ಜನತಾ ದರ್ಶನದ ಅರ್ಜಿಗಳನ್ನು ನಿರ್ಲಕ್ಷ್ಯ ಮಾಡಬೇಡಿ: ಸಿಎಂ

Do not neglect the Janata darshan applications: CM

31-07-2018

ಬೆಂಗಳೂರು: ಮಾನವೀಯತೆಯ ದೃಷ್ಟಿಯಿಂದ ವಿದ್ಯಾವಂತ ಅಂಗವಿಕಲರಿಗೆ ಜಿಲ್ಲಾ ಮಟ್ಟದಲ್ಲಿ ಉದ್ಯೋಗ ದೊರಕಿಸಿಕೊಡುವ ಪ್ರಯತ್ನ ಮಾಡುವಂತೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚಿಸಿದರು.

ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ಮುಂದುವರೆದ ಸಭೆಯಲ್ಲಿ ಮಾತನಾಡಿದ ಅವರು, ಜನತಾ ದರ್ಶನದಲ್ಲಿ ಸಾರ್ವಜನಿಕರಿಂದ ಸ್ವೀಕರಿಸುವ ದೂರುಗಳನ್ನು ಜಿಲ್ಲಾಧಿಕಾರಿಗಳಿಗೆ ರವಾನಿಸಿದ ಸಂದರ್ಭದಲ್ಲಿ ಹಿಂಬರಹ ನೀಡಿದರೆ ಮಾತ್ರ ಪ್ರಕರಣ ಮುಕ್ತಾಯವಾಗಿದೆ ಎಂದು ಪರಿಗಣಿಸಲಾಗುವುದು. ಜಿಲ್ಲಾಧಿಕಾರಿಗಳ ಹಂತದಲ್ಲಿಯೇ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಿ. ಮುಖ್ಯಮಂತ್ರಿಗಳು ಮತ್ತೊಬ್ಬ ಅಧಿಕಾರಿಗೆ ಅರ್ಜಿಯನ್ನು ವರ್ಗಾಯಿಸಿ ವಿಳಂಬ ಮಾಡುವುದು ಸರಿಯಲ್ಲ. ಜನತಾ ದರ್ಶನದ ಅರ್ಜಿಗಳನ್ನು ನಿರ್ಲಕ್ಷ್ಯ ಮಾಡಬೇಡಿ ಎಂದು ಸೂಚಿಸಿದರು.

ತಿಂಗಳಿಗೊಮ್ಮೆ ಜನ ಸ್ಪಂದನ ಕಾರ್ಯಕ್ರಮ ಏರ್ಪಡಿಸಬೇಕು. ಅಲ್ಪಸಂಖ್ಯಾತರ ಇಲಾಖೆಯ ಮುಖ್ಯಮಂತ್ರಿಗಳ ಅಭಿವೃದ್ಧಿ ಯೋಜನೆಯಡಿಯಲ್ಲಿ (ಅಲ್ಪಸಂಖ್ಯಾತರ ಕಾಲೊನಿ ಅಭಿವೃದ್ಧಿ) ಕಲಬುರಗಿ ಹಾಗೂ ಕೋಲಾರ ಜಿಲ್ಲೆಗಳಲ್ಲಿ ಕಡಿಮೆ ಸಾಧನೆಯಾಗಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳಿಂದ ಮಾಹಿತಿ ಕೇಳಿದಾಗ, ಅನುಷ್ಠಾನ ಮಾಡುವ ಅಧಿಕಾರಿಗಳ ಹುದ್ದೆಗಳು ಖಾಲಿ ಇದ್ದು, ಅವುಗಳನ್ನು ಭರ್ತಿ ಮಾಡಿದಲ್ಲಿ ಪ್ರಗತಿ ಸಾಧಿಸಬಹುದೆಂದು ಜಿಲ್ಲಾಧಿಕಾರಿಗಳು ಸಭೆಗೆ ತಿಳಿಸಿದರು.

ಖಾಲಿ ಇರುವ ಪ್ರಮುಖ ಹುದ್ದೆಗಳ ಹಾಗೂ ಇನ್ನಿತರ ಮಾಹಿತಿಯ ಪಟ್ಟಿಯನ್ನು ಮುಖ್ಯಕಾರ್ಯದರ್ಶಿಗಳಿಗೆ ಇ-ಮೇಲ್ ಮುಖಾಂತರ ಎರಡು ದಿನಗಳೊಳಗೆ ಕಳುಹಿಸುವಂತೆ ಮುಖ್ಯಮಂತ್ರಿಗಳು ಸೂಚಿಸಿದರು. 

ಸಮಾಜ ಕಲ್ಯಾಣ ಇಲಾಖೆಯಡಿ ವಿದ್ಯಾರ್ಥಿ ನಿಲಯ ಮುಂತಾದ ಕಟ್ಟಡಗಳನ್ನು ಕಟ್ಟಲು ತೋರುವ ಆಸಕ್ತಿ ನಿರ್ವಹಣೆಗೆ ತೋರಬೇಕು. ವಿದ್ಯಾರ್ಥಿಗಳಿಗೆ ಪೂರೈಸುವ ಎಲ್ಲ ಸಾಮಾಗ್ರಿಗಳು ಗುಣಮಟ್ಟದಿಂದ ಕೂಡಿರಬೇಕು. ವಿದ್ಯಾರ್ಥಿ ನಿಲಯಗಳಲ್ಲಿ ಅಡುಗೆಯನ್ನು ಶುಚಿಯಾಗಿ ತಯಾರಿಸುವಂತೆ ನಿಗಾವಹಿಸಿ, ಶೌಚಾಲಯಗಳ ಸ್ವಚ್ಛತೆಯನ್ನು ಕಾಪಾಡಿ ಎಂದು ಮುಖ್ಯಮಂತ್ರಿಗಳು ಸೂಚಿಸಿದರು.

ತಿಂಗಳಿಗೊಮ್ಮೆಯಾದರೂ ವಿದ್ಯಾರ್ಥಿನಿಲಯಗಳಿಗೆ ಅನಿರೀಕ್ಷಿತ ಭೇಟಿ ನೀಡುವಂತೆ ತಿಳಿಸಿದ ಅವರು, ಸಮರ್ಪಕವಾಗಿ ಕಾರ್ಯನಿರ್ವಹಿಸದ ವಾರ್ಡನ್‍ ಗಳನ್ನು ಅಮಾನತುಗೊಳಿಸಿ ಹಾಗೂ ಸಿಬ್ಬಂದಿ ನೇಮಕಕ್ಕೆ ಪ್ರಥಮ ಆದ್ಯತೆ ನೀಡುವಂತೆ ಸೂಚಿಸಿದರು. ವಿದ್ಯಾರ್ಥಿ ನಿಲಯಗಳಿಗೆ ವಾರ್ಡನ್‍ ಗಳನ್ನು ನೇಮಕ ಮಾಡುವ ಪ್ರಕ್ರಿಯೆಗಳಲ್ಲಿ ಆ ಕೆಲಸದ ಬಗ್ಗೆ ಇರುವ ಆಸಕ್ತಿಯನ್ನೂ ಪರಿಶೀಲಿಸುವಂತೆ  ಮುಖ್ಯಮಂತ್ರಿಗಳು ಸಲಹೆ ನೀಡಿದರು.

ಮಾದರಿ ಸಾರ್ವಜನಿಕ ವಿದ್ಯಾರ್ಥಿ ನಿಲಯ ಪರಿಕಲ್ಪನೆ : ಸಭೆಯಲ್ಲಿ ಭಾಗವಹಿಸಿದ್ದ ಕೃಷಿ ಸಚಿವ ಶಿವಶಂಕರ ರೆಡ್ಡಿ ಅವರು ಎಲ್ಲ ಸಮುದಾಯಗಳಿಗೂ ಪ್ರವೇಶಾವಕಾಶವಿರುವ ಒಂದು ಸಾಮಾನ್ಯ ವಿದ್ಯಾರ್ಥಿ ನಿಲಯ ಪರಿಕಲ್ಪನೆ ಇಂದಿನ ದಿನಗಳಲ್ಲಿ ಪ್ರಸ್ತುತ. ಇದರಿಂದ ಬಾಲ್ಯದಿಂದಲೇ ತಾವು ನಿರ್ದಿಷ್ಟ ಸಮುದಾಯಕ್ಕೆ ಸೇರಿದವರು ಎಂಬ ಸಂಕುಚಿತ ಭಾವನೆ ಮಕ್ಕಳಲ್ಲಿ ಮೂಡುವುದನ್ನು ತಪ್ಪಿಸಿದಂತಾಗುತ್ತದೆ ಎಂದರು. ಅವರ ಸಲಹೆಯನ್ನು ಸಭೆಯಲ್ಲಿದ್ದ ಬಹುತೇಕ ಸಚಿವರು ಸ್ವಾಗತಿಸಿದರು. ಇದೊಂದು ಸ್ವಾಗತಾರ್ಹ ಸಲಹೆ ಎಂದ ಮುಖ್ಯಮಂತ್ರಿಗಳು ಎಲ್ಲ 30 ಜಿಲ್ಲೆಗಳಲ್ಲಿ ಇದನ್ನು ಪ್ರಾಯೋಗಿಕವಾಗಿ ಕೈಗೊಳ್ಳಲು ಮುಂದಿನ  15 ದಿನಗಳಲ್ಲಿ ಪ್ರಸ್ತಾವನೆಯನ್ನು ಸಲ್ಲಿಸಲು ಸೂಚಿಸಿದರು. 

ಗುಂಪು ವಿದ್ಯಾರ್ಥಿ ನಿಲಯಗಳ ಪರಿಕಲ್ಪನೆಯಡಿ ಈಗಾಗಲೇ ಹಲವು ಜಿಲ್ಲಾಧಿಕಾರಿಗಳು ಕ್ರಮ ಕೈಗೊಂಡಿದ್ದು, ಪ್ರಾಯೋಗಿಕವಾಗಿ ಮಾದರಿ ಸಾರ್ವಜನಿಕ ವಿದ್ಯಾರ್ಥಿ ನಿಲಯ ಸ್ಥಾಪನೆಗೆ ಅಧಿಕಾರಿಗಳು ಸಹಮತ ವ್ಯಕ್ತಪಡಿಸಿದರು.

ನಿಗದಿತ ಸಮಯದಲ್ಲಿ ನಗರ ಮತ್ತು ಗ್ರಾಮೀಣ ಮನೆಗಳ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಬೇಕೆಂದು ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚಿಸಿದರು. ಹೈದ್ರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಕುರಿತಂತೆ ಚರ್ಚಿಸಿದ ಮುಖ್ಯಮಂತ್ರಿಗಳು ಆ ಭಾಗದಲ್ಲಿ ಅನೇಕ ಹುದ್ದೆಗಳು ಭರ್ತಿಯಾಗದೆ ಉಳಿದಿದ್ದು, ಗಮನಕ್ಕೆ ಬಂದಿದೆ. ಇನ್ನಿತರ ಲೋಪದೋಷಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಪ್ರತ್ಯೇಕ ಸಭೆಗಳನ್ನು ಕರೆಯಲಾಗುವುದು ಎಂದರು.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ