ಪ್ರಸಿದ್ಧ ಸೋಮನಾಥಪುರ ದೇವಾಲಯದ ಮುಂದೆ ಪ್ರತಿಭಟನೆ!

villagers protest in front of somnathpura temple

01-08-2018

ಮೈಸೂರು: ಭಾರತೀಯ ಪುರಾತತ್ವ ಇಲಾಖೆ ವಿರುದ್ಧ ಗ್ರಾಮಸ್ಥರ ಪ್ರತಿಭಟನೆ ಹಿನ್ನೆಲೆ, ಪ್ರಸಿದ್ಧ ಸೋಮನಾಥಪುರ ದೇವಾಲಯ ಬಂದ್ ಆಗಿದೆ. ಇದರಿಂದ ಪ್ರವೇಶ ದ್ವಾರದ ಗೇಟ್ ಗೆ ಬೀಗ ಹಾಕಲಾಗಿದ್ದು, ದೇವಾಲಯದ ವೀಕ್ಷಣೆಗೆ ತೆರಳಿದ ಪ್ರವಾಸಿಗರು ನಿರಾಸೆಯಿಂದ ವಾಪಸ್ ಬರುವಂತಾಗಿದೆ.

ಪುರಾತತ್ವ ಇಲಾಖೆ ವಿಧಿಸಿರುವ ನಿರ್ಬಂಧದ ವಿರುದ್ಧ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ. ಪುರಾತತ್ವ ಇಲಾಖೆ ನಿರ್ಬಂಧದಿಂದ ವಿವಿಧ ಯೋಜನೆಯಡಿ ಆಶ್ರಯ ಮನೆಗಳ ನಿರ್ಮಾಣಕ್ಕೆ ಅನುಮತಿ ನಿರಾಕರಿಸಲಾಗಿದೆ. ಇದನ್ನು ವಿರೋಧಿಸಿ ವಿಶ್ವವಿಖ್ಯಾತ ಚನ್ನಕೇಶವ ದೇವಾಲಯದ ಮುಂದೆ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದಾರೆ ಗ್ರಾಮಸ್ಥರು.

2010ರಲ್ಲಿ ಚನ್ನಕೇಶವ ದೇವಾಲಯದ ಸುತ್ತ 100 ಮೀಟರ್ ವರೆಗೆ ನಿರ್ಬಂಧಿತ ಪ್ರದೇಶ ಮತ್ತು 300 ಮೀಟರ್ ವರೆಗೂ ನಿಯಂತ್ರಿತ ಪ್ರದೇಶವೆಂದು ಪುರಾತತ್ವ ಇಲಾಖೆ ಘೋಷಣೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ಮನೆ ನಿರ್ಮಾಣಕ್ಕೆ ಅನುಮತಿ ನೀಡುತ್ತಿಲ್ಲ. ಕೇಂದ್ರ ಸರ್ಕಾರದ ಈ ನಿಯಮದಿಂದ ತಮಗೆ ಸಾಕಷ್ಟು ತೊಂದರೆಯಾಗುತ್ತಿದೆ ಎಂದು ಗ್ರಾಮಸ್ಥರು ತಮ್ಮ ಅಳಲು ತೋಡಿಕೊಂಡಿದ್ದಾರೆ. ಶಿಥಿಲಗೊಂಡಿರುವ ಮನೆಗಳ ಪುನರ್ ನಿರ್ಮಾಣಕ್ಕೂ ಅವಕಾಶವಿಲ್ಲದಂತಾಗಿದೆ. ಇಡೀ ಸೋಮನಾಥಪುರ ಗ್ರಾಮದಲ್ಲೇ ಯಾವ ಕಾಮಗಾರಿಗಳೂ ನಡೆಯುವಂತಿಲ್ಲ ಎಂಬಂತಾಗಿದೆ. ತಮ್ಮ ಸಮಸ್ಯೆ ಬಗೆಹರಿಯುವ ತನಕ ಹೋರಾಟ ಕೈಬಿಡುವುದಿಲ್ಲವೆಂದು ಗ್ರಾಮಸ್ಥರ ಬಿಗಿಪಟ್ಟು ಹಿಡಿದು, ದೇವಸ್ಥಾನದ ಮುಂದೆ ಧರಣಿ ನೆಡೆಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಅಶ್ವಿನ್ ಗ್ರಾಮಸ್ಥರೊಂದಿಗೆ ಚರ್ಚೆ ನಡೆಸಿದ್ದಾರೆ, ಆದರೆ ಗ್ರಾಮಸ್ಥರು ಮಾತ್ರ ಪಟ್ಟು ಸಡಿಲಿಸಲಿಲ್ಲ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ