ಉ.ಕ.ಪ್ರತ್ಯೇಕತೆಗೆ ಪ್ರತಿಭಟನೆ, ರಾಜಕೀಯ ಪ್ರೇರಿತ: ಡಿಸಿಎಂ

DCM parameshwar reaction on uttar karnataka protesters

31-07-2018

ಬೆಂಗಳೂರು: ಪ್ರತ್ಯೇಕ ಉತ್ತರ ಕರ್ನಾಟಕ ವಿಚಾರದಲ್ಲಿ ನಡೆಯುತ್ತಿರುವ ಹೋರಾಟ ರಾಜಕೀಯ ಪ್ರೇರಿತ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.  ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಭಿವೃದ್ಧಿಯಲ್ಲಿ ವ್ಯತ್ಯಾಸವಾಗಿದ್ದರೆ ಅದನ್ನು ಸರಿಪಡಿಸಬಹುದು. ಅದನ್ನು ಬಿಟ್ಟು ಪ್ರತ್ಯೇಕತೆಯ ಧ್ವನಿ ಎತ್ತುತ್ತಿರುವುದು ಸರಿಯಲ್ಲ. ನೆಲ, ಜಲ, ಭಾಷೆ ವಿಷಯವಾಗಿ ವಿಭಜನೆ ಸರಿಯಲ್ಲ ಎಂದರು.

ಕನ್ನಡ ಮಾತನಾಡುವವರು ಒಂದು ರಾಜ್ಯದಲ್ಲಿ ಇರಬೇಕು ಎಂಬ ಉದ್ದೇಶದಿಂದ ಏಕೀಕರಣವಾಯಿತು. ಏಕೀಕರಣಕ್ಕಾಗಿ ಹಲವಾರು ಮಹನೀಯರು ಹೋರಾಟ ಮಾಡಿ ಜೀವ ತ್ಯಾಗ ಮಾಡಿದ್ದಾರೆ. ಈಗ ಇಂತಹ ಹೋರಾಟಗಳು ಏಕೀಕರಣದ ಉದ್ದೇಶವನ್ನು ಕಡೆಗಣಿಸಿದಂತಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಈ ಹಿಂದೆ ಎಸ್.ಎಂ.ಕೃಷ್ಣ ಸರ್ಕಾರ ಪ್ರಾದೇಶಿಕ ಅಸಮತೋಲನ ನಿವಾರಣೆಗಾಗಿ ನಂಜುಂಡಪ್ಪ ಆಯೋಗವನ್ನು ನೇಮಿಸಿತ್ತು. ಆಯೋಗ 114 ತಾಲ್ಲೂಕುಗಳು ಹಿಂದುಳಿದಿರುವ ಬಗ್ಗೆ ವರದಿ ನೀಡಿತ್ತು. ಅದನ್ನು ಆಧರಿಸಿ ಸರ್ಕಾರಗಳು ಹಲವಾರು ಯೋಜನೆಗಳನ್ನು ರೂಪಿಸಿ ಅನುಷ್ಠಾನಕ್ಕೆ ತಂದಿವೆ. ಆದರೂ ಅಭಿವೃದ್ಧಿ ವಿಷಯದಲ್ಲಿ ವ್ಯತ್ಯಾಸಗಳಾಗಿರುವುದು ಕಂಡು ಬಂದಿದೆ. ಈ ಬಗ್ಗೆ ಚರ್ಚಿಸಿ ಸಮಸ್ಯೆ ಬಗೆಹರಿಸಬಹುದು. ಅದರ ಬದಲು ಪ್ರತ್ಯೇಕತೆಯ ಅಪಸ್ವರ ಸರಿಯಲ್ಲ ಎಂದು ಹೇಳಿದರು.

ಶಿರೂರು ಮಠದ ಸ್ವಾಮೀಜಿ ಸಾವಿನ ಪ್ರಕರಣದ ಮರಣೋತ್ತರ ಪರೀಕ್ಷೆ ವರದಿ ಪೊಲೀಸರ ಕೈ ಸೇರಿದೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಎಫ್‍ಎಸ್‍ಎಲ್ ವರದಿಯನ್ನು ನಿರೀಕ್ಷಿಸಲಾಗುತ್ತಿದೆ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ಬೆಂಗಳೂರಿನಲ್ಲಿ ನಿರ್ಮಿಸಲು ಉದ್ದೇಶಿಸಿದ್ದ ಎಲಿವೇಟೆಡ್ ಕಾರಿಡಾರ್ ಯೋಜನೆಯನ್ನು ಕೈಬಿಟ್ಟಿಲ್ಲ. ನಿನ್ನೆ ನಡೆದ ಸಭೆಯಲ್ಲಿ ಯೋಜನೆ ವಿಷಯವಾಗಿ ಪ್ರಾತ್ಯಕ್ಷಿಕೆಯನ್ನು ಪರಿಶೀಲನೆ ಮಾಡಲಾಗಿದೆ. ಯೋಜನೆಯ ಸ್ವರೂಪ, ಅಂದಾಜು ವೆಚ್ಚ ಮತ್ತು ಅದರ ಪರಿಣಾಮಗಳ ಬಗ್ಗೆ ಅಧ್ಯಯನ ನಡೆಸಬೇಕು ಮತ್ತು ಆರ್ಥಿಕ ಸ್ಥಿತಿಗತಿಯನ್ನು ಆಧರಿಸಿ ಯೋಜನೆಯನ್ನು ಅನುಷ್ಠಾನಗೊಳಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದರು.


ಸಂಬಂಧಿತ ಟ್ಯಾಗ್ಗಳು

G.parameshwar North Karnataka ಅನುಷ್ಠಾನ ಸ್ಥಿತಿಗತಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ