ಉ.ಕರ್ನಾಟಕದ ಹಲವೆಡೆ ಬಂದ್ ಗೆ ಸಿಕ್ಕಿಲ್ಲ ಬೆಂಬಲ!

in many district of uttara karnataka no support for bandh!

02-08-2018

ಬೆಳಗಾವಿ: ಪ್ರತ್ಯೇಕ ರಾಜ್ಯಕ್ಕಾಗಿ ಉತ್ತರ ಕರ್ನಾಟಕ ಬಂದ್ ಗೆ ಕರೆ ನೀಡಿದ್ದು ಉತ್ತರ ಕರ್ನಾಟಕದ ಹಲವೆಡೆ ಬಂದ್ ವಿರೋಧಿಸಿಯೇ ಪ್ರತಿಭಟನೆಗಳು ನಡೆದಿವೆ. ಬೆಳಗಾವಿಯ ಚಿಕ್ಕೋಡಿಯಲ್ಲೂ ಬಂದ್ ಗೆ ಬೆಂಬಲ ದೊರೆಯಲಿಲ್ಲ. ಎಂದಿನಂತೆ ಸಂಚಾರ, ವ್ಯಾಪಾರ-ವಹಿವಾಟು, ಶಾಲಾ-ಕಾಲೇಜುಗಳು ಹಾಗೂ ಆಸ್ಪತ್ರೆಗಳು ಕಾರ್ಯ ನಿರ್ವಹಿಸುತ್ತಿದ್ದವು.

ಬಳ್ಳಾರಿಯಲ್ಲಿ ಕರವೇ ನಾರಾಯಣಗೌಡ ಬಣದಿಂದ ಉತ್ತರ ಕರ್ನಾಟಕ ಪ್ರತ್ಯೇಕ ಕೂಗನ್ನು ವಿರೋಧಿಸಿವೆ. ಅಖಂಡ ಕರ್ನಾಟಕ ಉಳಿವಿಗಾಗಿ ಒತ್ತಾಯಿಸಿರುವ ಕರವೇ ಕಾರ್ಯಕರ್ತರು, ಕರವೇ ಜಿಲ್ಲಾಧ್ಯಕ್ಷ ಚಾನಾಳ್ ಶೇಖರ್ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಅಭಿವೃದ್ಧಿ ಹೆಸರಲ್ಲಿ ಇಬ್ಭಾಗ ಬೇಡ. ಡಾ.ನಂಜುಡಪ್ಪ ವರದಿಯನ್ನು ಜಾರಿ ಮಾಡುವಂತೆ ಒತ್ತಾಯಿಸಿದ್ದಾರೆ.

ಕಲಬುರಗಿಯಲ್ಲೂ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯ ಕನ್ನಡ ಸೈನ್ಯ ಸಂಘಟನೆ ಕಾರ್ಯಕರ್ತರು, ಉತ್ತರ ಕರ್ನಾಟಕ ಬಂದ್ ಖಂಡಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಅಖಂಡ ಕರ್ನಾಟಕಕ್ಕೆ ಒತ್ತಾಯ ಮಾಡಿದ್ದು, ಪ್ರತ್ಯೇಕತೆ ಪರ ಕೂಗುವವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

ರಾಮನಗರದಲ್ಲೂ, ಪ್ರತ್ಯೇಕ ರಾಜ್ಯ ವಿಚಾರಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಕುಳಿತ ಕರವೇ ಕಾರ್ಯಕರ್ತರು ಪ್ರತ್ಯೇಕತೆಯನ್ನು ವಿರೋಧಿಸಿದ್ದಾರೆ. ಅಖಂಡ ಕರ್ನಾಟಕದ ಅಭಿವೃದ್ದಿಯೇ ನಮ್ಮ ಗುರಿ ಎಂದು ಘೋಷಣೆ ಕೂಗಿದ್ದಾರೆ. ಪ್ರತಿಭಟನೆಯಲ್ಲಿ ಕರವೇ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಭಾಗಿಯಾಗಿದ್ದರು. ರಾಜ್ಯ ಒಡೆಯುವ ಭ್ರಷ್ಟ ರಾಜಕಾರಣಿಗಳಿಗೆ ಧಿಕ್ಕಾರ ಎಂದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 


ಸಂಬಂಧಿತ ಟ್ಯಾಗ್ಗಳು

bandh uttar karnataka ಬೆಂಬಲ ಹೆದ್ದಾರಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ