ಗ್ರಾಮೀಣ ಪ್ರದೇಶಗಳಲ್ಲೂ ಸರಗಳ್ಳರ ಅಟ್ಟಹಾಸ

chain snatchers entered into rural: and robbed

04-08-2018

ಮೈಸೂರು: ನಗರಗಳಲ್ಲಿ ಸರಗಳ್ಳರು ತಮ್ಮ ಕೈಚಳಕ ತೋರಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನದ ಸರಗಳನ್ನು ಎಗರಿಸುತ್ತಿದ್ದರು. ಇದೀಗ ಗ್ರಾಮೀಣ ಪ್ರದೇಶಗಳಲ್ಲಿಯೂ ಸರಗಳ್ಳರು ಅಟ್ಟಹಾಸ ಮೆರೆಯುತ್ತಿದ್ದಾರೆ. ಇಂತಹದ್ದೇ ಒಂದು ಘಟನೆ ನಿನ್ನೆ ತಡರಾತ್ರಿ ನಂಜನಗೂಡು ತಾಲ್ಲೂಕಿನ ಕೋಡಿ ನರಸೀಪುರ ಗ್ರಾಮದಲ್ಲಿ ನಡೆದಿದೆ. ತಡರಾತ್ರಿ ಏಕಾಏಕಿ ಮನೆಗೆ ನುಗ್ಗಿದ ಆಗಂತುಕರು, ಗೃಹಿಣಿ ಕತ್ತಲ್ಲಿದ್ದ ಮಾಂಗಲ್ಯ ಸರ ಕಸಿದು ಪರಾರಿಯಾಗಿದ್ದಾರೆ.

ಕೋಡಿ ನರಸೀಪುರ ಗ್ರಾಮದ ಬಸಂತ್ ಕುಮಾರ್ ಎಂಬವರ ಪತ್ನಿ ನಂದಿನಿ ಸುಮಾರು 40ಗ್ರಾಂ. ಚಿನ್ನದ ಸರ ಕಳೆದುಕೊಂಡವರು. ನಿನ್ನೆ ರಾತ್ರಿ ಹನ್ನೆರಡು ಗಂಟೆ ಸುಮಾರಿನಲ್ಲಿ ಬಸಂತ ಕುಮಾರ್ ರಾತ್ರಿ ಪಾಳಿಗೆ ಕೆಲಸಕ್ಕೆ ತೆರಳಿದ್ದ ಸಂದರ್ಭದಲ್ಲಿ, ಹೊಂಚು ಹಾಕಿ ನಿಂತಿದ್ದ ಸರಗಳ್ಳರು ನಂದಿನಿ ನಿದ್ರೆಗೆ ಜಾರಿದ ವೇಳೆ ಮನೆಯ ಬಾಗಿಲು ಮುರಿದು ಕೋಣೆಗೆ ನುಗ್ಗಿ ಆಕೆಯ ಬಾಯಿಯನ್ನು ಬಲವಾಗಿ ಮುಚ್ಚಿ ಸುಮಾರು 1.2 ಲಕ್ಷ ಮೌಲ್ಯದ ಚಿನ್ನವನ್ನು ದೋಚಿದ್ದಾರೆ. 

ಸರವನ್ನು ಎಳೆದಾಡುವ ವೇಳೆ ಚೀರಾಡಿಕೊಂಡಿದ್ದಾರೆ ನಂದಿನಿ, ಈ ವೇಳೆ ಮತ್ತೊಂದು ಕೋಣೆಯಲ್ಲಿ ಮಲಗಿದ್ದ ಆಕೆಯ ಬಾವ ನಾರಾಯಣ ಮೂರ್ತಿ ಬಂದು ನೋಡುವಷ್ಟರಲ್ಲಿ ಸ್ಥಳದಿಂದ ಕಾಲ್ಕಿತ್ತಿದ್ದರು ಕಳ್ಳರು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಸರ್ಕಲ್ ಇನ್ಸ್ಪೆಕ್ಟರ್ ಶಿವಮೂರ್ತಿ, ದೊಡ್ಡ ಕವಲಂದೆ ಠಾಣೆ ಪಿಎಸ್ಐ ರವಿಕುಮಾರ್ ಮಹಜರು ನಡೆಸಿದ್ದಾರೆ. ಘಟನೆ ಕುರಿತು ನಂದಿನಿ ದೊಡ್ಡಕೌಲಂದೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪಟ್ಟಣ ಪ್ರದೇಶದಲ್ಲಿ ನಡೆಯುತ್ತಿರುವ ಸರಗಳ್ಳತನವನ್ನು ನೋಡಿ ಸ್ಥಳೀಯರೇ ಈ ಕೃತ್ಯ ಎಸಗಲು ಮುಂದಾಗಿರಬಹುದು ಎಂಬ ಅನುಮಾನ ವ್ಯಕ್ತಪಡಿಸಿರುವ ಪೊಲೀಸರು, ಸರಗಳ್ಳತನ ನಡೆದಿರುವ ಘಟನೆಯ ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರಿಂದ ಸೂಕ್ಷ್ಮವಾಗಿ ಪರಿಶೀಲನೆ ನಡೆಸಿ ಕಳ್ಳರಿಗಾಗಿ ಬಲೆ ಬೀಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

chain snatch Rural ಅಟ್ಟಹಾಸ ಇನ್ಸ್ಪೆಕ್ಟರ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ