ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ವೇಳಾಪಟ್ಟಿ ಪ್ರಕಟ

Karnataka to hold local body elections on August 29th

02-08-2018

ಬೆಂಗಳೂರು: ರಾಜ್ಯದ 105 ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ವೇಳಾಪಟ್ಟಿ ಘೋಷಣೆಯಾಗಿದ್ದು, ಚುನಾವಣೆಗೆ ಆಗಸ್ಟ್ 29 ರಂದು ಮುಹೂರ್ತ ನಿಗದಿಯಾಗಿದೆ. ಈ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ತಕ್ಷಣದಿಂದಲೇ ನೀತಿ ಸಂಹಿತೆ ಜಾರಿಗೆ ಬಂದಿದೆ.

ರಾಜ್ಯ ಚುನಾವಣಾ ಆಯೋಗದ ಆಯುಕ್ತ ಪಿ.ಎನ್.ಶ್ರೀನಿವಾಸಾಚಾರಿ ಸುದ್ದಿಗೋಷ್ಠಿಯಲ್ಲಿ ವೇಳಾಪಟ್ಟಿ ಪ್ರಕಟಿಸಿ, ಸೆಪ್ಟೆಂಬರ್ 1 ರಂದು ಮತ ಎಣಿಕೆ ನಡೆಯಲಿದೆ. 29 ನಗರ ಸಭೆ, 53 ಪುರಸಭೆ ಹಾಗೂ 23 ಪಟ್ಟಣ ಪಂಚಾಯತ್‍ಗಳಿಗೆ ಮತದಾನ ನಡೆಯಲಿದೆ. ಆಯಾ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಮಾತ್ರ ನೀತಿ ಸಂಹಿತೆ ಅನ್ವಯವಾಗಲಿದೆ ಎಂದರು.

ನಾಮಪತ್ರ ಸಲ್ಲಿಕೆಗೆ ಆಗಸ್ಟ್ 17ರಂದು ಕೊನೆಯ ದಿನವಾಗಿದ್ದು, ಆ.18 ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಉಮೇದುವಾರಿಕೆ ಹಿಂಪಡೆಯಲು ಆಗಸ್ಟ್ 20 ಕೊನೆಯ ದಿನವಾಗಿದ್ದು, ಅಗತ್ಯ ಇರುವ ಕಡೆ 29ರಂದು ಮತದಾನ ನಡೆಯಲಿದೆ. ಅಗತ್ಯಬಿದ್ದರೆ ಮರು ಮತದಾನ ಆ.31ರಂದು ನಡೆಯಲಿದೆ. ಸೆಪ್ಟಂಬರ್ 1ರಂದು ಮತ ಎಣಿಕೆ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು.

ನಗರ ಸಭೆಗೆ ಸ್ಪರ್ಧಿಸುವ ಅಭ್ಯರ್ಥಿಯ ಚುನಾವಣಾ ವೆಚ್ಚ 2 ಲಕ್ಷ ರೂ.ಗೆ ಮಿತಿಗೊಳಿಸಲಾಗಿದೆ. ಪುರಸಭೆಗೆ ಸ್ಪರ್ಧಿಸುವ ಅಭ್ಯರ್ಥಿಗೆ 1.5 ಲಕ್ಷ ಹಾಗೂ ಪಟ್ಟಣ ಪಂಚಾಯತ್ ಅಭ್ಯರ್ಥಿಗೆ 1 ಲಕ್ಷ ರೂ.ಗೆ ಮಿತಿಗೊಳಿಸಲಾಗಿದೆ ಎಂದರು.

ಎರಡು ಹಂತದಲ್ಲಿ ಚುನಾವಣೆ : ರಾಜ್ಯದಲ್ಲಿ ಒಟ್ಟು 208 ನಗರ ಸ್ಥಳೀಯ ಸಂಸ್ಥೆಗಳಿದ್ದು, ಅವುಗಳ ಪೈಕಿ 108 ಸಂಸ್ಥೆಗಳ ಅವಧಿ ಸೆಪ್ಟಂಬರ್‍ ಗೆ ಮುಕ್ತಾಯಗೊಳ್ಳಲಿದೆ. ಅವುಗಳ ಪೈಕಿ 105 ಕ್ಕೆ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದ್ದು, ಉಳಿದ 100 ನಗರ ಸ್ಥಳೀಯ ಸಂಸ್ಥೆಗಳಿಗೆ ಮುಂದಿನ 2019ರ ಮಾರ್ಚ್ ತಿಂಗಳಲ್ಲಿ ಚುನಾವಣೆ ನಡೆಯಲಿದೆ ಎಂದು ತಿಳಿಸಿದರು.

ಚುನಾವಣೆಗೆ ಸಕಲ ಸಿದ್ಧತೆ ಕೈಗೊಳ್ಳಲಾಗಿದ್ದು, ಈಗಾಗಲೇ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ. ನಗರಸಭೆಯಲ್ಲಿ ಒಟ್ಟು 20,06,708, ಪುರಸಭೆಯಲ್ಲಿ 12,76,754 ಹಾಗೂ ಪಟ್ಟಣ ಪಂಚಾಯತ್‍ಗಳಲ್ಲಿ 3,20,729 ಮಂದಿ ಮತದಾರರಿದ್ದಾರೆ. ಒಟ್ಟಾರೆ 36 ಲಕ್ಷದ 3 ಸಾವಿರದ 691 ಮಂದಿ ಮತದಾರರು ತಮ್ಮ ಹಕ್ಕು ಚಲಾಯಿಸಲು ಅರ್ಹತೆ ಪಡೆದಿದ್ದಾರೆ. ಇವರಲ್ಲಿ 17 ಲಕ್ಷದ 96 ಸಾವಿರದ 1 ಮಂದಿ ಮಹಿಳೆಯರು ಇದ್ದಾರೆ ಎಂದು ಅವರು ಮಾಹಿತಿ ನೀಡಿದರು.

ಬಿಗಿ ಭದ್ರತೆ : ಅಗಸ್ಟ್ ತಿಂಗಳಾಂತ್ಯಕ್ಕೆ ಎಲ್ಲಾ ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಭದ್ರತೆಗಾಗಿ 36 ಸಾವಿರ ಭದ್ರತಾ ಸಿಬ್ಬಂದಿಯನ್ನು ನೇಮಿಸಲಾಗುವುದು. ಮತದಾನಕ್ಕೆ ಇದೇ ಮೊದಲ ಬಾರಿಗೆ ವಿದ್ಯುನ್ಮಾನ ಯಂತ್ರ (ಇವಿಎಂ)ಗಳನ್ನು ಬಳಸಲಾಗುತ್ತಿದೆ.

ಚುನಾವಣೆಗಾಗಿ 7 ಮಂದಿ ಐಎಎಸ್ ಅಧಿಕಾರಿಗಳನ್ನು ವಿಶೇಷ ಚುನಾವಣಾ ವೀಕ್ಷಕರನ್ನಾಗಿ ನೇಮಿಸಲಾಗಿದೆ. 25 ಮಂದಿ ಕೆಎಎಸ್ ಅಧಿಕಾರಿಗಳನ್ನು ಚುನಾವಣಾ ವೀಕ್ಷಕರಾಗಿ ಮತ್ತು ಸಾಮಾನ್ಯ ವೀಕ್ಷಕರಾಗಿ 30ಮಂದಿ ಲೆಕ್ಕ ಪರಿಶೋಧಕರನ್ನು ನಿಯೋಜನೆ ಮಾಡಲಾಗಿದೆ. ನೋಟಾ ಸೌಲಭ್ಯವನ್ನು ಒದಗಿಸಲಾಗಿದ್ದು, ಅಭ್ಯರ್ಥಿಗಳ ಹೆಸರಿನ ಮುಂದೆ ಅವರ ಭಾವಚಿತ್ರವನ್ನು ಅಳವಡಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.


ಸಂಬಂಧಿತ ಟ್ಯಾಗ್ಗಳು

p.n.srinivasachari Election ಚುನಾವಣೆ ಪರಿಶೋಧಕ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ