ನಿವೃತ್ತ ನ್ಯಾಯಮೂರ್ತಿ ಪತ್ನಿಗೆ ಬೆದರಿಸಿ ಮನೆಗಳ್ಳತನ

Threatened a retired judge

03-08-2018

ಬೆಂಗಳೂರು: ನಿವೃತ್ತ ನ್ಯಾಯಮೂರ್ತಿ ದಿ. ದೇವೇಂದ್ರಪ್ಪ ಅವರ ಪತ್ನಿಗೆ ಚಾಕು ತೋರಿಸಿ ಬೆದರಿಸಿರುವ ಮೂವರು, ಲಕ್ಷಾಂತರ ಮೌಲ್ಯದ ಚಿನ್ನಾಭರಣ, ಬೆಲೆ ಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗಿರುವ ದುರ್ಘಟನೆ ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ನ್ಯಾಯಾಂಗ ಬಡಾವಣೆಯ ದಿ.ದೇವೇಂದ್ರಪ್ಪ ಅವರ ಮನೆಗೆ ನಿನ್ನೆ ರಾತ್ರಿ 12.30ರ ವೇಳೆ ಹಿಂಬಾಗಿಲು ಮುರಿದು ಒಳ ನುಗ್ಗಿರುವ ಮೂವರು ದುಷ್ಕರ್ಮಿಗಳು ಎಚ್ಚರಗೊಂಡ ಅವರ ಪತ್ನಿ ಶ್ರೀಮತಮ್ಮ (65) ಮತ್ತವರ ಸೋದರಿ ನಿರ್ಮಲಮ್ಮ (60) ಅವರಿಗೆ ಚಾಕು ತೋರಿಸಿ ಬೆದರಿಸಿದ್ದಾರೆ.

ಮನೆಯಲ್ಲಿನ ವಸ್ತುಗಳನ್ನೆಲ್ಲ ಚೆಲ್ಲಾಪಿಲ್ಲಿ ಮಾಡಿ ಬೀರು ಬಾಗಿಲು ಮುರಿದು 250 ಗ್ರಾಂ.ಚಿನ್ನಾಭರಣ ಇನ್ನಿತರ ಬೆಲೆಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ. ದೇವೇಂದ್ರಪ್ಪ ಅವರ ಪುತ್ರ ಅಮೆರಿಕಾದಲ್ಲಿದ್ದು, ಶ್ರೀಮತಮ್ಮ ಹಾಗೂ ಸೋದರಿ ನಿರ್ಮಲಮ್ಮ ಇಬ್ಬರೇ ಮನೆಯಲ್ಲಿ ವಾಸವಾಗಿದ್ದರು. ಹಲವು ವರ್ಷಗಳ ಹಿಂದೆ ಜಿಲ್ಲಾ ಸತ್ರ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ್ದ ದೇವೇಂದ್ರಪ್ಪ ನಿಧನ ಹೊಂದಿದ್ದಾರೆ.

ಮನೆಗೆ ನುಗ್ಗಿದ್ದ ದುಷ್ಕರ್ಮಿಗಳು ಬೆದರಿಸಿದ್ದರಿಂದ ಶ್ರೀಮತಮ್ಮ ಅವರು ಆಘಾತಕ್ಕೊಳಗಾಗಿದ್ದಾರೆ. ದುಷ್ಕರ್ಮಿಗಳು ತೆಲುಗು ಹಾಗೂ ಕನ್ನಡದಲ್ಲಿ ಮಾತನಾಡುತ್ತಿದ್ದು, ಸುಮಾರು 30 ವರ್ಷ ವಯಸ್ಸಿನವರಾಗಿದ್ದಾರೆ ಎಂದು ತಿಳಿದು ಬಂದಿದೆ. ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಈಶಾನ್ಯ ವಿಭಾಗದ ಡಿಸಿಪಿ ಕಲಾಕೃಷ್ಣಸ್ವಾಮಿ ಅವರು ದುಷ್ಕರ್ಮಿಗಳ ಪತ್ತೆಗೆ ವಿಶೇಷ ಪೊಲೀಸ್ ತಂಡವನ್ನು ರಚಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Retired Judge Robbery ಅಮೆರಿಕಾ ಆಘಾತ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ