೂ ಹೆಚ್ಚು ಮೆಡಿಕಲ್ ಸ್ಟೋರ್‍ಗಳು ಸೇರಿದಂತೆ ದೇಶಾದ್ಯಂತ 8.5 ಲಕ್ಷ ಮೆಡಿಕಲ್ ಸ್ಟೋರ್‍ಗಳು ಇಂದು ಔಷಧಿ ಮಾರಾಟವನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಿದ ಪರಿಣಾಮ ರೋಗಿಗಳು ಪರದಾಡುವಂತಾಯಿತು.  ಇಡೀ ದಿನ ಔಷಧಿಗಳ ಪೂರೈಕೆ ಸಂಪೂರ್ಣ ಬಂದ್ ಆಗಿತ್ತು. ಬೆಂಗಳೂರು ಮಹಾನಗರದಲ್ಲಿ 8.5 ಸಾವಿರ ಔಷಧಿ ಮಾರಾಟ ಮಳಿಗೆಗಳು ಬಂದ್ ಮಾಡಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿವೆ. ಮೈಸೂರಿನ 1500ಮೆಡಿಕಲ್ ಸ್ಟೋರ್‍ಗಳು ಬಂದ್ ಮಾಡಿ ಪ್ರತಿಭಟನೆಗೆ ಬೆಂಬಲ ನೀಡಿದರೆ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಮಂಡ್ಯ, ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ, ಹುಬ್ಬಳ್ಳಿ-ಧಾರವಾಡ ಸೇರಿದಂತೆ ಎಲ್ಲಾ ಪ್ರಮುಖ ನಗರಗಳಲ್ಲಿ ಔಷಧಾಲಯಗಳು ಬಂದ್ ಆಗಿದ್ದವು. ಬೆಳಗಾವಿಯಲ್ಲಿ ಮಿಶ್ರ ಪ್ರತಿಕ್ರಿಯೆ ಕಂಡುಬಂತು. ಪ್ರತಿಭಟನೆ ಎಂಬ ಸೂಚನೆಯಿದ್ದರೂ ಕೆಲವರು ಔಷಧಿಗಳ ಮಾರಾಟ ಮಾಡುತ್ತಿದ್ದುದು ಕಂಡುಬಂತು. ಔಷಧಿ ಮಾರಾಟ ಸಂಘದ ಪದಾಧಿಕಾರಿಗಳು ಮನವೊಲಿಸಿ ಬಂದ್ ಮಾಡಿಸಿದರು. ವಿಜಯಪುರದಲ್ಲಿ ಎಂದಿನಂತೆ ಔಷಧಿ ಮಳಿಗೆಗಳು ತೆರೆದಿದ್ದವು.
ವೈದ್ಯರು ನೀಡುವ ಪ್ರತಿ ಪ್ರಿಸ್‍ಕ್ರಿಪ್ಷನ್‍ನನ್ನು ಸ್ಕ್ಯಾನ್ ಮಾಡಿ ಆಯಾ ಮೆಡಿಕಲ್ ಸ್ಟೋರ್‍ನವರು ಸೆಂಟ್ರಲ್ ಇ ಪೋರ್ಟಲ್‍ಗೆ ಅಪ್‍ಲೋಡ್ ಮಾಡಬೇಕು ಎಂಬ ವ್ಯವಸ್ಥೆಯನ್ನು ತಂದಿರುವ ಕೇಂದ್ರ ಸರ್ಕಾರ, ಈ ಕ್ರಮವನ್ನು ಕೈಬಿಡಬೇಕು ಹಾಗೂ ಆನ್‍ಲೈನ್ ಮೂಲಕ ಔಷಧಿ ಖರೀದಿ ಮಾಡಲು ನೀಡಿರುವ ಅನುಮತಿಯನ್ನು ಹಿಂಪಡೆಯಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.  ಆನ್‍ಲೈನ್‍ನಲ್ಲಿ ಔಷಧಿ ಖರೀದಿಗೆ ಅವಕಾಶ ಕಲ್ಪಿಸಿದರೆ ಮೆಡಿಕಲ್ ಸ್ಟೋರ್‍ನವರು ಬೀದಿಪಾಲಾಗಬೇಕಾಗುತ್ತದೆ. ಮೆಡಿಕಲ್ ಸ್ಟೋರ್‍ನವರಿಗೆ ಸಾಕಷ್ಟು ನಿಯಮಾವಳಿಗಳನ್ನು ರೂಪಿಸಿ ಆನ್‍ಲೈನ್‍ನಲ್ಲಿ ಮುಕ್ತ ಔಷಧಿಗಳ ಮಾರಾಟಕ್ಕೆ ಅವಕಾಶ ಕಲ್ಪಿಸಿರುವುದು ಸಮಂಜಸವಲ್ಲ. ಇದು ರೋಗಿಗಳ ಮೇಲೂ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ ಎಂದು ಔಷಧಿ ಮಾರಾಟಗಾರರ ಸಂಘದ ಪದಾಧಿಕಾರಿಗಳು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ