‘2 ವರ್ಷಗಳಲ್ಲಿ ಮೈಸೂರು-ಬೆಂಗಳೂರು ದಶಪಥ ರಸ್ತೆ’03-08-2018

ಬೆಂಗಳೂರು: ಮೈಸೂರು-ಬೆಂಗಳೂರು ದಶಪಥ ರಸ್ತೆಯ ನಿರ್ಮಾಣ ಕಾರ್ಯಕ್ಕೆ ಸೆಪ್ಟೆಂಬರ್ ತಿಂಗಳಲ್ಲಿ ಚಾಲನೆ ಸಿಗಲಿದ್ದು ಎರಡು ವರ್ಷಗಳ ಒಳಗೆ ಪೂರ್ಣವಾಗಲಿದೆ ಎಂದು ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಹೇಳಿದ್ದಾರೆ.

ವಿಧಾನಸೌಧದ ಸಮಿತಿ ಕೊಠಡಿಯಲ್ಲಿಂದು ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ವಿಷಯ ತಿಳಿಸಿದರಲ್ಲದೆ ಯೋಜನೆಯ ಆರಂಭಕ್ಕೆ ಅಗತ್ಯವಾದ ಶೇಕಡಾ ಎಂಭತ್ತರಷ್ಟು ಭೂಮಿಯನ್ನು ಸೆಪ್ಟೆಂಬರ್ ತಿಂಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಹಸ್ತಾಂತರಿಸುವುದಾಗಿ ಅವರು ಹೇಳಿದರು.

ರಾಷ್ಟ್ರೀಯ ಹೆದ್ದಾರಿ ಯೋಜನೆಯನ್ನು ಆರಂಭಿಸುವ ಮುನ್ನ ಶೇಕಡಾ ಎಂಭತ್ತರಷ್ಟು ಭೂಮಿಯನ್ನು ನಾವು ಪ್ರಾಧಿಕಾರಕ್ಕೆ ಹಸ್ತಾಂತರಿಸಬೇಕು. ಆದರೆ ನಾವು ಶೇಕಡಾ ಎಪ್ಪತ್ತೆರಡರಷ್ಟು ಪ್ರಮಾಣದ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದ್ದೇವೆ. ಉಳಿದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆ ಜಾರಿಯಲ್ಲಿದ್ದು ಸೆಪ್ಟೆಂಬರ್ ತಿಂಗಳಲ್ಲಿ ಶೇಕಡಾ ಎಂಭತ್ತರಷ್ಟು ಪ್ರಮಾಣದ ಭೂಮಿಯನ್ನು ಹಸ್ತಾಂತರಿಸುತ್ತೇವೆ. ಎರಡು ವರ್ಷಗಳ ಒಳಗೆ ಯೋಜನೆ ಪೂರ್ಣವಾಗಲಿದೆ ಎಂದರು.

ರಾಜ್ಯದಲ್ಲಿ ನಿರ್ಮಾಣವಾಗುತ್ತಿರುವ ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ತ್ವರಿತ ಅನುಷ್ಠಾನ ಕಾರ್ಯ ಸಾಧ್ಯವಾಗುತ್ತಿಲ್ಲ ಎಂಬ ಕೇಂದ್ರದ ಸೂಚನೆಯ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಸಭೆ ಕರೆದು ಯೋಜನೆಯ ಅನುಷ್ಠಾನಕ್ಕೆ ರಾಜ್ಯದ ವತಿಯಿಂದ ಇರುವ ಸಮಸ್ಯೆಗಳನ್ನು ಪರಿಹರಿಸುವಂತೆ ಸೂಚನೆ ನೀಡಲಾಗಿದೆ ಎಂದರು.

ಅದೇ ರೀತಿ ಪ್ರತಿ ತಿಂಗಳು ಮುಖ್ಯ ಕಾರ್ಯದರ್ಶಿಗಳು ಈ ಕುರಿತು ಪರಿಶೀಲನೆ ನಡೆಸಲಿದ್ದಾರೆ ಎಂದ ಅವರು, ನಿತಿನ್ ಗಡ್ಕರಿಯವರು ಕೇಂದ್ರ ಸಚಿವರಾದ ಮೇಲೆ ರಾಜ್ಯದಲ್ಲಿ ನಾಲ್ಕು ಸಾವಿರ ಕಿಲೋಮೀಟರ್ ರಸ್ತೆ ಹೆದ್ದಾರಿಯಾಗಿ ಪರಿವರ್ತನೆಯಾಗಿದ್ದು ಕೆಲಸ ನಡೆಯುತ್ತಿದೆ ಎಂದರು.

ಬಂಡಿಪುರ-ಸುಲ್ತಾನ್ ಬತೇರಿ ನಡುವೆ ರಾತ್ರಿ ಹೊತ್ತಿನ ಸಂಚಾರಕ್ಕೆ ಅನುಕೂಲ ಮಾಡಿಕೊಡುವ ಸಂಬಂಧ ಕೇರಳ ಸರ್ಕಾರ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಒಂದು ಸಮಿತಿಯನ್ನು ರಚಿಸಿದೆ. ಆ ಸಮಿತಿ ನೀಡುವ ವರದಿ ಮತ್ತು ಅದರ ಆಧಾರದ ಮೇಲೆ ಸುಪ್ರೀಂಕೋರ್ಟ್ ನೀಡುವ ತೀರ್ಮಾನಕ್ಕೆ ನಾವು ಬದ್ಧ ಎಂದು ಇದೇ ಸಂದರ್ಭದಲ್ಲಿ ಅವರು ಹೇಳಿದರು.

ಸಮಿತಿಯಲ್ಲಿ ಕರ್ನಾಟಕ, ತಮಿಳುನಾಡು ಹಾಗೂ ಕೇರಳ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು, ಕೇಂದ್ರದ ಅರಣ್ಯ, ಪರಿಸರ ಇಲಾಖೆ ಕಾರ್ಯದರ್ಶಿಗಳು ಸೇರಿದಂತೆ ಹಲವರು ಇರುತ್ತಾರೆ. ಆ ಸಮಿತಿ ಏನು ವರದಿ ನೀಡುತ್ತದೆ?ಅದರ ಆಧಾರದ ಮೇಲೆ ಸುಪ್ರೀಂ ಕೋರ್ಟ್ ಏನು ತೀರ್ಪು ನೀಡುತ್ತದೆ? ಅನ್ನುವುದನ್ನು ನೋಡುತ್ತೇವೆ. ಬಂಡಿಪುರ ಅರಣ್ಯ ಮಾರ್ಗದಲ್ಲಿ ರಾತ್ರಿ ವೇಳೆ ಸಂಚರಿಸಲು ಅವರು ಅನುಮತಿ ನೀಡಿದರೆ ನಾವು ಬೇಡ ಎನ್ನಲು ಸಾಧ್ಯವಿಲ್ಲ ಎಂದು ಇದೇ ಸಂದರ್ಭದಲ್ಲಿ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಮುಖ್ಯಮಂತ್ರಿಗಳು ಹಾಗೂ ತಾವು ದೆಹಲಿಗೆ ಹೋಗಿದ್ದಾಗ ಸಂಬಂಧಪಟ್ಟ ಸಚಿವರು, ಬಂಡಿಪುರ ಅರಣ್ಯ ಮಾರ್ಗದಲ್ಲಿ ಸಂಚರಿಸಲು ಪೂರಕವಾದ 407 ಕೋಟಿ ರೂ ವೆಚ್ಚದ ರಸ್ತೆ ನಿರ್ಮಾಣದ ಯೋಜನೆಯನ್ನು ಜಾರಿಗೊಳಿಸಲು ಒಪ್ಪಿಕೊಳ್ಳಿ ಎಂದು ಹೇಳಿದ್ದರು. ಆದರೆ ಅದಕ್ಕೆ ನಾವು ಒಪ್ಪಿಗೆ ನೀಡದೆ ಸಮಿತಿ ನೀಡುವ ವರದಿ ಹಾಗೂ ಅದರ ಆಧಾರದ ಮೇಲೆ ಸುಪ್ರೀಂ ಕೋರ್ಟ್ ನೀಡುವ ವರದಿಯನ್ನು ನೋಡಿ ಮುಂದಿನ ಹೆಜ್ಜೆ ಇಡೋಣ ಎಂದು ಹೇಳಿರುವುದಾಗಿ ನುಡಿದರು.

ಬೆಂಗಳೂರು ಎಲಿವೇಟೆಡ್ ಕಾರಿಡಾರ್ ಯೋಜನೆಯ ಕಾಮಗಾರಿ ಕಾರ್ಯ ಬೇರೆ ಇಲಾಖೆಯಿಂದ ರೇವಣ್ಣ ಅವರು ತಮ್ಮ ಇಲಾಖೆಗೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ ಎಂಬ ಮಾಧ್ಯಮಗಳ ವರದಿಯನ್ನು ಅವರು ತಳ್ಳಿ ಹಾಕಿದರು. ಅದು ಹಿಂದಿನ ಸರ್ಕಾರದ ಅವಧಿಯಲ್ಲೇ ರಸ್ತೆ ಅಭಿವೃದ್ಧಿ ನಿಗಮಕ್ಕೆ ವರ್ಗಾವಣೆಯಾದ ಕಾಮಗಾರಿ ಎಂದ ಅವರು, ಯೋಜನೆಗೆ ಸಂಬಂಧಿಸಿದ ಡಿಪಿಆರ್ ಸಿದ್ಧವಾಗಿದೆ. ಅದರ ಆಧಾರದ ಮೇಲೆ ಇನ್ನೂ ಸಾರ್ವಜನಿಕರಿಂದ ಅಭಿಪ್ರಾಯ ಪಡೆಯಬೇಕು. ಹೀಗೆ ವಿವಿಧ ಹಂತಗಳ ಪ್ರಕ್ರಿಯೆ ಮುಗಿದು ಯೋಜನೆ ಅರಂಭವಾಗಲು ಆರು ತಿಂಗಳು ಬೇಕು ಎಂದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ