9 ವರ್ಷದ ಬಾಲಕಿ ಮೇಲೆ ಅತ್ಯಾಚಾರ

02-08-2018
ಬೆಂಗಳೂರು: ಆಟವಾಡಲು ಮನೆಗೆ ಬಂದಿದ್ದ ಪಕ್ಕದ ಮನೆಯ 9ವರ್ಷದ ಬಾಲಕಿಯ ಮೇಲೆ 22 ವರ್ಷದ ಕಾಮುಕನೊಬ್ಬ ಅತ್ಯಾಚಾರವೆಸಗಿ ಪರಾರಿಯಾಗಿರುವ ಹೀನ ಕೃತ್ಯ ಗಾರೆಬಾವಿ ಪಾಳ್ಯದಲ್ಲಿ ನಡೆದಿದೆ. ಗಾರೆಬಾವಿಪಾಳ್ಯದ ರಾಘವೇಂದ್ರ ಲೇಔಟ್ನಲ್ಲಿ ನಿನ್ನೆ ರಾತ್ರಿ ಈ ಕೃತ್ಯ ನಡೆದಿದ್ದು, ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಪರಾರಿಯಾಗಿರುವ ಕಾಮುಕನಿಗಾಗಿ ಬೇಗೂರು ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ.
ಆರೋಪಿಯು ಕಂಬಿ ಕಟ್ಟುವ ಕೆಲಸ ಮಾಡುತ್ತಿದ್ದು, ಬಾಲಕಿಯ ತಂದೆ ಕೂಡ ಇದೇ ಕೆಲಸ ಮಾಡುತ್ತಿದ್ದರು. ಕೆಲಸದ ವೇಳೆ ಪರಿಚಿತರಾಗಿದ್ದ ಇಬ್ಬರು ರಾಘವೇಂದ್ರ ಲೇಔಟ್ನ ಅಕ್ಕಪಕ್ಕದ ಮನೆಯಲ್ಲಿ ವಾಸಿಸುತ್ತಿದ್ದರು.
ಆರೋಪಿಯನ್ನು ಬಾಲಕಿಯು ಅಣ್ಣಾ ಎಂದು ಕರೆಯುತ್ತಿದ್ದು, ಆತನ ಜತೆ ಆಗಾಗ ಆಟವಾಡುತ್ತಿತ್ತು. ರಾತ್ರಿ 9ರ ವೇಳೆ ಅಣ್ಣನ ಜತೆ ಆಟವಾಡುತ್ತೇನೆಂದು ಮನೆಯಲ್ಲಿ ಹೇಳಿ ಬಂದಿದ್ದ ಬಾಲಕಿಯ ಮೇಲೆ ಕಾಮುಕ ಅತ್ಯಾಚಾರವೆಸಗಿ ಪರಾರಿಯಾಗಿದ್ದಾನೆ. ಮಂಕಾಗಿದ್ದ ಬಾಲಕಿಯನ್ನು ಪೋಷಕರು ವಿಚಾರಿಸಿದಾಗ ಕೃತ್ಯವನ್ನು ತಿಳಿಸಿದ್ದು, ಕೂಡಲೇ ಪೊಲೀಸರಿಗೆ ದೂರು ನೀಡಿದ್ದಾರೆ. ಬಾಲಕಿಯನ್ನು ವೈದ್ಯಕೀಯ ತಪಾಸಣೆಗೊಳಪಡಿಸಿದ ಪೊಲೀಸರು, ತನಿಖೆ ಕೈಗೊಂಡಿದ್ದಾರೆ.
ಒಂದು ಕಮೆಂಟನ್ನು ಹಾಕಿ