ಮುಂದಿನ ಸಾರ್ವತ್ರಿಕ ಚುನಾವಣೆಗೆ ಕಾರ್ಯತಂತ್ರ !

Kannada News

30-05-2017 251

ಬೆಂಗಳೂರು:– ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷದ ಪ್ರಣಾಳಿಕೆ, ಕಾರ್ಯತಂತ್ರ ರೂಪಿಸುವ ಮತ್ತು ಪ್ರಚಾರದ ಸಾರಥ್ಯಕ್ಕೆ ಪ್ರಮುಖರನ್ನು ನೇಮಿಸಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ. ಇಂದು ಬೆಳಗ್ಗೆ ಹಲವಾರು ಕಾಂಗ್ರೆಸ್ ಮುಖಂಡರು ಪರಮೇಶ್ವರ್ ಅವರನ್ನು ಭೇಟಿ ಮಾಡಿ ಕೆಪಿಸಿಸಿ ಅಧ್ಯಕ್ಷರಾಗಿ ಮುಂದುವರೆಸುವ ಬಗ್ಗೆ ಎಐಸಿಸಿ ಇಂದು ಪ್ರಕಟಿಸುವ ಹಿನ್ನೆಲೆಯಲ್ಲಿ ಶುಭಾಶಯ ಹೇಳಲು ಕಾರ್ಯಕರ್ತರ ದಂಡೇ ನೆರೆದಿತ್ತು. ಇದರ ನಡುವೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರಿಗೆ ನೀಡಿರುವ ಆಶ್ವಾಸನೆಗಳನ್ನು ಈಡೇರಿಸುವತ್ತ ಸರ್ಕಾರ ಯಶಸ್ವಿಯಾಗಿದೆ, ಮುಂದೆಯೂ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರ ಹಿಡಿಯುವುದು ನಿಶ್ಚಿತವಾಗಿದ್ದು, ಇದಕ್ಕೆ ಸಂಘಟಿತರಾಗಿ ಹೋರಾಡುವುದು ಅಗತ್ಯವಿದೆ ಎಂದರು. ಇದಕ್ಕಾಗಿ ಪ್ರಣಾಳಿಕೆ ರೂಪಿಸುವ ಸಮಿತಿಗೆ ಒಬ್ಬ ಅಧ್ಯಕ್ಷರು ಹಾಗೂ ಪ್ರಚಾರ ಕಾರ್ಯವೈಖರಿ ನಿರ್ವಹಿಸಲು ಮತ್ತೊಬ್ಬ ಅಧ್ಯಕ್ಷರನ್ನು ನೇಮಕ ಮಾಡಲು ನಿರ್ಧರಿಸಲಾಗಿದೆ. ಹೈಕಮಾಂಡ್‍ನಿಂದ ಬರುವ ನಿರ್ದೇಶನ ಪಾಲಿಸಲು ನಾವೆಲ್ಲರೂ ಬದ್ಧರಾಗಿದ್ದೇವೆ. ನಿನ್ನೆ ದೆಹಲಿಯಲ್ಲಿ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಎಲ್ಲರೊಂದಿಗೂ ಪ್ರತ್ಯೇಕವಾಗಿ ಚರ್ಚೆ ನಡೆಸಿದ್ದಾರೆ. ಹೈಕಮಾಂಡ್ ಸೂಚಿಸಿದರೆ ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ತಾವು ಸಿದ್ಧ ಎಂದು ಪರೋಕ್ಷವಾಗಿ ಹೇಳಿದ್ದಾರೆ. ಕೇಂದ್ರ ಸರ್ಕಾರ ಕಸಾಯಿಖಾನೆಗಳಿಗೆ ಗೋವುಗಳನ್ನು ಮಾರಾಟ ಮಾಡುವುದನ್ನು ನಿಷೇಧಿಸಿರುವ ಸಂಬಂಧ ರಾಜ್ಯಸರ್ಕಾರ ಎಲ್ಲಾ ಸಾಧಕ-ಬಾಧಕಗಳನ್ನು ಪರಿಶೀಲಿಸಿ ಕ್ರಮಕೈಗೊಳ್ಳಲಿದೆ ಎಂದು ಪರಮೇಶ್ವರ್ ಇದೇ ವೇಳೆ ತಿಳಿಸಿದ್ದಾರೆ.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ