ಉ.ಕರ್ನಾಟಕ ಬಂದ್ ಗೆ ಬಹುತೇಕ ಸಂಘಟನೆಗಳ ವಿರೋಧ!

police high security at uttara karnataka 13 districts

01-08-2018

ಬೆಂಗಳೂರು: ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯಕ್ಕಾಗಿ ಒತ್ತಾಯಿಸಿ ಉತ್ತರ ಕರ್ನಾಟಕ ಹೋರಾಟ ಸಮಿತಿ 13 ಜಿಲ್ಲೆಗಳಲ್ಲಿ ನಾಳೆ ಕರೆ ನೀಡಿರುವ ಬಂದ್ ಹಿನ್ನೆಲೆಯಲ್ಲಿ ಅಹಿತಕರ ಘಟನೆಗಳು ನಡೆಯದಂತೆ ವ್ಯಾಪಕ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.

ಬಂದ್‍ಗೆ ಬಹುತೇಕ ಸಂಘಟನೆಗಳ ಬೆಂಬಲ ವ್ಯಕ್ತವಾಗಿಲ್ಲ. ಬಹುತೇಕ ಸಂಘಟನೆಗಳು ಬಂದ್‍ಗೆ ವಿರೋಧ ವ್ಯಕ್ತಪಡಿಸಿವೆ. ಜೊತೆಗೆ ಜನ ಉತ್ತರ ಕರ್ನಾಟಕ ಭಾಗದಿಂದ ಬಂದ್ ಪರ ಹಾಗೂ ವಿರೋಧ ಅಭಿಪ್ರಾಯಗಳು ಸಹ ಕೇಳಿಬಂದಿವೆ. ಈ ಮಧ್ಯೆ ಉತ್ತರ ಕರ್ನಾಟಕ ರೈತ ಸಂಘದ ಅಧ್ಯಕ್ಷ ಬಸವರಾಜ ಕರಿಗಾರ ಬಂದ್ ಕರೆಯನ್ನು ವಾಪಾಸ್ ಪಡೆಯುವುದಿಲ್ಲ. 25ಕ್ಕೂ ಹೆಚ್ಚು ಸಂಘಟನೆಗಳು ಬಂದ್‍ಗೆ ಬೆಂಬಲ ವ್ಯಕ್ತಪಡಿಸಿವೆ. ಬಂದ್ ನಡೆಯುವುದು ಶತ ಸಿದ್ಧ ಎಂದು ಹೇಳಿದ್ದಾರೆ.

ಆದರೆ, ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಬಂದ್‍ಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಹಾಸನದಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿ, ಅಖಂಡ ಕರ್ನಾಟಕದ ಪರವಾಗಿ ರಾಜ್ಯಸರ್ಕಾರ ಕಾರ್ಯನಿರ್ವಹಿಸುತ್ತಿದ್ದು, ರಾಜಕೀಯ ಉದ್ದೇಶಕ್ಕಾಗಿ ರಾಜ್ಯ ವಿಭಜನೆಗೆ ಪ್ರಚೋದನೆ ನೀಡುವುದು ಸೂಕ್ತವಲ್ಲ. ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ರಾಜ್ಯದ ಬೆಳವಣಿಗೆಗೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆಂದು ಹೇಳಿದರು.

ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ ಖರ್ಗೆ ಬೆಂಗಳೂರಿನಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿ ಸಮಗ್ರ ಕರ್ನಾಟಕದ ಪರಿಕಲ್ಪನೆ ಇರುವವರು ವಿಭಜನೆಗೆ ಬೆಂಬಲ ನೀಡುವುದಿಲ್ಲ. ಬೀದರ್ ನಿಂದ ಚಾಮರಾಜನಗರದವರೆಗೆ ಏಕೀಕೃತ ಕರ್ನಾಟಕ ಇರಬೇಕು ಎಂಬುದು ನಾಡಿನ ಜನರ ಆಶಯವಾಗಿದೆ. ಇದಕ್ಕನುಗುಣವಾಗಿ ಮೈತ್ರಿ ಸರ್ಕಾರ ಕಾರ್ಯನಿರ್ವಹಿಸಲಿದೆ ಎಂದು ಹೇಳಿದರು.

ಜೆಡಿಎಸ್ ನಾಯಕ ಹಾಗೂ ಮಾಜಿ ಶಾಸಕ ಕೋನರೆಡ್ಡಿ ಮಾತನಾಡಿ, ಬಂದ್‍ಗೆ ಬಿಜೆಪಿ ನಾಯಕರು ಪರೋಕ್ಷವಾಗಿ ಬೆಂಬಲ ನೀಡಿದರೆ, ಬಂದ್ ಯಶಸ್ವಿಯಾಗುತ್ತದೆ. ಇಲ್ಲವಾದಲ್ಲಿ ಯಾವುದೇ ಸಂಘಟನೆ ಹಾಗೂ ಜನ ಸಮುದಾಯದಿಂದ ಬಂದ್‍ಗೆ ಪೂರಕ ಬೆಂಬಲ ಸಿಕ್ಕಿಲ್ಲ. ಆದರೂ ಬೆಂಬಲ ಹಿಂಪಡೆಯುವಂತೆ ಸಂಘಟನೆ ಮುಖಂಡರಿಗೆ ಪಕ್ಷದ ಪರವಾಗಿ ಮನವಿ ಮಾಡಿರುವುದಾಗಿ ತಿಳಿಸಿದರು.

 


ಸಂಬಂಧಿತ ಟ್ಯಾಗ್ಗಳು

Strike Protest ಏಕೀಕೃತ ಕೋನರೆಡ್ಡಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ