ಅಕ್ರಮ ಸಂಪಾದನೆಗೆ ಈತ ಮಾಡಿದ್ದೇನು ಗೊತ್ತಾ?

Internet calls fraud: ccb police arrested one

01-08-2018

ಬೆಂಗಳೂರು: ಅಂತರರಾಷ್ಟ್ರೀಯ ಅಂತರ್ಜಾಲ ಕರೆಗಳನ್ನು ಸ್ಥಳೀಯ ಕರೆಗಳಿಗೆ ಮಾರ್ಪಾಟು ಮಾಡಿ ದೂರ ಸಂಪರ್ಕ ಸಂಸ್ಥೆಗಳಿಗೆ ಲಕ್ಷಾಂತರ ರೂಗಳ ನಷ್ಟವುಂಟು ಮಾಡುತ್ತಿದ್ದ ಖತರ್ನಾಕ್ ಆರೋಪಿಯನ್ನು ಕೇಂದ್ರ ಅಪರಾಧ ವಿಭಾಗ(ಸಿಸಿಬಿ)ದ ಪೊಲೀಸರು ಬಂಧಿಸಿದ್ದಾರೆ.

ಬಿಸ್ಮಿಲ್ಲಾ ನಗರದ ತಮೀಜ್ ಉಲ್ಲಾ (38) ಬಂಧಿತ ಆರೋಪಿಯಾಗಿದ್ದು, ಈತನಿಂದ 2 ಲಕ್ಷ ನಗದು, ಕಂಪನಿ ಹೆಸರಿಲ್ಲದ 2 ರೌಟರ್, ಇದರಲ್ಲಿ ಒಂದು ಚಾಲನಾ ಸ್ಥಿತಿಯಲ್ಲಿದ್ದು ಅದರಲ್ಲಿ 32 ಸಿಮ್‍ಗಳಿವೆ, ಇದರ ಜೊತೆಗೆ ತಲಾ 32 ಬಿಎಸ್‍ಎನ್‍ಎಲ್, ರಿಲಯನ್ಸ್ ಸಿಮ್‍ಗಳು, 1 ಟಿಪಿ ಲಿಂಕ್, 2 ಮಾನಿಟರ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.

ನಗರದಲ್ಲಿ ಅಂತರಾಷ್ಟ್ರೀಯ ಅಂತರ್ಜಾಲ ಕರೆಗಳನ್ನು ಸ್ಥಳೀಯ ಕರೆಗಳಿಗೆ ಮಾರ್ಪಾಡು ಮಾಡುವ ಜಾಲದ ಹರಡಿರುವ ಮಾಹಿತಿ ಸಂಗ್ರಹಿಸಿ ಕಾರ್ಯಾಚರಣೆ ನಡೆಸಿದಾಗ ಬಿಸ್ಮಿಲ್ಲಾ ನಗರದ ಮನೆಯೊಂದರಲ್ಲಿ ಕೃತ್ಯ ನಡೆಯುತ್ತಿರುವುದು ಬೆಳಕಿಗೆ ಬಂದಿದ್ದು, ಕೂಡಲೇ ದಾಳಿ ನಡೆಸಿ ಆರೋಪಿಯನ್ನು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಬಾಂಗ್ಲಾದಿಂದ ಸಂಪರ್ಕ: ಆರೋಪಿಯು ಟೆಲಿಫೋನ್ ಎಕ್ಸ್ ಚೇಂಜ್ ನೆಟ್‍ ವರ್ಕ್ ಹಾಗೂ ಇಂಟರ್ ನೆಟ್‍ಗೆ ಅಕ್ರಮ ಸಂಪರ್ಕ ಕಲ್ಪಿಸಿ ಬಾಂಗ್ಲಾದ ಸುಭೋಚ್ ಎಂಬಾತನ ನೆರವಿನಿಂದ ಬಾಂಗ್ಲಾ ದೇಶದ ಸುಭೋಚ್ ಟೆಲಿಕಾಂ ಕಂಪನಿಯ ಸಂಪರ್ಕದೊಂದಿಗೆ ಇಂಟರ್ ನೆಟ್‍ ಮೂಲಕ ವಿದೇಶದಿಂದ ಬರುವ ಅಂತರರಾಷ್ಟ್ರೀಯ ಕರೆಗಳನ್ನು ಇಂಟರ್ ನೆಟ್‍ ಸಂಪರ್ಕದ ಮೂಲಕ ಸಿಮ್ ಬಾಕ್ಸ್, ಮೋಡೆಮ್ ಇತ್ಯಾದಿ ವಸ್ತುಗಳನ್ನು ಬಳಸಿಕೊಳ್ಳುತ್ತಿದ್ದ.

ಅದರಿಂದ ಬಿಎಸ್‍ಎಲ್‍ನಿಂದ ಖರೀದಿಸಿದ್ದ ಅನ್‍ಲಿಮಿಟೆಡ್ ಯೋಜನೆಯ ಸಹಾಯದಿಂದ ಅಂತರರಾಷ್ಟ್ರೀಯ ಅಂತರ್ಜಾಲ ಕರೆಗಳನ್ನು ಸ್ಥಳೀಯ ಕರೆಗಳನ್ನಾಗಿ ಪರಿವರ್ತಿಸಿ ಕಡಿಮೆ ದರಕ್ಕೆ ಕೆಲವು ಸಂಸ್ಥೆ, ಕಂಪನಿಯ ಗ್ರಾಹಕರಿಗೆ ಕರೆ ಮಾಡಲು ಅನುಕೂಲ ಮಾಡಿಕೊಟ್ಟು ಅಕ್ರಮ ಸಂಪಾದನೆಯಲ್ಲಿ ತೊಡಗಿರುವುದು ತನಿಖೆಯಲ್ಲಿ ಕಂಡು ಬಂದಿದೆ.

ಇದೇ ರೀತಿ ಇನ್ನು ಕೆಲವು ಕಡೆಗಳಲ್ಲಿ ಅಂತರರಾಷ್ಟ್ರೀಯ ಅಂತರ್ಜಾಲ ಕರೆಗಳನ್ನು ಸ್ಥಳೀಯ ಕರೆಗಳಿಗೆ ಮಾರ್ಪಾಟು ಮಾಡಿ ಅಕ್ರಮ ನಡೆಸುತ್ತಿರುವ ಮಾಹಿತಿಯಿದ್ದು ಕಾರ್ಯಾಚರಣೆ ತೀವ್ರಗೊಳಿಸಲಾಗಿದೆ ಎಂದು ಹೇಳಿದ್ದಾರೆ. ಆರೋಪಿಯ ವಿರುದ್ಧ ಸುದ್ದಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Internet Calls ಅಂತರರಾಷ್ಟ್ರೀಯ ಅಂತರ್ಜಾಲ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ